ನವದೆಹಲಿ: ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ವರಿಷ್ಠರಾದ ಮಾಯಾವತಿ ಅವರು ತಮ್ಮ ಸೋದರಳಿಯ ಆಕಾಶ್ ಆನಂದ್ ಅವರನ್ನು ಪಕ್ಷದ ಮುಖ್ಯ ರಾಷ್ಟ್ರೀಯ ಸಂಯೋಜಕರನ್ನಾಗಿ ನೇಮಿಸಿದ್ದಾರೆ.
ಆನಂದ್ ಅವರ ಅಧೀನದಲ್ಲಿ ಮೂವರು ರಾಷ್ಟ್ರೀಯ ಸಂಯೋಜಕರು ಕಾರ್ಯನಿರ್ವಹಿಸಲಿದ್ದಾರೆ.
ಹೊಸ ಹುದ್ದೆಯನ್ನು ಆನಂದ್‌ಗಾಗಿಯೇ ಸೃಷ್ಟಿಸಲಾಗಿದ್ದು, ಪಕ್ಷದಲ್ಲಿ ಮಾಯಾವತಿ ನಂತರದ ಸ್ಥಾನವನ್ನು ಹೊಂದಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿ ಭಾನುವಾರ ನಡೆದ ಪಕ್ಷದ ಸಂಘಟಕರ ಸಭೆಯಲ್ಲಿ ಮಾಯಾವತಿ ಅವರು ಆನಂದ್‌ಗೆ ಉನ್ನತ ಹುದ್ದೆ ನೀಡುವ ನಿರ್ಧಾರ ತೆಗೆದುಕೊಂಡಿದ್ದಾರೆ.
‘ಮಾಯಾವತಿ ಅವರು ನನ್ನ ತಪ್ಪುಗಳನ್ನು ಕ್ಷಮಿಸಿದ್ದಾರೆ. ಬಹುಜನರ ಚಳವಳಿಯನ್ನು ಬಲಪಡಿಸಲು ಅವಕಾಶ ನೀಡಿದ್ದಾರೆ’ ಎಂದು ಆಕಾಶ್ ಆನಂದ್ ‘ಎಕ್ಸ್’ನಲ್ಲಿ ಉಲ್ಲೇಖಿಸಿದ್ದಾರೆ.
ಕಳೆದ ತಿಂಗಳು ಸಾರ್ವಜನಿಕವಾಗಿ ಕ್ಷಮೆ ಕೋರಿದ ಬಳಿಕ ಹಾಗೂ ‘ಮಾಯಾವತಿ ಒಬ್ಬರೇ ನನ್ನ ರಾಜಕೀಯ ಗುರು’ ಎಂದು ಆನಂದ್ ಹೇಳಿಕೆ ನೀಡಿದ ನಂತರ ಬಿಎಸ್‌ಪಿಗೆ ಮರುಸೇರ್ಪಡೆ ಮಾಡಿಕೊಳ್ಳಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.