ADVERTISEMENT

BJPಯನ್ನು ಸೋಲಿಸಲು ಮುಸ್ಲಿಮರು BSP ಬೆಂಬಲಿಸಿ; ಕಾಂಗ್ರೆಸ್, SPಯನ್ನಲ್ಲ: ಮಾಯಾವತಿ

ಪಿಟಿಐ
Published 29 ಅಕ್ಟೋಬರ್ 2025, 9:48 IST
Last Updated 29 ಅಕ್ಟೋಬರ್ 2025, 9:48 IST
ಮಾಯಾವತಿ
ಮಾಯಾವತಿ   

ಲಖನೌ: ‘ಬಿಜೆಪಿಯ ‘ವಿನಾಶಕಾರಿ ರಾಜಕೀಯ’ವನ್ನು ಸೋಲಿಸಲು ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಬದಲು, ಮುಸ್ಲಿಮರು ಬಹುಜನ ಸಮಾಜವಾದಿ ಪಕ್ಷವನ್ನು (ಬಿಎಸ್‌ಪಿ) ಬೆಂಬಲಿಸಬೇಕು’ ಎಂದು ಪಕ್ಷದ ನಾಯಕಿ ಮಾಯಾವತಿ ಬುಧವಾರ ಹೇಳಿದ್ದಾರೆ.

ಮುಸ್ಲಿಂ ಸಮುದಾಯದ ‘ಭೈಚರ್ ಸಂಘಟನ್‌’ ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿದ್ದಾರೆ.

‘2022ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯನ್ನೂ ಒಳಗೊಂಡು ಹಿಂದಿನ ಹಲವು ಚುನಾವಣೆಗಳಲ್ಲಿ ಮುಸ್ಲಿಮರು ಭಾವನಾತ್ಮಕ, ವೈಯಕ್ತಿಕ ಮತ್ತು ಆರ್ಥಿಕವಾಗಿ ಸಂಪೂರ್ಣ ಬೆಂಬಲ ನೀಡಿದ್ದರೂ, ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷಕ್ಕೆ ಬಿಜೆಪಿಯನ್ನು ಕಟ್ಟಿಹಾಕಲು ಸಾಧ್ಯವಾಗಲಿಲ್ಲ. ಆದರೆ ಸೀಮಿತ ಸಂಖ್ಯೆಯ ಮುಸ್ಲಿಮರ ಬೆಂಬಲವಿದ್ದರೂ, ಬಿಜೆಪಿಯನ್ನು ಸೋಲಿಸುವಲ್ಲಿ ಬಿಎಸ್‌ಪಿ ಯಶಸ್ವಿಯಾಗಿತ್ತು. ಹೀಗಾಗಿ 2007ರಲ್ಲಿ ನಮ್ಮ ಪಕ್ಷ ಬಹುಮತದೊಂದಿಗೆ ಸರ್ಕಾರ ರಚಿಸಿತ್ತು’ ಎಂದಿದ್ದಾರೆ.

ADVERTISEMENT

‘ಸಮಾಜವಾದಿ ಮತ್ತು ಕಾಂಗ್ರೆಸ್ ಎರಡೂ ಮೂಲತಃ ದಲಿತ ವಿರೋಧಿ, ಹಿಂದುಳಿದ ವಿರೋಧಿ ಹಾಗೂ ಮುಸ್ಲಿಂ ವಿರೋಧಿ ರಾಜಕೀಯವನ್ನು ಅನುಸರಿಸಿವೆ. ಆ ಪಕ್ಷಗಳ ಬಹಳಷ್ಟು ತಪ್ಪು ನೀತಿಗಳು ಉತ್ತರ ಪ್ರದೇಶದಲ್ಲಿ ಇನ್ನಷ್ಟು ಗಟ್ಟಿಯಾಗಿ ನೆಲೆಗೊಳ್ಳಲು ಬಿಜೆಪಿಗೆ ನೆರವಾಗಿವೆ’ ಎಂದು ಮಾಯಾವತಿ ಆರೋಪಿಸಿದರು.

‘ಒಂದು ಪಕ್ಷವಾಗಿ ಹಾಗೂ ಸರ್ಕಾರವಾಗಿ ಬಿಎಸ್‌ಪಿಯು ಮುಸ್ಲಿಮರಿಗೆ ಸುರಕ್ಷತೆ, ಭದ್ರತೆ ಮತ್ತು ಪ್ರತಿ ಹಂತದಲ್ಲೂ ನ್ಯಾಯಯುತ ಪ್ರಾತಿನಿಧ್ಯವನ್ನು ಖಾತ್ರಿಪಡಿಸುವ ಮೂಲಕ ಅವರ ನಿಜವಾದ ಕಲ್ಯಾಣವನ್ನು ಖಚಿತಪಡಿಸಿದೆ. ಅವರ ಜೀವ, ಆಸ್ತಿ ಮತ್ತು ನಂಬಿಕೆಯನ್ನು ರಕ್ಷಿಸಲು ನಾವು ಅತ್ಯುತ್ತಮ ಕಾನೂನು ಮತ್ತು ಸುವ್ಯವಸ್ಥೆಯನ್ನು ಒದಗಿಸಿದ್ದೇವೆ. ಜಾತಿವಾದ ಮತ್ತು ಕೋಮುವಾದವನ್ನು ನಿಗ್ರಹಿಸಲು ಕೆಲಸ ಮಾಡಿದ್ದೇವೆ’ ಎಂದು ಹೇಳಿದ್ದಾರೆ.

‘ದಲಿತರು, ಬುಡಕಟ್ಟು ಜನಾಂಗದವರು, ಹಿಂದುಳಿದ ವರ್ಗಗಳು, ಮುಸ್ಲಿಮರು ಮತ್ತು ಇತರ ಧಾರ್ಮಿಕ ಅಲ್ಪಸಂಖ್ಯಾತರು ಬಿಎಸ್ಪಿಯ 'ಬಹುಜನ ಸಮಾಜದ' ಅವಿಭಾಜ್ಯ ಅಂಗಗಳು. ರಾಜಕೀಯ ಸಬಲೀಕರಣದ ಮೂಲಕ ಈ ವಂಚಿತ ಮತ್ತು ನಿರ್ಲಕ್ಷಿತ ಸಮುದಾಯಗಳನ್ನು ಉನ್ನತೀಕರಿಸುವುದು ಪಕ್ಷದ ಧ್ಯೇಯವಾಗಿದೆ. ಸಂವಿಧಾನದ ಮಾನವೀಯ ಮತ್ತು ಕಲ್ಯಾಣ ತತ್ವಗಳಲ್ಲಿ ಕಲ್ಪಿಸಲಾಗಿರುವಂತೆ ಅವರು ಘನತೆ ಮತ್ತು ಸ್ವಾಭಿಮಾನದ ಜೀವನವನ್ನು ನಡೆಸಲು ಅನುವು ಮಾಡಿಕೊಡುತ್ತದೆ. ಇವೆಲ್ಲವೂ ಭಾರತವನ್ನು ನಿಜವಾಗಿಯೂ ಶ್ರೇಷ್ಠವಾಗಿಸಲು ಅವಶ್ಯಕವಾಗಿದೆ’ ಎಂದು ಮಾಯಾವತಿ ಅಭಿಪ್ರಾಯಪಟ್ಟಿದ್ದಾರೆ.

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಕುರಿತು ಮಾತನಾಡಿದ ಮಾಯಾವತಿ, ಬೂತ್ ಮಟ್ಟದಲ್ಲಿ ಯಾವುದೇ ಅರ್ಹ ಮತದಾರರ ಹೆಸರು ಪಟ್ಟಿಯಿಂದ ಹೊರಗುಳಿಯದಂತೆ ನೋಡಿಕೊಳ್ಳುವಂತೆ ಪಕ್ಷದ ಮುಖಂಡರಿಗೆ ಸೂಚನೆ ನೀಡಿದರು. ಹೆಸರು ಕೈತಪ್ಪಿದವರ ಕುರಿತು ನಿಗದಿತ ನಮೂನೆಗಳನ್ನು ಭರ್ತಿ ಮಾಡಿ ಮತ್ತು ಅವರ ಹೆಸರುಗಳನ್ನು ಸೇರಿಸಲು ಅಗತ್ಯವಾದ ದಾಖಲೆಗಳನ್ನು ಲಗತ್ತಿಸುವ ಮೂಲಕ ಸಹಾಯ ಮಾಡುವಂತೆ ಅವರು ನಿರ್ದೇಶಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.