ಬಹುಜನ ಸಮಾಜವಾದಿ ಪಕ್ಷದ (ಬಿಎಸ್‌ಪಿ) ಮುಖ್ಯಸ್ಥೆ ಮಾಯಾವತಿ
ಕೃಪೆ: ಪಿಟಿಐ
ಲಖನೌ: ಸಮಾಜವಾದಿ ಪಕ್ಷವು (ಎಸ್‌ಪಿ) ಅಧಿಕಾರಕ್ಕೇರುವ ಸಲುವಾಗಿ ದಲಿತ ನಾಯಕರ ಸ್ಮರಣೆ ಮಾಡುತ್ತಿದೆ ಎಂದು ಬಹುಜನ ಸಮಾಜವಾದಿ ಪಕ್ಷದ (ಬಿಎಸ್‌ಪಿ) ಮುಖ್ಯಸ್ಥೆ ಮಾಯಾವತಿ ಗುರುವಾರ ಆರೋಪಿಸಿದ್ದಾರೆ.
ಪಕ್ಷದ ಸಂಸ್ಥಾಪಕ ಕಾನ್ಶಿರಾಮ್ ಅವರ 19ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ನಡೆದ ಸಮಾವೇಶದಲ್ಲಿ ಮಾತನಾಡಿರುವ ಅವರು, 'ಅಧಿಕಾರಕ್ಕೇರುತ್ತಿದ್ದಂತೆ ದಲಿತರನ್ನು ಮರೆಯುವ ಎಸ್‌ಪಿ, ಅವರನ್ನು ನೆನಪಿಸಿಕೊಳ್ಳುವುದು ಅಗ್ಯವಿದ್ದಾಗ ಮಾತ್ರ' ಎಂದು ಟೀಕಿಸಿದ್ದಾರೆ.
'ಅವರು (ಸಮಾಜವಾಧಿ ಪಕ್ಷದವರು) ಅಧಿಕಾರದಲ್ಲಿದ್ದಾಗ ಸಂತರು, ಗುರುಗಳು, ಮಹಾನ್ ನಾಯಕರನ್ನು ಸ್ಮರಿಸುವುದಿಲ್ಲ. ಆದರೆ, ಅಧಿಕಾರ ಕಳೆದುಕೊಳ್ಳುತ್ತಿದ್ದಂತೆ, ಅವರನ್ನೆಲ್ಲ ನೆನಪಿಸಿಕೊಳ್ಳಲಾರಂಭಿಸುತ್ತಾರೆ. ಹೀಗೆ ಎರಡು ಮುಖಗಳನ್ನು ಹೊಂದಿರುವವರ ಬಗ್ಗೆ ಜನರು ಎಚ್ಚರದಿಂದ ಇರಬೇಕು' ಎಂದು ಕರೆ ನೀಡಿದ್ದಾರೆ.
ಉತ್ತರ ಪ್ರದೇಶದ ರಾಜಧಾನಿ ಲಖನೌದಲ್ಲಿ ನಡೆದ ಸಮಾವೇಶದಲ್ಲಿ ಭಾರಿ ಸಂಖ್ಯೆಯಲ್ಲಿ ಜನರು ಸೇರಿದ್ದರು.
'ಅಧಿಕಾರದಲ್ಲಿದ್ದಾಗ ಅವರು ಒಂದೇ ಒಂದು ರೂಪಾಯಿ ಖರ್ಚು ಮಾಡಲಿಲ್ಲ. ಆದರೆ, ಈಗ ಕಾನ್ಶಿರಾಮ್ ಅವರ ಗೌರವಾರ್ಥವಾಗಿ ವಿಚಾರ ಸಂಕೀರಣಗಳನ್ನು ಆಯೋಜಿಸುವುದಾಗಿ ಹೇಳುತ್ತಿದ್ದಾರೆ' ಎಂದು ವ್ಯಂಗ್ಯವಾಡಿದ್ದಾರೆ.
ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರಿಗೆ ಬಿಎಸ್‌ಪಿ ಸಂಸ್ಥಾಪಕರ ಬಗ್ಗೆ ನಿಜವಾಗಿಯೂ ಗೌರವ ಇದ್ದಿದ್ದರೆ, ಅಲಿಗಢ ವಿಭಾಗದ ಕಾನ್ಶಿರಾಮ್ ನಗರ ಜಿಲ್ಲೆಗೆ ಕಾಸ್‌ಗಂಜ್ ಎಂದು ಮರುನಾಮಕರಣ ಮಾಡುತ್ತಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
'ನಾವು ವಿಶ್ವವಿದ್ಯಾಲಯಗಳು, ಸಂಸ್ಥೆಗಳಿಗೆ ಕಾನ್ಶಿರಾಮ್ ಹಾಗೂ ಇತರ ಧೀಮಂತ ನಾಯಕರ ಅವರ ಹೆಸರಿಟ್ಟಿದ್ದೆವು. ಸಾಕಷ್ಟು ಕಲ್ಯಾಣ ಯೋಜನೆಗಳನ್ನೂ ಆರಂಭಿಸಿದ್ದೆವು. ಆದರೆ, ಎಸ್‌ಪಿ ಸರ್ಕಾರ ಎಲ್ಲವನ್ನೂ ಸ್ಥಗಿತಗೊಳಿಸಿತು. ಇದು ಇಬ್ಬಗೆ ನೀತಿಯಲ್ಲಿದೆ ಮತ್ತೇನು?' ಎಂದು ನೆರದಿದ್ದವರನ್ನುದ್ದೇಶಿಸಿ ಕೇಳಿದ್ದಾರೆ.
ಮಾಜಿ ಮುಖ್ಯಮಂತ್ರಿಯೂ ಆಗಿರುವ ಮಾಯಾವತಿ ಅವರು, ತಮ್ಮ ಸರ್ಕಾರದ ಅವಧಿಯಲ್ಲಿ ನಿರ್ಮಿಸಿದ ಉದ್ಯಾನಗಳು, ಇತರ ಸ್ಮಾರಕಗಳನ್ನು ನಿರ್ವಹಿಸುವ ಭರವಸೆಯನ್ನು ಸದ್ಯ ಅಧಿಕಾರದಲ್ಲಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ನೇತೃತ್ವದ ಬಿಜೆಪಿ ಸರ್ಕಾರ ನೀಡಿರುವುದಕ್ಕೆ ಧನ್ಯವಾದ ಹೇಳಿದ್ದಾರೆ.
ಜನ ಸಮೂಹವನ್ನುದ್ದೇಶಿಸಿ, 'ಕಾನ್ಶಿರಾಮ್ ಅವರಿಗೆ ಗೌರವ ಸಲ್ಲಿಸುವುದಕ್ಕಾಗಿ ಭಾರಿ ಸಂಖ್ಯೆಯಲ್ಲಿ ಸೇರಿದ್ದೀರಿ. ಪಕ್ಷದ ಪರವಾಗಿ ನಿಮಗೆಲ್ಲ ಧನ್ಯವಾದಗಳು' ಎಂದೂ ಬಿಎಸ್‌ಪಿ ನಾಯಕಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.