ADVERTISEMENT

ಮರಾಠರಿಗೆ ಮೀಸಲಾತಿ ಮಹಾರಾಷ್ಟ್ರ ಸರ್ಕಾರ ಒಪ್ಪಿಗೆ: ಒಬಿಸಿ ಸಮುದಾಯ ಕಿಡಿ

ಸಂಪುಟ ಸಭೆಗೆ ಗೈರಾದ ಒಬಿಸಿ ಪ್ರಮುಖ ನಾಯಕ, ಸಚಿವ ಭುಜಬಲ್ * ನಿರ್ಧಾರ ಸಮರ್ಥಿಸಿಕೊಂಡ ಸರ್ಕಾರ

ಪಿಟಿಐ
Published 3 ಸೆಪ್ಟೆಂಬರ್ 2025, 13:16 IST
Last Updated 3 ಸೆಪ್ಟೆಂಬರ್ 2025, 13:16 IST
<div class="paragraphs"><p>ಮೀಸಲಾತಿ(ಸಾಂಕೇತಿಕ ಚಿತ್ರ)</p></div>

ಮೀಸಲಾತಿ(ಸಾಂಕೇತಿಕ ಚಿತ್ರ)

   

ಮುಂಬೈ/ಛತ್ರಪತಿ ಸಂಭಾಜಿನಗರ: ಮರಾಠರಿಗೆ ಕುಣಬಿ ಜಾತಿ ಪ್ರಮಾಣಪತ್ರ ನೀಡಲು ಮಹಾರಾಷ್ಟ್ರ ಸರ್ಕಾರ ಒಪ್ಪಿಗೆ ನೀಡಿದ್ದಕ್ಕೆ ಹಿಂದುಳಿದ ವರ್ಗಗಳ (ಒಬಿಸಿ) ನಾಯಕರು ಅಸಮಾಧಾನಗೊಂಡಿದ್ದಾರೆ. ಜೊತೆಗೆ, ಒಬಿಸಿ ಸಂಘಟನೆಗಳು ಕೂಡ ಆಕ್ರೋಶ ಹೊರಹಾಕಿದ್ದು, ಸರ್ಕಾರದ ನಿರ್ಧಾರದ ವಿರುದ್ಧ ಬೀದಿಗಿಳಿಯುವುದಾಗಿ ಬುಧವಾರ ಎಚ್ಚರಿಕೆ ನೀಡಿವೆ.

‘ಮಾರಾಠಾವಾಡದ ಮರಾಠರಿಗೆ ಇನ್ನುಮುಂದೆ ಮೀಸಲಾತಿ ದೊರೆಯಲಿದೆ’ ಎಂದು ಮರಾಠಾ ಮೀಸಲಾತಿ ಹೋರಾಟಗಾರ ಮನೋಜ್‌ ಜರಾಂಗೆ ಅವರು ಬುಧವಾರ ಮತ್ತೊಮ್ಮೆ ಹೇಳಿದರು. ಆದರೆ, ಇತ್ತ ಒಬಿಸಿ ಸಮುದಾಯದ ಪ್ರಮುಖ ನಾಯಕ ಮತ್ತು ರಾಜ್ಯ ಸಚಿವ ಛಗನ್‌ ಭುಜಬಲ್‌ ಅವರು ಸಂಪುಟ ಸಭೆಗೆ ಹಾಜರಾಗಲಿಲ್ಲ. ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದನ್ನು ಇದು ಸೂಚಿಸಿತು.

ADVERTISEMENT

ಒಬಿಸಿ ಹೋರಾಟಗಾರ ಲಕ್ಷ್ಮಣ್‌ ಹಾಕೆ ಪ್ರತಿಕ್ರಿಯಿಸಿ, ‘ಕುಣಬಿ ಜಾತಿ ಪ್ರಮಾಣಪತ್ರವನ್ನು ಮರಾಠರಿಗೆ ನೀಡಬೇಕು ಎಂಬ ಬೇಡಿಕೆಯನ್ನು ಒಪ್ಪಿಕೊಳ್ಳಲು ಸರ್ಕಾರಕ್ಕೆ ಯಾವುದೇ ಹಕ್ಕು ಇಲ್ಲ. ಈ ನಿರ್ಧಾರದ ವಿರುದ್ಧ ಹಿಂದುಳಿದ ವರ್ಗದವರು ಬೀದಿಗೆ ಇಳಿಯುತ್ತೇವೆ. ಒಬಿಸಿ ಕೋಟಾ ವ್ಯವಸ್ಥೆಯನ್ನು ದುರ್ಬಲಗೊಳಿಸಿರುವ ಬಗ್ಗೆ ರಾಜಕೀಯ ನಾಯಕರು ವಿವರಣೆ ನೀಡಬೇಕು’ ಎಂದರು.

ಸಚಿವ ಭುಜಬಲ್‌ ಅವರು ಸಂಪುಟ ಸಭೆಗೆ ಗೈರಾದ ಕುರಿತು ಜರಾಂಗೆ ಅವರು ಪ್ರತಿಕ್ರಿಯಿಸಿ, ‘ಸಭೆಗೆ ಅವರು ಗೈರಾಗಿದ್ದಾರೆ ಎಂದರೆ ಅವರೊಬ್ಬ ಚತುರ ನಾಯಕ ಎಂದರ್ಥ. ಮೀಸಲಾತಿ ಪಡೆದುಕೊಳ್ಳುವಲ್ಲಿ ಮರಾಠಾ ಸಮುದಾಯವು ಯಶಸ್ವಿಯಾಗಿದೆ ಎಂಬುದನ್ನೂ ಇದು ಸೂಚಿಸುತ್ತದೆ’ ಎಂದರು.

ಆರೋಗ್ಯ ಸ್ಥಿರ: ‘ಜರಾಂಗೆ ಅವರ ಆರೋಗ್ಯವು ಸ್ಥಿರವಾಗಿದೆ. ಅವರ ರಕ್ತದಲ್ಲಿನ ಸಕ್ಕರೆ ಪ್ರಮಾಣವು ಕಡಿಮೆಯಾಗಿದೆ. ಅವರ ಮೂತ್ರಪಿಂಡವೂ  ಉತ್ತಮ ಸ್ಥಿತಿಯಲ್ಲಿದೆ’ ಎಂದು ಜರಾಂಗೆ ಅವರನ್ನು ಪರೀಕ್ಷಿಸುತ್ತಿರುವ ವೈದ್ಯರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.