ಲಕ್ಷ್ಮಣ ಹಾಕೆ
ಮುಂಬೈ: ಕುಣುಬಿ ಜಾತಿ ಪ್ರಮಾಣ ಪತ್ರ ನೀಡಬೇಕು ಎನ್ನುವ ಮರಾಠ ಸಮುದಾಯದ ಬೇಡಿಕೆಯನ್ನು ಒಪ್ಪಿಕೊಳ್ಳುವ ಯಾವುದೇ ಅಧಿಕಾರ ಮಹಾರಾಷ್ಟ್ರ ಸರ್ಕಾರಕ್ಕೆ ಇಲ್ಲ ಎಂದಿರುವ ಹಿಂದುಳಿದ ವರ್ಗಗಳ ನಾಯಕ ಲಕ್ಷ್ಮಣ ಹಾಕೆ, ಈ ನಿರ್ಧಾರದ ವಿರುದ್ಧ ಇತರ ಹಿಂದುಳಿದ ವರ್ಗದ ಸಮುದಾಯಗಳು ಬೀದಿಗಿಳಿಯಲಿವೆ ಎಂದು ಎಚ್ಚರಿಸಿದ್ದಾರೆ.
ಇತರ ಹಿಂದುಳಿದ ವರ್ಗಗಳ ಮೀಸಲಾತಿ ಕೋಟಾವನ್ನು ಯಾಕೆ ದುರ್ಬಲಗೊಳಿಸಲಾಗುತ್ತಿದೆ ಎನ್ನುವುದನ್ನು ರಾಜಕೀಯ ನಾಯಕರು ವಿವರಿಸಬೇಕು ಎಂದು ಹಾಕೆ ಒತ್ತಾಯಿಸಿದ್ದಾರೆ. ಮರಾಠರಿಗೆ ಒಬಿಸಿಯಡಿ ಮೀಸಲಾತಿ ಕಲ್ಪಿಸುವುದರ ವಿರುದ್ಧ ಹಾಕೆ ಹೋರಾಟ ಮಾಡುತ್ತಿದ್ದಾರೆ.
ಈ ಹಿಂದೆ ಮನೋಜ್ ಜಾರಂಗೆ ವಿರುದ್ಧ ಹಾಕೆ ಪ್ರತಿಭಟನೆಯನ್ನೂ ನಡೆಸಿದ್ದರು.
ಮರಾಠರಿಗೆ ಕುಣುಬಿ ಜಾತಿ ಪ್ರಮಾಣಪತ್ರ ನೀಡುವುದು ಸೇರಿದಂತೆ, ಮರಾಠ ಮೀಸಲಾತಿ ಹೋರಾಟಗಾರ ಮನೋಜ್ ಜಾರಂಗೆ ಅವರ ಹಲವು ಬೇಡಿಕೆಗಳನ್ನು ಮಹಾರಾಷ್ಟ್ರ ಸರ್ಕಾರ ಮಂಗಳವಾರ ಒಪ್ಪಿಕೊಂಡಿತ್ತು. ಹೀಗಾಗಿ ಐದು ದಿನಗಳ ಉಪವಾಸ ಸತ್ಯಾಗ್ರಹವನ್ನು ಜಾರಂಗೆ ಅಂತ್ಯಗೊಳಿಸಿದ್ದರು.
ಮರಾಠ ಸಮುದಾಯಕ್ಕೆ ಕುಣುಬಿ ಜಾತಿ ಪ್ರಮಾಣಪತ್ರ ನೀಡುವ ಬಗ್ಗೆ ಸಮಿತಿ ರಚನೆ ಮಾಡುವುದಾಗಿ ಮಹಾರಾಷ್ಟ್ರ ಸರ್ಕಾರ ಮಂಗಳವಾರ ಹೇಳಿದೆ.
ಮರಾಠಿಗರಿಗೆ ಕುಣುಬಿ ಬಾತಿ ಪ್ರಮಾಣಪತ್ರ ನೀಡುವ ಅಧಿಕಾರ ಸರ್ಕಾರಕ್ಕೆ ಇಲ್ಲ. ಮರಾಠರು ಸಾಮಾಜಿವಾಗಿ ಹಿಂದುಳಿದವರಲ್ಲ. ಅವರಿಗೆ ಮೀಸಲಾತಿ ನೀಡಬಾರದು ಎಂದು ಹಾಕೆ ಹೇಳಿದ್ದಾರೆ.
"ಹೈದರಾಬಾದ್ ಗೆಜೆಟಿಯರ್ ಬಂಜಾರರನ್ನು ಪರಿಶಿಷ್ಟ ಪಂಗಡ ಎಂದು ಹೇಳುತ್ತದೆ. ಸರ್ಕಾರ ಬಂಜಾರರಿಗೆ ಎಸ್‌ಟಿ ಮೀಸಲಾತಿ ನೀಡುತ್ತದೆಯೇ? ಒಂದನ್ನು ಪರಿಹರಿಸಲು ಹೋಗಿ ಸರ್ಕಾರ ಇತರ 10 ಸಮಸ್ಯೆಗಳನ್ನು ಸೃಷ್ಟಿಸಬಾರದು. ಒಬಿಸಿಗಳು ಮತ್ತು ವಿಜೆಎನ್‌ಟಿಗಳು (ವಿಮುಕ್ತ ಜಾತಿ ಮತ್ತು ಅಲೆಮಾರಿ ಬುಡಕಟ್ಟುಗಳು) ಬೀದಿಗಿಳಿಯುತ್ತವೆ" ಎಂದು ಹಾಕೆ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.