ADVERTISEMENT

ವಿವಾಹದ ಕಾನೂನುಬದ್ಧತೆ ಸಾಬೀತಿಗೆ ಆರ್ಯ ಸಮಾಜದ ಪತ್ರ ಸಾಲದು: ಅಲಹಾಬಾದ್ ಹೈಕೋರ್ಟ್

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2022, 15:46 IST
Last Updated 6 ಸೆಪ್ಟೆಂಬರ್ 2022, 15:46 IST
ಸಾಂದರ್ಭಿಕ ಚಿತ್ರ 
ಸಾಂದರ್ಭಿಕ ಚಿತ್ರ    

ಲಖನೌ: ‘ವಿವಾಹದ ಕಾನೂನುಬದ್ಧತೆಯನ್ನು ಸಾಬೀತುಪಡಿಸಲು ಆರ್ಯ ಸಮಾಜ ಸೊಸೈಟಿಯು ನೀಡುವ ವಿವಾಹ ಪ್ರಮಾಣಪತ್ರವು ಸಾಕಾಗುವುದಿಲ್ಲ’ ಎಂದು ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪಿನಲ್ಲಿ ಹೇಳಿದೆ.

ನ್ಯಾಯಮೂರ್ತಿ ಸೌರಭ್ ಶ್ಯಾಮ್ ಶಂಶೇರಿ ಅವರನ್ನೊಳಗೊಂಡ ಏಕಪೀಠವು ಪ್ರಕರಣವೊಂದರಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ವಜಾಗೊಳಿಸಿ ಈ ತೀರ್ಪು ನೀಡಿದೆ.

ಅರ್ಜಿದಾರರಾದ ಭೋಲಾ ಸಿಂಗ್ ಎಂಬುವವರು ತನ್ನ ಪತ್ನಿಯನ್ನು ಆಕೆಯ ತಂದೆಯು ಅಕ್ರಮವಾಗಿ ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆ. ನಮ್ಮ ಮದುವೆಯು ಧಾರ್ಮಿಕ ಸಂಪ್ರದಾಯಗಳಿಗೆ ಅನುಗುಣವಾಗಿ ನಡೆದಿದ್ದು, ಆರ್ಯಸಮಾಜವು ವಿವಾಹ ಪ್ರಮಾಣಪತ್ರವನ್ನು ನೀಡಿದೆ ಎಂದು ಪ್ರತಿಪಾದಿಸಿದ್ದರು.

ADVERTISEMENT

ಅರ್ಜಿದಾರರು ತಮ್ಮ ವಿವಾಹದ ಫೋಟೊಗಳನ್ನು ಹಾಗೂ ವಿವಾಹದ ನೋಂದಣಿ ಪ್ರಮಾಣಪತ್ರವನ್ನೂ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

‘ವಿವಿಧ ಆರ್ಯ ಸಮಾಜಗಳು ನೀಡಿರುವ ವಿವಾಹ ಪ್ರಮಾಣಪತ್ರಗಳಿಂದ ನ್ಯಾಯಾಲಯಗಳು ತುಂಬಿತುಳುಕುತ್ತಿದ್ದು,ಈ ನ್ಯಾಯಾಲಯ ಹಾಗೂ ಇತರ ಹೈಕೋರ್ಟ್‌ಗಳಲ್ಲಿ ವಿವಿಧ ವಿಚಾರಣೆಗಳ ಸಂದರ್ಭದಲ್ಲಿ ಇದನ್ನು ಗಂಭೀರವಾಗಿ ಪ್ರಶ್ನಿಸಲಾಗಿದೆ. ಸದರಿ ಸಂಸ್ಥೆಯು ಮದುವೆಗಳನ್ನು ಆಯೋಜಿಸುವಲ್ಲಿ ದಾಖಲಾತಿಗಳ ಅಸಲಿತನವನ್ನು ಪರಿಗಣಿಸಿಲ್ಲ. ಅಲ್ಲದೇ ವಿವಾಹವನ್ನು ನೋಂದಣಿ ಕೂಡಾ ಮಾಡಿಸಿಲ್ಲ. ಆರ್ಯ ಸಮಾಜವು ನೀಡರುವ ವಿವಾಹ ಪ್ರಮಾಣಪತ್ರದ ಆಧಾರದ ಮೇಲೆಯೇ ಮಾತ್ರ ಕಕ್ಷಿದಾರರು ಮದುವೆಯಾಗಿದ್ದಾರೆ ಎಂಬುದನ್ನು ಪರಿಗಣಿಸಲಾಗುವುದಿಲ್ಲ’ ಎಂದೂ ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಹೇಳಿದೆ.

ಕಕ್ಷಿದಾರರು ಕ್ರಿಮಿನಲ್ ಇಲ್ಲವೇ ಸಿವಿಲ್ ಕಾನೂನು ಅಡಿಯಲ್ಲಿ ಪರಿಹಾರಗಳನ್ನು ಪಡೆಯಬಹುದು ಎಂದೂ ನ್ಯಾಯಾಲಯವು ತಿಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.