ADVERTISEMENT

ವೈದ್ಯಕೀಯ ಚಿಕಿತ್ಸೆಗೆ ‘ವೀಸಾ ಆನ್‌ ಅರೈವಲ್‌’ ಸೌಲಭ್ಯ: ಪೀಯೂಷ್‌ ಗೋಯಲ್

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2025, 16:12 IST
Last Updated 11 ನವೆಂಬರ್ 2025, 16:12 IST
ಪಿಯೂಷ್‌ ಗೋಯಲ್
ಪಿಯೂಷ್‌ ಗೋಯಲ್   

ನವದೆಹಲಿ:  ವೈದ್ಯಕೀಯ ಚಿಕಿತ್ಸೆಗೆ ಅನ್ವಯವಾಗುವಂತೆ ಅಮೆರಿಕ ಮತ್ತು ಬಹುತೇಕ ಐರೋಪ್ಯ ರಾಷ್ಟ್ರಗಳಿಗೆ ಭಾರತವು ‘ವೀಸಾ ಆನ್‌ ಅರೈವಲ್‌’ ಸೌಲಭ್ಯ (ಬಂದಿಳಿಯುತ್ತಿದ್ದಂತೆ ನೀಡುವ ವೀಸಾ) ಕಲ್ಪಿಸಿದೆ’ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್‌ ಗೋಯಲ್‌ ಹೇಳಿದರು.

ಭಾರತೀಯ ಕೈಗಾರಿಕಾ ಸಂಘ (ಸಿಐಐ) ಮಂಗಳವಾರ ಇಲ್ಲಿ ಆಯೋಜಿಸಿದ್ದ ’ಆರೋಗ್ಯ ಶೃಂಗಸಭೆ’ಯಲ್ಲಿ ಅವರು ಮಾತನಾಡಿದರು. 

‘ವೀಸಾ ಆನ್‌ ಅರೈವಲ್‌’ ಸೌಲಭ್ಯ ವಿಸ್ತರಣೆಯಿಂದ ಭಾರತದ ವೈದ್ಯಕೀಯ ಪ್ರವಾಸೋದ್ಯಮ ಕ್ಷೇತ್ರಕ್ಕೆ ಉತ್ತೇಜನ ಲಭಿಸಲಿದೆ ಎಂದು ’ಸಿಐಐ’ ಮನವಿ ಮಾಡಿತ್ತು. 

ADVERTISEMENT

‘ಜಾಗತಿಕ ಆರೋಗ್ಯ ಮತ್ತು ವೈದ್ಯಕೀಯ ಪ್ರವಾಸೋದ್ಯಮಕ್ಕೆ ಭಾರತದ ಕೊಡುಗೆ ದೊಡ್ಡ ಮಟ್ಟದಲ್ಲಿದೆ’ ಎಂದ ಗೋಯಲ್‌, ‘ಖಂಡಿತವಾಗಿಯೂ ‘ಸಿಐಐ’ ಮನವಿಯನ್ನು ಪರಿಗಣಿಸುತ್ತೇವೆ. ಈಗಾಗಲೇ ಭಾರತವು ಹಲವು ದೇಶಗಳಿಗೆ ‘ವೀಸಾ ಆನ್‌ ಅರೈವಲ್‌’  ಮತ್ತು ಇ–ವೀಸಾವನ್ನು ಅನುಮತಿಸಿದೆ. ಹೆಚ್ಚುವರಿಯಾಗಿ ಯಾವೆಲ್ಲ ದೇಶಗಳಿಗೆ ಈ ಸೌಲಭ್ಯ ವಿಸ್ತರಿಸಬೇಕು ಎನ್ನುವುದನ್ನೂ ಪರಿಶೀಲಿಸುತ್ತೇವೆ’ ಎಂದರು. 

ದೇಶದಲ್ಲಿ ವೈದ್ಯಕೀಯ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕೈಗೊಳ್ಳಬೇಕಿರುವ ಕ್ರಮಗಳ ಕುರಿತು ಕ್ರಿಯಾ ಯೋಜನೆ ಸಿದ್ಧಪಡಿಸುವಂತೆಯೂ ಪೀಯೂಷ್‌ ಸಿಐಐಗೆ ಸೂಚಿಸಿದರು. 

ವಿದೇಶಿ ರೋಗಿಗಳಿಗಾಗಿ ಭಾರತದ ಆಸ್ಪತ್ರೆಗಳು ಶೇ 10ರಷ್ಟು ಸೌಲಭ್ಯವನ್ನು ಕಾಯ್ದಿರಿಸಬಹುದು ಹಾಗೂ ಇದರಿಂದ ಬರುವ ಆದಾಯದಲ್ಲಿ ಒಂದು ಪಾಲನ್ನು ’ಆಯುಷ್ಮಾನ್‌ ಭಾರತ್‌ ಕಾರ್ಯಕ್ರಮ ಅಥವಾ ಸಿಎಸ್‌ಆರ್‌ಗೆ ವಿನಿಯೋಗಿಸಬಹುದು’ ಎಂದು ಅವರು ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.