ADVERTISEMENT

ಇನ್ನು ಮುಂದೆ ಮೈತ್ರಿ ಇಲ್ಲ: ಮಾಯಾವತಿ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2021, 19:09 IST
Last Updated 15 ಮಾರ್ಚ್ 2021, 19:09 IST
ಮಾಯಾವತಿ
ಮಾಯಾವತಿ   

ಲಖನೌ: ‘ಉತ್ತರಪ್ರದೇಶದಲ್ಲಿ ಬಿಎಸ್‌ಪಿಇನ್ನು ಮುಂದೆ ಯಾವ ಪಕ್ಷದ ಜತೆಗೂ ಚುನಾವಣಾ ಮೈತ್ರಿ ಮಾಡಿಕೊಳ್ಳುವುದಿಲ್ಲ. ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯನ್ನು ಪಕ್ಷವು ಏಕಾಂಗಿಯಾಗಿ ಎದುರಿಸಲಿದೆ’ ಎಂದು ಪಕ್ಷದ ಅಧ್ಯಕ್ಷೆ ಮಾಯಾವತಿ ಸೋಮವಾರ ಹೇಳಿದ್ದಾರೆ.

‘ಚುನಾವಣಾ ಮೈತ್ರಿಯು ಪಕ್ಷಕ್ಕೆ ಕಹಿ ಅನುಭವವನ್ನೇ ನೀಡಿದೆ. ನಮ್ಮ ಮತಗಳು ಮಿತ್ರಪಕ್ಷಗಳಿಗೆ ವರ್ಗಾವಣೆಯಾಗಿವೆ. ಆದರೆ ಅವರ ಮತಗಳು ನಮಗೆ ಬಂದಿಲ್ಲ. ಆದ್ದರಿಂದ ಮುಂದಿನ ಚುನಾವಣೆಯಲ್ಲಿ ನಾವು ಏಕಾಂಗಿಯಾಗಿ ಸ್ಪರ್ಧಿಸಲು ತೀರ್ಮಾನಿಸಿದ್ದೇವೆ. ಪಶ್ಚಿಮ ಬಂಗಾಳ, ಕೇರಳ, ಪುದುಚೇರಿ ಮತ್ತು ತಮಿಳುನಾಡಿನಲ್ಲಿ ನಾವು ಯಾರ ಜತೆಗೂ ಮೈತ್ರಿ ಮಾಡಿಕೊಂಡಿಲ್ಲ’ ಎಂದು ಮಾಧ್ಯಮಪ್ರತಿನಿಧಿಗಳ ಜತೆ ಮಾತನಾಡುತ್ತಾ ಅವರು ತಿಳಿಸಿದರು.

2019ರ ಲೋಕಸಭಾ ಚುನಾವಣೆಯಲ್ಲಿ ಬಿಎಸ್‌ಪಿಯು ಸಮಾಜವಾದಿ ಪಕ್ಷದ ಜತೆಗೆ ಮೈತ್ರಿ ಮಾಡಿಕೊಂಡಿತ್ತು. ಉತ್ತರಪ್ರದೇಶದಲ್ಲಿ 10 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ಸಾಧ್ಯವಾಗಿತ್ತು. 2022ರ ವಿಧಾನಸಭಾ ಚುನಾವಣೆಯಲ್ಲೂ ಈ ಮೈತ್ರಿ ಮುಂದುವರಿಯಬಹುದು ಎಂದು ನಿರೀಕ್ಷಿಸಲಾಗಿತ್ತು.

ADVERTISEMENT

ಇನ್ನೊಂದೆಡೆ, ‘ನಮ್ಮ ಪಕ್ಷವು ದೊಡ್ಡ ರಾಜಕೀಯ ಪಕ್ಷಗಳ ಜತೆಗೆ ಚುನಾವಣಾಪೂರ್ವ ಮೈತ್ರಿ ಮಾಡಿಕೊಳ್ಳುವುದಿಲ್ಲ’ ಎಂದು ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್‌ ಯಾದವ್‌ ಅವರು ಕೆಲವು ದಿನಗಳ ಹಿಂದೆ ಹೇಳಿದ್ದರು. ಆ ಮೂಲಕ ಸ್ಥಳೀಯ ಪಕ್ಷಗಳ ಜತೆಗೆ ಮೈತ್ರಿ ಮಾಡುವ ಸಾಧ್ಯತೆ ಇದೆ ಎಂದು ಅವರು ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.