ADVERTISEMENT

ನಾನಿನ್ನೂ ಬದುಕಿದ್ದೇನೆ: ಪತ್ನಿಗೆ ಕರೆ ಮಾಡಿದ ‘ಹುತಾತ್ಮ’ ಯೋಧ!

​ಪ್ರಜಾವಾಣಿ ವಾರ್ತೆ
Published 17 ಜೂನ್ 2020, 13:18 IST
Last Updated 17 ಜೂನ್ 2020, 13:18 IST
ಘರ್ಷಣೆಯಲ್ಲಿ ಹುತಾತ್ಮರಾದ ಸೈನಿಕರೊಬ್ಬರ ಮೃತದೇಹವನ್ನು ಲೇಹ್‌ನಲ್ಲಿರುವ ಸೋನಮ್‌ ನೊರ್ಬು ಮೆಮೊರಿಯಲ್‌ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕೊಂಡೊಯ್ಯುತ್ತಿರುವ ಸೈನಿಕರು  –ರಾಯಿಟರ್ಸ್‌ ಚಿತ್ರ  
ಘರ್ಷಣೆಯಲ್ಲಿ ಹುತಾತ್ಮರಾದ ಸೈನಿಕರೊಬ್ಬರ ಮೃತದೇಹವನ್ನು ಲೇಹ್‌ನಲ್ಲಿರುವ ಸೋನಮ್‌ ನೊರ್ಬು ಮೆಮೊರಿಯಲ್‌ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕೊಂಡೊಯ್ಯುತ್ತಿರುವ ಸೈನಿಕರು  –ರಾಯಿಟರ್ಸ್‌ ಚಿತ್ರ     

ಪಟ್ನಾ: ಭಾರತ–ಚೀನಾ ಗಡಿಯಲ್ಲಿ ನಡೆದ ಸಂಘರ್ಷದಲ್ಲಿ ಹುತಾತ್ಮರಾದರು ಎನ್ನಲಾದಯೋಧರೊಬ್ಬರು, ಬುಧವಾರ ತನ್ನ ಪತ್ನಿಗೆ ಕರೆ ಮಾಡಿ ‘ನಾನಿನ್ನೂ ಬದುಕಿದ್ದೇನೆ’ ಎಂದು ಹೇಳಿದ ಘಟನೆ ಬಿಹಾರದಲ್ಲಿ ನಡೆದಿದೆ.

ಘರ್ಷಣೆಯಲ್ಲಿಬಿಹಾರದ ಸರಣ್‌ ಜಿಲ್ಲೆಯ ಸೈನಿಕ ಸುನಿಲ್‌ ರೈ ಹುತಾತ್ಮರಾಗಿದ್ದಾರೆ ಎಂದು ಮಂಗಳವಾರ ಕುಟುಂಬಕ್ಕೆವಿಷಯ ತಿಳಿಸಲಾಗಿತ್ತು. ವಿಷಯ ತಿಳಿದುಸೈನಿಕನ ಕುಟುಂಬವೇ ದುಖಃದ ಮಡುವಿನಲ್ಲಿತ್ತು. ಆದರೆ, ಬುಧವಾರ ದೂರವಾಣಿಯಲ್ಲಿ ಸುನಿಲ್‌ ಮಾತನ್ನು ಕೇಳಿ, ಕುಟುಂಬ ನಿಟ್ಟುಸಿರುಬಿಟ್ಟಿದೆ.

ಗೊಂದಲಕ್ಕೆ ಕಾರಣವೇನು?: ಗಡಿಯಲ್ಲಿ ನಿಯೋಜನೆಗೊಂಡಿದ್ದ ಸೈನಿಕರ ಪೈಕಿ ಇಬ್ಬರ ಹೆಸರು ಸುನಿಲ್‌ ರೈ ಎಂದಿತ್ತು. ಜೊತೆಗೆ ಸೈನಿಕರಿಬ್ಬರ ತಂದೆಯ ಹೆಸರೂ ಸುಖ್‌ದಿಯೊ ರೈ ಎಂದೇ ಆಗಿತ್ತು. ಹುತಾತ್ಮನಾಗಿದ್ದ ಯೋಧ ಸುನಿಲ್‌ ರೈ ಅವರು ಲಡಾಖ್‌ನಲ್ಲಿ ನಿಯೋಜನೆಗೊಂಡಿದ್ದರು. ಘರ್ಷಣೆಯಲ್ಲಿ ಇವರು ಮೃತಪಟ್ಟಿದ್ದರು. ಸರಣ್‌ ಜಿಲ್ಲೆಯ ಸೈನಿಕ ಸುನಿಲ್‌ ರೈ ಲೇಹ್‌ನಲ್ಲಿ ನಿಯೋಜನೆಗೊಂಡಿದ್ದರು.ಮಂಗಳವಾರ ಸಂಜೆ ಸರಣ್‌ ಜಿಲ್ಲೆಯ ಸುನಿಲ್‌ ರೈ ಪತ್ನಿ ಮೇನಕಾಗೆ ಕರೆ ಮಾಡಿದ್ದ ಸೇನಾ ಅಧಿಕಾರಿಗಳು, ಸುನಿಲ್‌ ಮೃತಪಟ್ಟಿರುವುದನ್ನು ತಿಳಿಸಿದ್ದರು.

ADVERTISEMENT

‘ನಾನು ನನ್ನ ಗಂಡನೊಂದಿಗೆ ಮಾತನಾಡಿದ್ದೇನೆ. ದೇವರು ನನಗೆ ಮತ್ತೊಂದು ಜೀವನ ನೀಡಿದ್ದಾರೆ’ ಎಂದು ಮೇನಕಾ ಹೇಳಿದರು.

ಗಾಲ್ವನ್‌ ಕಣಿವೆಯಲ್ಲಿ ನಡೆದ ಸಂಘರ್ಷದಲ್ಲಿ ಹುತಾತ್ಮರಾದ ಯೋಧರ ಪೈಕಿ ಮೂವರು ಬಿಹಾರ ಮೂಲದವರಾಗಿದ್ದಾರೆ. ‘ಈ ಸೈನಿಕರ ಪಾರ್ಥಿವ ಶರೀರಗಳನ್ನು ವಿಶೇಷ ವಿಮಾನದ ಮುಖಾಂತರ ತರಲಾಗುವುದು, ಸರ್ಕಾರಿ ಗೌರವದ ಬಳಿಕ ಮೃತದೇಹಗಳನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗುವುದು’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.