ADVERTISEMENT

ವೈದ್ಯಕೀಯ ಕೋರ್ಸ್‌ಗಳ ಸೀಟುಗಳು ಖಾಲಿ ಬಿಡುವಂತಿಲ್ಲ: ಕೇಂದ್ರಕ್ಕೆ SC ನಿರ್ದೇಶನ

ಪಿಟಿಐ
Published 3 ಜನವರಿ 2025, 13:08 IST
Last Updated 3 ಜನವರಿ 2025, 13:08 IST
   

ನವದೆಹಲಿ: ವೈದ್ಯಕೀಯ ಕಾಲೇಜುಗಳಲ್ಲಿ ಭರ್ತಿಯಾಗದ ಸೀಟುಗಳನ್ನು ಖಾಲಿ ಬಿಡುವಂತಿಲ್ಲ. ಈ ಕುರಿತಂತೆ ರಾಜ್ಯ ಸರ್ಕಾರ ಹಾಗೂ ಇನ್ನಿತರ ಪ್ರಾಧಿಕಾರಗಳೊಂದಿಗೆ ಚರ್ಚಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. 

ಈ ವಿಷಯದಲ್ಲಿ ಸಮಿತಿಯನ್ನು ರಚಿಸುವ ಶಿಫಾರಸುಗಳನ್ನು ಪರಿಗಣಿಸುವಂತೆಯೂ ತಿಳಿಸಿದೆ. ನ್ಯಾ. ಬಿ.ಆರ್.ಗವಾಯಿ ಹಾಗೂ ನ್ಯಾ. ಕೆ.ವಿ. ವಿಶ್ವನಾಥನ್‌ ಅವರಿದ್ದ ಪೀಠವು ಈ ನಿರ್ದೇಶನ ನೀಡಿದೆ.

ಸೂಪರ್‌ ಸ್ಪೆಷಾಲಿಟಿ ಕೋರ್ಸ್‌ಗಳ ಸೀಟುಗಳು ಖಾಲಿ ಉಳಿದಿರುವ ವಿಷಯವನ್ನು 2023ರ ಏಪ್ರಿಲ್‌ನಲ್ಲಿ ವಿಚಾರಣೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್‌, ವಾದ ಹಾಗೂ ಪ್ರತಿವಾದವನ್ನು ಆಲಿಸಿತು.

ADVERTISEMENT

ಎಲ್ಲಾ ರಾಜ್ಯಗಳ ಪ್ರತಿನಿಧಿಗಳು, ಖಾಸಗಿ ವೈದ್ಯಕೀಯ ಕಾಲೇಜುಗಳ ಆಡಳಿತ ಮಂಡಳಿ, ಆರೋಗ್ಯ ಸೇವೆಗಳ ಮಹಾ ನಿರ್ದೇಶಕರನ್ನು ಒಳಗೊಂಡ ಸಮಿತಿ ರಚಿಸುವ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಮುಂದಿಟ್ಟಿತು. ಇದಕ್ಕೆ ಸುಪ್ರೀಂ ಕೋರ್ಟ್ ಸಮ್ಮತಿಸಿತ್ತು. ಇದರ ಆಧಾರದಲ್ಲೇ ಸಮಿತಿ ರಚಿಸಿದ ಕೇಂದ್ರ ಸರ್ಕಾರ,  ಅದರ ಶಿಫಾರಸುಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿತು.

ಇದಕ್ಕೆ ಪ್ರತಿಕ್ರಿಯಿಸಿದ ಸುಪ್ರೀಂ ಕೋರ್ಟ್‌, ಈ ವಿಷಯದಲ್ಲಿ ಕೇಂದ್ರವೇ ಸಭೆ ನಡೆಸಿ, ಸಮರ್ಪಕ ಪ್ರಸ್ತಾವವನ್ನು ಸಲ್ಲಿಸುವಂತೆ ನಿರ್ದೇಶಿಸಿತು. ಇದಕ್ಕೆ ಮೂರು ತಿಂಗಳ ಗಡುವು ನೀಡಿ ಏಪ್ರಿಲ್‌ಗೆ ವಿಚಾರಣೆ ಮುಂದೂಡಿತು.

ಸೂಪರ್ ಸ್ಪೆಷಾಲಿಟಿ ಕೋರ್ಸ್‌ಗಳಲ್ಲಿ 1,003 ಸೀಟುಗಳು ಭರ್ತಿಯಾಗದೆ ವ್ಯರ್ಥವಾಗುತ್ತಿದೆ. ಒಂದೆಡೆ ಸೂಪರ್‌ ಸ್ಪೆಷಾಲಿಟಿ ವೈದ್ಯರ ಕೊರತೆ ಇದೆ. ಮತ್ತೊಂದೆಡೆ ಕಾಲೇಜುಗಳಲ್ಲಿರುವ ಸೀಟುಗಳು ಭರ್ತಿಯಾಗದಿರುವುದು ಕಳವಳಕಾರಿ ಅಂಶ ಎಂದು 2023ರ ಏಪ್ರಿಲ್‌ನಲ್ಲಿ ವಿಚಾರಣೆ ನಡೆಸಿದ ನ್ಯಾಯಪೀಠ ಆಘಾತ ವ್ಯಕ್ತಪಡಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.