ಲಖನೌ: ಐಷಾರಾಮಿ ವೆಚ್ಚಗಳನ್ನು ಕಡಿತ ಮಾಡಿ, ಸಾರ್ವಜನಿಕರ ಹಿತ ದೃಷ್ಟಿಯಿಂದ ವಿದ್ಯಾರ್ಥಿಗಳ ಶಾಲಾ–ಕಾಲೇಜುಶುಲ್ಕವನ್ನು ಮನ್ನಾ ಮಾಡುವಂತೆ ಬಹುಜನ ಸಮಾವಾದ ಪಾರ್ಟಿಯ ಮುಖ್ಯಸ್ಥೆ ಮಾಯಾವತಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಹಿಂದಿಯಲ್ಲಿ ಟ್ವೀಟ್ ಮಾಡಿರುವ ಮಾಯಾವತಿ, ‘ಕೊರೊನಾ – ಲಾಕ್‌ಡೌನ್ ಕಾರಣದಿಂದಾಗಿ ಕೋಟ್ಯಂತರ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಅನಿರೀಕ್ಷಿತವಾಗಿ ಎದುರಾದ ಈ ಸಮಸ್ಯೆಯಿಂದಾಗಿ ಪೋಷಕರಿಗೆ, ಮಕ್ಕಳ ಶಾಲಾ–ಕಾಲೇಜು ಶುಲ್ಕವನ್ನು ಭರಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಪೋಷಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಇದು ದುರ್ದೈವದ ಸಂಗತಿ‘ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ದೇಶದಲ್ಲಿ ಎದುರಾಗಿರುವ ಸಮಸ್ಯೆಯನ್ನು ದೇವರ ಆಟ ಎಂದು ಹೇಳಿರುವ ಕೇಂದ್ರ ಸರ್ಕಾರ, ಸಂವಿಧಾನದ ಪ್ರಕಾರ ದೇಶದ ಕಲ್ಯಾಣಕ್ಕಾಗಿ ಕಡ್ಡಾಯವಾಗಿ ಶ್ರಮಿಸಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮ್ಮ ಐಷಾರಾಮಿ ಖರ್ಚುಗಳನ್ನುಕಡಿಮೆ ಮಾಡಿ, ಈಗಾಗಲೇ ಸರ್ಕಾರಿ ಮತ್ತು ಖಾಸಗಿ ಶಾಲೆಗಳಿಗೆ ನೀಡಿರುವ ಶುಲ್ಕವನ್ನು ಪೋಷಕರಿಗೆ ವಾಪಸ್ ಕೊಡಿಸಬೇಕು ಮತ್ತು ಶಾಲಾ ಶುಲ್ಕವನ್ನೂ ಮನ್ನಾ ಮಾಡಬೇಕು‘ ಎಂದು ಮತ್ತೊಂದು ಟ್ವೀಟ್‌ನಲ್ಲಿ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.