ADVERTISEMENT

ವರ್ಚುವಲ್‌ ಮೂಲಕ ವಿವಾಹ ನೋಂದಣಿ: ದೆಹಲಿ ಹೈಕೋರ್ಟ್‌

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2021, 12:04 IST
Last Updated 11 ಸೆಪ್ಟೆಂಬರ್ 2021, 12:04 IST
ದೆಹಲಿ ಹೈಕೋರ್ಟ್‌
ದೆಹಲಿ ಹೈಕೋರ್ಟ್‌   

ನವದೆಹಲಿ (ಪಿಟಿಐ): ದಂಪತಿ ವರ್ಚುವಲ್‌ ಉಪಸ್ಥಿತಿಯ ಮೂಲಕವೂ ವಿವಾಹ ನೋಂದಾಯಿಸಿಕೊಳ್ಳಹುದು ಎಂದು ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ತಮ್ಮ ವಿವಾಹವನ್ನು ಇಲ್ಲಿ ನೋಂದಾಯಿಸಲು ಕೋರಿರುವ ಅಮೆರಿಕ ಮೂಲದ ಡಯಾನ್ ದಂಪತಿಯ ಅರ್ಜಿ ಆಲಿಸಿದ ನ್ಯಾಯಮೂರ್ತಿ ರೇಖಾ ಪಳ್ಳಿ, ಭೌತಿಕ ಉಪಸ್ಥಿತಿ ಕಡ್ಡಾಯವೆನ್ನುವಂತಿಲ್ಲ, ದಂಪತಿ ತಮ್ಮ ವಿವಾಹಗಳನ್ನು ಸುಲಭವಾಗಿ ನೋಂದಾಯಿಸಿಕೊಳ್ಳಲು ಸರಳ ಮಾರ್ಗಗಳನ್ನು ಪ್ರೋತ್ಸಾಹಿಸಬೇಕು ಎಂದು ಅಭಿಪ್ರಾಯಪಟ್ಟರು.

ಪ್ರಸ್ತುತ ಸಂದರ್ಭದಲ್ಲಿ ಕಾನೂನು ವ್ಯಾಖ್ಯಾನದ ಖುದ್ದು ಉಪಸ್ಥಿತಿಯನ್ನು ಮುಂದಿಟ್ಟು ನಾಗರಿಕರು ತಮ್ಮ ಹಕ್ಕುಗಳನ್ನು ಚಲಾಯಿಸದಂತೆ ನಿರ್ಬಂಧಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ADVERTISEMENT

‘ವಿವಾಹ ನೋಂದಣಿ ಆದೇಶದ ಷರತ್ತು 4ರಲ್ಲಿನ ‘ಖುದ್ದು ಹಾಜರು’ ಎಂಬ ಪದ ವಿಡಿಯೊ ಕಾನ್ಫರೆನ್ಸಿಂಗ್‌ನಂತಹ ಸುಲಭವಾಗಿ ಬಳಸಬಹುದಾದ ಮಾರ್ಗ ದುರ್ಬಲಗೊಳಿಸುತ್ತದೆ. ಹಾಗಾಗಿ ಅದನ್ನು ವಿಡಿಯೊ ಕಾನ್ಫರೆನ್ಸಿಂಗ್ ಮೂಲಕ ಖುದ್ದು ಉಪಸ್ಥಿತಿ ಎಂದು ಓದಿಕೊಳ್ಳಬೇಕು ಎಂಬ ತೀರ್ಮಾನಕ್ಕೆ ಬರಲು ನನಗೆ ಯಾವುದೇ ಹಿಂಜರಿಕೆ ಇಲ್ಲ’ ಎಂದು ನ್ಯಾಯಮೂರ್ತಿ ಅವರು ಗುರುವಾರ ನೀಡಿರುವ ಆದೇಶದಲ್ಲಿ ಹೇಳಿದ್ದಾರೆ.

ಅಮೆರಿಕದಲ್ಲಿ ಡಯಾನ್‌ ದಂಪತಿಗೆ ವಿವಾಹ ನೋಂದಣಿ ಪ್ರಮಾಣ ಪತ್ರವಿಲ್ಲದ ಕಾರಣಕ್ಕೆ ಗ್ರೀನ್‌ ಕಾರ್ಡ್‌ ಪಡೆಯಲು ಅಡ್ಡಿಯಾಗಿತ್ತು. ವಿವಾಹ ಪ್ರಮಾಣ ಪತ್ರಕ್ಕೆ ಇಲ್ಲಿನ ಸ್ಥಳೀಯ ಪ್ರಾಧಿಕಾರ ಸಂಪರ್ಕಿಸಿ, ವರ್ಚುವಲ್‌ ಮೂಲಕ ಹಾಜರಾಗಲು ದಂಪತಿ ಅರ್ಜಿ ಸಲ್ಲಿಸಿದ್ದರು. ಆದರೆ, ಖುದ್ದು ಉಪಸ್ಥಿತಿ ಕಡ್ಡಾಯವೆಂದ ಸಂಬಂಧಿಸಿದ ಇಲಾಖೆಯು ದಂಪತಿಯ ಕೋರಿಕೆ ತಿರಸ್ಕರಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.