
ಪ್ರಾತಿನಿಧಿಕ ಚಿತ್ರ
ಗೋರಖ್‌ಪುರ: 2014ರಲ್ಲಿ ಎಂಬಿಬಿಎಸ್ ಪದವಿಗೆ ಸೇರಿದ್ದ ವಿದ್ಯಾರ್ಥಿ ಮೊದಲ ವರ್ಷದ ಪರೀಕ್ಷೆಯಲ್ಲಿ ತೇರ್ಗಡೆಯಾಗದೆ, ದಶಕಗಳಿಂದ ಅದೇ ತರಗತಿಯಲ್ಲೇ ಇರುವ ಪ್ರಕರಣ ಗೋರಖ್‌ಪುರದ ಬಿಆರ್‌ಡಿ ವೈದ್ಯಕೀಯ ಕಾಲೇಜಿನಲ್ಲಿ ಬೆಳಕಿಗೆ ಬಂದಿದೆ.
ಇದುವರೆಗೂ ಮೊದಲನೇ ವರ್ಷದ ಎಂಬಿಬಿಎಸ್ ಪದವಿಯಲ್ಲೇ ಇರುವ ವ್ಯಕ್ತಿಯ ಬಗ್ಗೆ ತಲೆಕೆಡಿಸಿಕೊಂಡಿರುವ ಕಾಲೇಜು ಆಡಳಿತ ಮಂಡಳಿ, ರಾಷ್ಟ್ರೀಯ ವೈದ್ಯಕೀಯ ಆಯೋಗವನ್ನು (ಎನ್‌ಎಂಸಿ) ಸಂಪರ್ಕಿಸಿ, ಈ ಸಮಸ್ಯೆಯನ್ನು ಬಗೆಹರಿಸಲು ಸಲಹೆ ನೀಡುವಂತೆ ಕೋರಿದೆ.
ಆತ 2014 ರಿಂದ ಯುಜಿ ಹಾಸ್ಟೆಲ್‌ನಲ್ಲಿ ವಾಸಿಸುತ್ತಿದ್ದಾನೆ. 2015ರಲ್ಲಿ ಮೊದಲ ವರ್ಷದ ಎಂಬಿಬಿಎಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಲಿಲ್ಲ. ಜತೆಗೆ 11 ವರ್ಷದಿಂದ ಪರೀಕ್ಷೆ ಬರೆಯಲೂ ಬಂದಿಲ್ಲ. ಯಾವುದೇ ಶೈಕ್ಷಣಿಕ ಚಟುವಟಿಕೆಗಳಲ್ಲೂ ಭಾಗಿಯಾಗುತ್ತಿಲ್ಲ ಎಂದು ಕಾಲೇಜು ಆಡಳಿತ ಮಂಡಳಿ ಹೇಳಿದೆ.
ಈಗ ಇರುವ ವೈದ್ಯಕೀಯ ಶಿಕ್ಷಣ ನಿಯಮಗಳ ಪ್ರಕಾರ, ಪ್ರಥಮ ವರ್ಷದ ಎಂಬಿಬಿಎಸ್ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಯು ಹೊಸದಾಗಿ ಪ್ರವೇಶ ಪಡೆಯುವ ಅಗತ್ಯವಿಲ್ಲ. ಪರೀಕ್ಷಾ ನಮೂನೆಯನ್ನು ಭರ್ತಿ ಮಾಡುವ ಮೂಲಕ ಮತ್ತೆ ಕಾಲೇಜಿಗೆ ಬರಬಹುದು. ಈ ನಿಬಂಧನೆಯಿಂದಾಗಿ, ವಿದ್ಯಾರ್ಥಿಯ ದಾಖಲಾತಿ ತಾಂತ್ರಿಕವಾಗಿ ಮಾನ್ಯವಾಗಿಯೇ ಮುಂದುವರಿಯುತ್ತದೆ, ಇದರಿಂದಾಗಿ ಕಾಲೇಜು ಅವನ ಪ್ರವೇಶವನ್ನು ರದ್ದುಗೊಳಿಸಲು ಸಾಧ್ಯವಿಲ್ಲ.
ಕಾಲೇಜಿನಲ್ಲಿ ಪ್ರವೇಶಾತಿ ಮಾನ್ಯವಾಗಿರುವುದರಿಂದ ಹಾಸ್ಟೆಲ್‌ನಿಂದಲೂ ಆತನನ್ನು ಹೊರಹಾಕಲು ಸಾಧ್ಯವಾಗದೆ ಕಾಲೇಜು ಆಡಳಿತ ಮಂಡಳಿ ಸಂಕಷ್ಟಕ್ಕೆ ಸಿಲುಕಿದೆ.
ವಿದ್ಯಾರ್ಥಿಯೊಂದಿಗೆ ಹಲವು ಸಲ ಸಮಾಲೋಚನೆ ನಡೆಸಿದ್ದರೂ ಪ್ರಯೋಜನವಾಗದ ಕಾರಣ, ಕಾಲೇಜು ಆಡಳಿತವು ಆತನ ತಂದೆಯನ್ನು ಸಂಪರ್ಕಿಸಿತ್ತು. ಮೂರು ಸಲ ಕರೆ ಮಾಡಿ ತಿಳಿಸಿದರೂ, ಅವರೂ ಕಾಲೇಜಿಗೆ ಬಂದಿಲ್ಲ.
ಪರೀಕ್ಷೆ ಅರ್ಜಿಯ ಜತೆಗೆ ಮೆಸ್ ಹಣವನ್ನು ಪಡೆಯುತ್ತಿದ್ದೆವು. ಆದರೆ ಆತ ವರ್ಷಗಳಿಂದ ಪರೀಕ್ಷೆಯ ಅರ್ಜಿಯನ್ನೂ ಭರ್ತಿ ಮಾಡುತ್ತಿಲ್ಲ, ಮೆಸ್ ಹಣವನ್ನೂ ನೀಡುತ್ತಿಲ್ಲ. ಆದರೆ ಉಚಿತ ಊಟ ಮತ್ತು ವಸತಿ ಸೌಲಭ್ಯವನ್ನು ಪಡೆಯುತ್ತಲೇ ಇದ್ದಾನೆ ಎಂದು ಕಾಲೇಜು ಆಡಳಿತಮಂಡಳಿ ಅಲವತ್ತುಕೊಂಡಿದೆ.
ಸದ್ಯ ಎನ್‌ಎಂಸಿ ಮೊರೆ ಹೋಗಿರುವ ಆಡಳಿತ ಮಂಡಳಿ ಅದರ ನಿರ್ದೇಶನದಂತೆ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲು ನಿರ್ಧರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.