ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಹಾಗೂ ಈಶಾನ್ಯದಲ್ಲಿ ಶಾಂತಿ ಪುನಃಸ್ಥಾಪಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೊಳ್ಳುವುದು ವಿಚಿತ್ರವಾಗಿದೆ ಎಂದು ಕಾಂಗ್ರೆಸ್ ಮಂಗಳವಾರ ಹೇಳಿದೆ.
ಅವರ ಹೇಳಿಕೆಯು ತಮ್ಮ ಬೃಹತ್ ವೈಫಲ್ಯಗಳಿಂದ ಗಮನವನ್ನು ಬೇರೆಡೆ ಸೆಳೆಯುವ ಉದ್ದೇಶವನ್ನು ಹೊಂದಿದೆ. 'ಗರಿಷ್ಠ ಹೆಮ್ಮೆ, ಕನಿಷ್ಠ ಸಾಧನೆ'ಗಳನ್ನು ಹೊಂದಿರುವ ಕೇಂದ್ರ ಗೃಹ ಸಚಿವರನ್ನು ಭಾರತ ಎಂದಿಗೂ ಕಂಡಿಲ್ಲ ಎಂದು ಪಕ್ಷ ಕಿಡಿಕಾರಿದೆ.
ಸೋಮವಾರ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದ ಅಮಿತ್ ಶಾ, 'ಮೋದಿ ಸರ್ಕಾರದ 11 ವರ್ಷಗಳು ಸಾರ್ವಜನಿಕ ಸೇವೆಗೆ ದೃಢಸಂಕಲ್ಪ, ಪ್ರಯತ್ನ ಮತ್ತು ಸಮರ್ಪಣೆಯ ಸುವರ್ಣಯುಗ ಎಂದು ಹೇಳಿದ್ದರು. ಜಮ್ಮು-ಕಾಶ್ಮೀರ ಮತ್ತು ಈಶಾನ್ಯದಲ್ಲಿ ಶಾಂತಿ ನೆಲೆಸಿದೆ. ಭಾರತ ಭಯೋತ್ಪಾದಕರ ನೆಲೆಗಳಿಗೆ ನುಗ್ಗಿ ಅವರ ದಾಳಿಗೆ ಪ್ರತಿಕ್ರಿಯಿಸುತ್ತಿದೆ. ಇದು ಮೋದಿ ಸರ್ಕಾರದ ಅಡಿಯಲ್ಲಿ ಭಾರತದ ಬದಲಾಗುತ್ತಿರುವ ಚಿತ್ರಣವನ್ನು ತೋರಿಸುತ್ತದೆ' ಎಂದು ಹೇಳಿದ್ದರು.
ಅವರ ಈ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಮಣಿಪುರ ಹೊತ್ತಿ ಉರಿಯುತ್ತಲೇ ಇದೆ. ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ. ರಾಜ್ಯದ ಜನ ಹತಾಶೆ ಮತ್ತು ಸಂಕಟ ಅನುಭವಿಸುತ್ತಿದ್ದಾರೆ. ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ನಡೆದ ಕ್ರೂರ ಭಯೋತ್ಪಾದಕ ದಾಳಿಗೆ ಕಾರಣರಾದ ಭಯೋತ್ಪಾದಕರನ್ನು ಇನ್ನೂ ಪತ್ತೆಹಚ್ಚಲಾಗಿಲ್ಲ. ಅಮಿತ್ ಶಾ ಅವರ ಹೇಳಿಕೆಗಳು ವಿಚಿತ್ರವಾಗಿವೆ. ಅವರು ತಮ್ಮ ವೈಫಲ್ಯಗಳಿಂದ ಗಮನವನ್ನು ಬೇರೆಡೆ ಸೆಳೆಯುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.