ADVERTISEMENT

ಕೋವಿಡ್‌ ಸೇವೆ: ದೇಶದ ವೈದ್ಯಕೀಯ ಕ್ಷೇತ್ರಕ್ಕೆ ಇಂದಿರಾ ಗಾಂಧಿ ಶಾಂತಿ ಪ್ರಶಸ್ತಿ

ಪಿಟಿಐ
Published 21 ಡಿಸೆಂಬರ್ 2022, 14:28 IST
Last Updated 21 ಡಿಸೆಂಬರ್ 2022, 14:28 IST
.
.   

ನವದೆಹಲಿ: ಕೋವಿಡ್‌ ಕಾಲದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದ ದೇಶದ ವೈದ್ಯಕೀಯ ಕ್ಷೇತ್ರಕ್ಕೆ2020–21ನೇ ಸಾಲಿನ ಇಂದಿರಾ ಗಾಂಧಿ ಶಾಂತಿ, ನಿಶಸ್ತ್ರೀಕರಣ ಮತ್ತು ಅಭಿವೃದ್ಧಿ–2022 ಪ್ರಶಸ್ತಿಯನ್ನು ನೀಡಲಾಗುವುದು ಎಂದು ಇಂದಿರಾ ಗಾಂಧಿ ಮೆಮೋರಿಯಲ್‌ ಟ್ರಸ್ಟ್‌ ಘೋಷಿಸಿದೆ.

‘ವೈದ್ಯಕೀಯ ಕ್ಷೇತ್ರಕ್ಕೇ ನೀಡಲಾಗುತ್ತಿರುವ ಪ್ರಶಸ್ತಿಯಾದ್ದರಿಂದ ದೇಶದ ಲಕ್ಷಗಟ್ಟಲೆ ವೈದ್ಯರು, ನರ್ಸ್‌ಗಳ ಪ್ರಾತಿನಿಧಿಕ ಸಂಸ್ಥೆಯಾಗಿರುವ ಭಾರತೀಯ ವೈದ್ಯಕೀಯ ಸಂಘ ಹಾಗೂ ಟ್ರೈನ್ಡ್‌ ನರ್ಸ್ಸ್‌ ಆರ್ಗನೈಸೇಷನ್‌ ಆಫ್‌ ಇಂಡಿಯಾದ ಪ್ರತಿನಿಧಿಗಳಿಗೆ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ’ ಎಂದು ಟ್ರಸ್ಟ್‌ ಹೇಳಿದೆ.

‘ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷ ಸುಪ್ರೀಂ ಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ ಟಿ.ಎಸ್‌. ಠಾಕೂರ್‌ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಪ್ರಶಸ್ತಿ ಮೊತ್ತ ₹ 1 ಕೋಟಿಯೊಂದಿಗೆ ಪ್ರಶಸ್ತಿಪತ್ರವನ್ನೂ ನೀಡಲಾಗುವುದು’ ಎಂದಿದೆ.

ADVERTISEMENT

‘ದೇಶವು ಹಿಂದೆಂದೂ ಕಂಡರಿಯದ ಸಾಂಕ್ರಾಮಿಕದ ಸಂದರ್ಭದಲ್ಲಿ ವೈದ್ಯರ, ನರ್ಸ್‌ಗಳ, ಅರೆ ವೈದ್ಯಕೀಯ ಸಿಬ್ಬಂದಿ, ಕರ್ಮಚಾರಿಗಳು ಹಾಗೂ ಸ್ವಯಂಸೇವಕರ ಸೇವೆಯನ್ನು ಪ್ರತಿಯೊಬ್ಬರು ಕಣ್ಣಾರೆ ಕಂಡಿದ್ದಾರೆ. ಕೋವಿಡ್‌ ಕಾಲದಲ್ಲಿ ಜನರ ಬಹುದೊಡ್ಡ ನಂಬುಗೆಯ ಆಧಾರ ವೈದ್ಯಕೀಯ ಕ್ಷೇತ್ರವಾಗಿತ್ತು’ ಎಂದು ಟ್ರಸ್ಟ್‌ ಅಭಿಪ್ರಾಯಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.