ಪ್ರವಾಹ ಪೀಡಿತ ಪ್ರದೇಶಗಳಿಗೆ ದೇವೇಂದ್ರ ಫಡಣವೀಸ್ ಭೇಟಿ
– ಪಿಟಿಐ ಚಿತ್ರ
ಮುಂಬೈ: ಮಹಾರಾಷ್ಟ್ರದ ಮಾರಾಠಾವಾಡ ಪ್ರಾಂತ್ಯದಲ್ಲಿ ಉಂಟಾಗಿರುವ ಪ್ರವಾಹದಿಂದ ಸಂತ್ರಸ್ತರಾಗಿರುವವರ ಪುನರ್ವಸತಿ ಕಾರ್ಯಕ್ಕೆ ಬೆಂಬಲ ನೀಡಲು ಆಡಳಿತರೂಢ ಬಿಜೆಪಿ, ಶಿವಸೇನಾ ಹಾಗೂ ಎನ್‌ಸಿಪಿ ಮೈತ್ರಿಕೂಟ ‘ಮಹಾಯುತಿ’ಯ ಶಾಸಕರು ಹಾಗೂ ಸಚಿವರು ಒಂದು ತಿಂಗಳ ವೇತನವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ದಾನ ಮಾಡಲಿದ್ದಾರೆ.
ತಮ್ಮ ಪಕ್ಷದ ಸಂಸದರೂ ಒಂದು ತಿಂಗಳ ವೇತನವನ್ನು ನೀಡಲಿದ್ದಾರೆ ಎಂದು ಬಿಜೆಪಿ ಹಾಗೂ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಪಕ್ಷ ಪ್ರತ್ಯೇಕವಾಗಿ ಹೇಳಿದೆ.
ಮರಾಠವಾಡ ಪ್ರಾಂತ್ಯದಲ್ಲಿ ಸುರಿದ ಭಾರಿ ಮಳೆಗೆ ಪ್ರವಾಹ ಉಂಟಾಗಿದ್ದು, ಸೋಲಾಪುರ ಜಿಲ್ಲೆಯಲ್ಲಿ ಕೃಷಿ, ಜಾನುವಾರು, ಮನೆಗಳು ಹಾಗೂ ಉದ್ಯಮಗಳಿಗೆ ಹಾನಿಯಾಗಿವೆ.
ಪ್ರವಾಹ ಪೀಡಿತ ಪ್ರದೇಶಗಳಿಗೆ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಹಾಗೂ ಉಪಮುಖ್ಯಮಂತ್ರಿಗಳಾದ ಏಕನಾಥ ಶಿಂದೆ ಹಾಗೂ ಅಜಿತ್ ಪವಾರ್ ಭೇಟಿ ನೀಡಿ, ಸಂತ್ರಸ್ತರೊಂದಿಗೆ ಮಾತುಕತೆ ನಡೆಸಿದ್ದಾರೆ.
ಸೋಲಾಪುರ ಹಾಗೂ ಲಾತೂರ್ ಜಿಲ್ಲೆಗಳಿಗೆ ಭೇಟಿ ನೀಡಿದ ಫಡಣವೀಸ್, ಸ್ಥಳೀಯರು ಹಾಗೂ ರೈತರೊಂದಿಗೆ ಮಾತುಕತೆ ನಡೆಸಿದ್ದಾರೆ. ಸೋಲಾಪುರದ ಕರ್ಮಲಾ ತಾಲ್ಲೂಕಿಗೆ ಭೇಟಿ ನೀಡಿ, ರೈತರಿಗೆ ಧೈರ್ಯ ತುಂಬಿದರು.
ಧಾರಾಶಿವ ಜಿಲ್ಲೆಗೆ ಶಿವಸೇನಾ ನಾಯಕ ತಾನಾಜಿ ಸಾವಂತ್ ಅವರರೊಂದಿಗೆ ಭೇಟಿ ನೀಡಿದ ಏಕನಾಥ ಶಿಂದೆ ಸ್ಥಳೀಯರೊಂದಿಗೆ ಚರ್ಚಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.