ADVERTISEMENT

ಮೇಘಾಲಯ ಬೆಳವಣಿಗೆ: ಪ್ರತಿಪಕ್ಷಗಳ ಒಗ್ಗಟ್ಟಿಗೆ ಕರೆ ನೀಡಿದ ಕಾಂಗ್ರೆಸ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ನವೆಂಬರ್ 2021, 10:49 IST
Last Updated 26 ನವೆಂಬರ್ 2021, 10:49 IST
ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ
ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ   

ನವದೆಹಲಿ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿಯೊಂದಿಗೆ ಕೆಲಸ ಮಾಡಲು ಕಾಂಗ್ರೆಸ್ ಸಿದ್ಧವಿದೆ ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಶುಕ್ರವಾರ ‘ಎನ್‌ಡಿಟಿವಿ‘ಗೆ ತಿಳಿಸಿದ್ದಾರೆ.

ಮೇಘಾಲಯದ ರಾಜಕೀಯ ಬೆಳವಣಿಗೆ ಕುರಿತು ಮಾತನಾಡಿರುವ ಅವರು, ‘ಭಿನ್ನಾಭಿಪ್ರಾಯಗಳ ನಡುವೆಯೂ ಪ್ರತಿಪಕ್ಷಗಳ ಒಗ್ಗಟ್ಟು ಮುಖ್ಯವಾಗಿದೆ.ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿದ್ದೇವೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ನಾವು ನಿನ್ನೆ(ಗುರುವಾರ) ಕಾರ್ಯತಂತ್ರ ಸಮಿತಿಯ ಸಭೆ ನಡೆಸಿದ್ದೇವೆ. ಅಲ್ಲಿ ಉಭಯ ಸದನದ ನಾಯಕರು ಉಪಸ್ಥಿತರಿದ್ದರು‘ ಎಂದು ಹೇಳಿದ್ದಾರೆ.

‘ಹೊರಗಿನ ರಾಜಕೀಯ ಸನ್ನಿವೇಶ ಏನೇ ಇರಲಿ. ಸಾಮಾನ್ಯ ಜನರ ಕುಂದುಕೊರತೆಗಳನ್ನು ನಿವಾರಿಸಲು ನಾವು ಒಗ್ಗಟ್ಟಿನಿಂದ ಇರಬೇಕಿದೆ‘ ಎಂದು ಖರ್ಗೆ ಕರೆ ನೀಡಿದ್ದಾರೆ.‌

ADVERTISEMENT

‘ಮೇಘಾಲಯದಲ್ಲಿ ನಡೆದಿರುವ ಘಟನೆ ರಾಜ್ಯವೊಂದಕ್ಕೆ ಸಂಬಂಧಿಸಿದ ವಿಚಾರವಾಗಿದೆ. ಆ ಸಮಸ್ಯೆಯನ್ನು ಹೈಕಮಾಂಡ್ ನಿಭಾಯಿಸುತ್ತದೆ. ಸಂಸತ್ತಿಗೆ ಸಂಬಂಧಿಸಿದಂತೆ, ಎನ್‌ಡಿಎ ಸರ್ಕಾರದ ನೀತಿಗಳ ವಿರುದ್ಧ ಎಲ್ಲಾ ಪಕ್ಷಗಳು ಒಂದಾಗಲು ನಾವು ವಿನಂತಿಸುತ್ತೇವೆ‘ ಎಂದು ಖರ್ಗೆ ಮನವಿ ಮಾಡಿದ್ದಾರೆ.

ಮಾಜಿ ಮುಖ್ಯಮಂತ್ರಿ ಮುಕುಲ್‌ ಸಂಗ್ಮಾ ಸೇರಿದಂತೆ ಮೇಘಾಲಯದ ಹದಿನೆಂಟು ಕಾಂಗ್ರೆಸ್‌ ಶಾಸಕರ ಪೈಕಿ ಹನ್ನೆರಡು ಮಂದಿ ತೃಣಮೂಲ ಕಾಂಗ್ರೆಸ್‌ ಪಕ್ಷಕ್ಕೆ (ಟಿಎಂಸಿ) ಬುಧವಾರ ಸೇರ್ಪಡೆಗೊಂಡಿದ್ದಾರೆ.

ಹೊಸ ಶಾಸಕರ ಸೇರ್ಪಡೆಯಿಂದಾಗಿ ತೃಣಮೂಲ ಕಾಂಗ್ರೆಸ್ ರಾಜ್ಯದಲ್ಲಿ ಪ್ರಮುಖ ವಿರೋಧ ಪಕ್ಷವಾಗಿ ಹೊರಹೊಮ್ಮಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.