ADVERTISEMENT

ಆಸಾರಾಂಗೆ ಜಾಮೀನು ವಿರೋಧಿಸಿ ‘ಸುಪ್ರೀಂ’ಗೆ ಅರ್ಜಿ

ಬೆಂಬಲಿಗರು ಹತ್ಯೆ ಮಾಡುವ ಆತಂಕ ವ್ಯಕ್ತಪಡಿಸಿದ ಸಂತ್ರಸ್ತೆಯ ತಂದೆ

​ಪ್ರಜಾವಾಣಿ ವಾರ್ತೆ
Published 10 ಜೂನ್ 2021, 16:30 IST
Last Updated 10 ಜೂನ್ 2021, 16:30 IST
ಆಸಾರಾಂ
ಆಸಾರಾಂ   
ನವದೆಹಲಿ: ಅತ್ಯಾಚಾರ ಆರೋಪಿ, ಸ್ವಯಂಘೋಷಿತ ದೇವಮಾನವ ಆಸಾರಾಂ ಬಾಪುವಿಗೆ ಸುಪ್ರೀಂಕೋರ್ಟ್‌ ಜಾಮೀನು ನೀಡಿರುವುದನ್ನು ವಿರೋಧಿಸಿ, ಅತ್ಯಾಚಾರಕ್ಕೊಳಗಾದ ಮಗುವಿನ ತಂದೆ
ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಆಸಾರಾಂ ಜಾಮೀನಿನ ಮೇಲೆ ಬಿಡುಗಡೆಯಾದರೆ ಆತನ ಅನುಯಾಯಿಗಳು ಅಥವಾ ಆತನ ಆಪ್ತರು ನನ್ನ ಮಗು ಮತ್ತು ನನ್ನ ಕುಟುಂಬವನ್ನು ಕೊಲ್ಲಬಹುದು ಎಂದು ಸಂತ್ರಸ್ತೆಯ ತಂದೆ ಆತಂಕ ತೋಡಿಕೊಂಡಿದ್ದಾರೆ.
ವಕೀಲ ಉತ್ಸವ ಬೈನ್ಸ್ ಅವರ ಮೂಲಕ ಸಲ್ಲಿಸಿದ ಮನವಿಯಲ್ಲಿ ‘ಆಸಾರಾಂ ಬಾಪು ಹೆಚ್ಚು ಪ್ರಭಾವಶಾಲಿ ಮತ್ತು ರಾಜಕೀಯ ನಂಟು ಹೊಂದಿದ್ದಾನೆ. ದೇಶದಾದ್ಯಂತ ಲಕ್ಷಾಂತರ ಅಂಧ ಅನುಯಾಯಿಗಳ ಬಲವನ್ನು ಆತ ಹೊಂದಿದ್ದಾನೆ. ಪ್ರತ್ಯಕ್ಷದರ್ಶಿ ಸಾಕ್ಷಿಗಳ ಮೇಲೆ ಹಲ್ಲೆ ನಡೆಸಿ ಕೊಲ್ಲಲು ಕಾರ್ತಿಕ್ ಹಲ್ದಾರ್‌ನನ್ನು ಆಸಾರಾಂ ನೇಮಿಸಿದ್ದ. ಇದನ್ನು ಕಾರ್ತಿಕ್‌ ಪೊಲೀಸರ ಎದುರು ತಪ್ಪೊಪ್ಪಿಕೊಂಡಿದ್ದಾನೆ’ ಎಂದು ಉಲ್ಲೇಖಿಸಿದ್ದಾರೆ.
‘ಆರೋಪಿಗೆ ಜಾಮೀನು ನೀಡಿದರೆ, ವಿಚಾರಣೆಯ ಸಮಯದಲ್ಲಿ ನಾನು ಮತ್ತು ನನ್ನ ಕುಟುಂಬ ಸದಸ್ಯರಿಗೆ ಅಪಾಯ ಎದುರಾಗಲಿದೆ. ಉತ್ತರಪ್ರದೇಶ ರಾಜ್ಯ ಸರ್ಕಾರ ಭದ್ರತೆಯನ್ನು ಕಡಿಮೆ ಮಾಡಿದೆ. ಸಾಕ್ಷಿದಾರರು ಹತ್ಯೆಯ ದಾಳಿಗೆ ಒಳಗಾಗುವ ಅಪಾಯವಿದೆ’ ಎಂದು ಅರ್ಜಿಯಲ್ಲಿ ದೂರಲಾಗಿದೆ.
‘ಈಗಾಗಲೇ 10 ಪ್ರತ್ಯಕ್ಷದರ್ಶಿ ಸಾಕ್ಷಿಗಳ ಮೇಲೆ ಹಲ್ಲೆ ನಡೆದಿದೆ. ಇವರಲ್ಲಿ ಮೂವರು ಕೊಲೆಯಾಗಿದ್ದಾರೆ. ಆರೋಪಿ ಜಾಮೀನು ಸಿಕ್ಕಿದರೆ, ಅತ್ಯಾಚಾರ ಸಂತ್ರಸ್ತೆ ಮತ್ತು ಆಕೆಯ ಕುಟುಂಬದ ಸದಸ್ಯರು ಹಾಗೂ ಪ್ರತ್ಯಕ್ಷದರ್ಶಿ ಸಾಕ್ಷಿಗಳನ್ನು ಗುರಿಯಾಗಿಸಿಕೊಂಡು ಪ್ರತೀಕಾರದ ಹತ್ಯೆ ನಡೆಸುತ್ತಾರೆ’ ಎಂದು ಅರ್ಜಿದಾರರು ಆರೋಪಿಸಿದ್ದಾರೆ.
ಆರೋಪಿ ಆಸಾರಾಂ ಆದೇಶದಂತೆ ಹಂತಕ ಕಾರ್ತಿಕ್‌ ಹಲ್ದಾರ್‌, ಪ್ರಮುಖ ಪ್ರತ್ಯಕ್ಷದರ್ಶಿ ಸಾಕ್ಷಿ ಅಖಿಲ್‌ ಗುಪ್ತಾ ಅವರನ್ನು ಗುಂಡಿಟ್ಟು ಕೊಂದಿದ್ದಾನೆ. ಇದನ್ನು ಪೊಲೀಸರ ಎದುರು ತಪ್ಪೊಪ್ಪಿಕೊಂಡರೂ, ಉತ್ತರಪ್ರದೇಶದ ಪೊಲೀಸರು ಈವರೆಗೆ ಆರೋಪಿ ಆಸಾರಾಂನನ್ನು ವಿಚಾರಣೆಗೆ ಒಳಪಡಿಸಿಲ್ಲ, ಎಫ್‌ಐಆರ್‌ ಕೂಡ ದಾಖಲಿಸಿಲ್ಲ ಎಂದು ಅರ್ಜಿಯಲ್ಲಿ ದೂರಲಾಗಿದೆ.

ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಆಸಾರಾಂ ಇತ್ತೀಚೆಗೆ ಆಯುರ್ವೇದ ಕೇಂದ್ರವೊಂದರಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯಲು ಜಾಮೀನು ಕೋರಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ. ರಾಜಸ್ಥಾನ ಸರ್ಕಾರವು ಆಸಾರಾಂ ಮನವಿ ವಿರೋಧಿಸಿ, ವೈದ್ಯಕೀಯ ಚಿಕಿತ್ಸೆ ಪಡೆಯುವ ಸೋಗಿನಲ್ಲಿ ತನ್ನ ಬಂಧನದ ಸ್ಥಳವನ್ನು ಬದಲಾಯಿಸಲು ಆರೋಪಿ ಬಯಸಿದ್ದಾನೆ ಎಂದು ವಾದಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.