ADVERTISEMENT

ಕಾಂಗ್ರೆಸ್‌ ಕರೆದಿದ್ದ ವಿರೋಧ ಪಕ್ಷಗಳ ಸಭೆಗೆ ಮಾಯಾವತಿ ಗೈರು

ಮಮತಾ ಹಾದಿಯಲ್ಲಿ ಬಿಎಸ್‌ಪಿ ನಾಯಕಿ

ಏಜೆನ್ಸೀಸ್
Published 13 ಜನವರಿ 2020, 5:27 IST
Last Updated 13 ಜನವರಿ 2020, 5:27 IST
ಬಿಎಸ್‌ಪಿ ನಾಯಕಿ ಮಾಯಾವತಿ
ಬಿಎಸ್‌ಪಿ ನಾಯಕಿ ಮಾಯಾವತಿ   

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ಚರ್ಚಿಸಲೆಂದು ಕಾಂಗ್ರೆಸ್‌ ಕರೆದಿದ್ದ ವಿರೋಧ ಪಕ್ಷಗಳ ಸಭೆಗೆ ಗೈರು ಹಾಜರಾಗುವುದಾಗಿ ಬಹುಜನ ಸಮಾಜ ಪಕ್ಷದ ಅಧ್ಯಕ್ಷೆ ಮಾಯಾವತಿ ಸೋಮವಾರ ಸ್ಪಷ್ಟಪಡಿಸಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಬಿಜೆಪಿ ಎದುರು ಪ್ರತಿಪಕ್ಷಗಳ ಬಲಪ್ರದರ್ಶನ ನಡೆಸಬೇಕು ಎಂದುಕೊಂಡಿದ್ದ ಕಾಂಗ್ರೆಸ್‌ನ ಪ್ರಯತ್ನಕ್ಕೆ ಈ ಮೂಲಕ ಹಿನ್ನಡೆಯಾದಂತೆ ಆಗಿದೆ.

ರಾಜಸ್ಥಾನದಲ್ಲಿ ತಮ್ಮ ಪಕ್ಷದ ಆರು ಶಾಸಕರು ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದ ನಂತರ ಮಾಯಾವತಿ ಕಾಂಗ್ರೆಸ್‌ನೊಂದಿಗೆ ಮುನಿಸಿಕೊಂಡಿದ್ದರು. ಸೋಮವಾರ ಇದೇ ಕಾರಣವನ್ನು ನೀಡಿ, ಸಭೆಯಿಂದ ಹೊರಗೆ ಉಳಿಯುವುದಾಗಿ ಘೋಷಿಸಿದರು.

ADVERTISEMENT

‘ಇಂಥ (ಶಾಸಕರು ಪಕ್ಷಾಂತರ ಮಾಡಿರುವ)ಸಂದರ್ಭದಲ್ಲಿ ಕಾಂಗ್ರೆಸ್‌ ಆಯೋಜಿಸಿರುವ ರ‍್ಯಾಲಿಯಲ್ಲಿ ಪಾಲ್ಗೊಂಡರೆ ರಾಜಸ್ಥಾನದಲ್ಲಿರುವ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಉತ್ಸಾಹ ಕಳೆದುಕೊಳ್ಳುತ್ತಾರೆ. ಇದೇ ಕಾರಣದಿಂದಾಗಿ ಈ ಸಭೆಯಲ್ಲಿ ನಾನು ಪಾಲ್ಗೊಳ್ಳುತ್ತಿಲ್ಲ’ ಎಂದು ಮಾಯಾವತಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

‘ಬಿಎಸ್‌ಪಿ ಮೊದಲಿನಿಂದಲೂ ಪೌರತ್ವ ತಿದ್ದುಪಡಿ ಮತ್ತು ಜನಸಂಖ್ಯಾ ನೋಂದಣಿಯನ್ನು ವಿರೋಧಿಸುತ್ತಿದೆ. ಸಮಾಜ ವಿಭಜಿಸುವ ಈ ಸಂವಿಧಾನಬಾಹಿರ ಕಾನೂನುಗಳನ್ನು ಹಿಂಪಡೆಯಬೇಕೆಂದು ನಾವು ಸರ್ಕಾರವನ್ನು ಕೋರುತ್ತೇವೆ. ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನು ರಾಜಕೀಯಕ್ಕೆ ಬಳಸುವುದು ತಪ್ಪು ಎಂದು ಇದೇ ಸಂದರ್ಭ ಹೇಳಲು ಬಯಸುತ್ತೇನೆ’ ಎಂದು ಮಾಯಾವತಿ ಹೇಳಿದ್ದಾರೆ.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಸಹ ಈ ಹಿಂದೆಯೇತಾನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಕರೆದಿರುವ ಸಭೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಹೇಳಿದ್ದರು.

ಎಡಪಕ್ಷಗಳ ನಾಯಕರು, ಡಿಎಂಕೆ, ಆರ್‌ಜೆಡಿ ಮತ್ತು ಇತರ ಪಕ್ಷಗಳು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ದೇಶದ ಆರ್ಥಿಕತೆ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರದಲ್ಲಿ ಎದುರಿಸುವ ಕುರಿತು ಕಾರ್ಯತಂತ್ರ ಹೆಣೆಯಲಿವೆ. ಸಮಾಜವಾದಿ ಪಕ್ಷವೂ ಸಭೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.