ADVERTISEMENT

ಮಧುಚಂದ್ರದಲ್ಲಿ ‘ನಲ್ಲ’ನ ಕೊಲೆ: ಘಾಜಿಪುರ್‌ ಜಿಲ್ಲಾ ಕೋರ್ಟ್‌ಗೆ ಆರೋಪಿ ಮಹಿಳೆ

ಪಿಟಿಐ
Published 10 ಜೂನ್ 2025, 14:37 IST
Last Updated 10 ಜೂನ್ 2025, 14:37 IST
<div class="paragraphs"><p>ಮಧುಚಂದ್ರದಲ್ಲಿ ಪತಿ ಕೊಂದ ಆರೋಪ ಎದುರಿಸುತ್ತಿರುವ ಪತ್ನಿ ಸೋನಂ ಅವರನ್ನು ಪೊಲೀಸರು ಘಾಜಿಪುರ್‌ ಜಿಲ್ಲಾ ಕೋರ್ಟ್‌ಗೆ ಹಾಜರುಪಡಿಸಿದರು </p></div>

ಮಧುಚಂದ್ರದಲ್ಲಿ ಪತಿ ಕೊಂದ ಆರೋಪ ಎದುರಿಸುತ್ತಿರುವ ಪತ್ನಿ ಸೋನಂ ಅವರನ್ನು ಪೊಲೀಸರು ಘಾಜಿಪುರ್‌ ಜಿಲ್ಲಾ ಕೋರ್ಟ್‌ಗೆ ಹಾಜರುಪಡಿಸಿದರು

   

–‍ಪಿಟಿಐ ಚಿತ್ರ

ಲಖನೌ: ‘ಮಧುಚಂದ್ರಕ್ಕೆ ತೆರಳಿದ್ದಾಗಲೇ ಪತಿಯ ಬದುಕಿಗೆ ಅಂತ್ಯ ಕಾಣಿಸಿದ್ದ’ ಆರೋಪಿ ಮಹಿಳೆ ಸೋನಂ ಅವರನ್ನು ಘಾಜಿಪುರ್ ಕೋರ್ಟ್‌ಗೆ ಹಾಜರುಪಡಿಸಲಾಗಿದೆ. ಈಕೆಯನ್ನು ವಿಚಾರಣೆಗೆ ತಮ್ಮ ವಶಕ್ಕೆ ಒಪ್ಪಿಸುವಂತೆ ಕೋರಿ ಮೇಘಾಲಯದ ಪೊಲೀಸರು ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ADVERTISEMENT

ಆರೋಪಿಯು ಸೋಮವಾರ ಉತ್ತರ ಪ್ರದೇಶದ ಪೊಲೀಸರ ಎದುರು ಶರಣಾಗಿದ್ದರು. ಕೂಡಲೇ ಆಕೆಯನ್ನು ಕೋರ್ಟ್‌ಗೆ ಹಾಜರುಪಡಿಸಲಾಯಿತು. ತಡರಾತ್ರಿಯವರೆಗೂ ವಿಚಾರಣೆ ನಡೆದಿತ್ತು.

ಇಂದೋರ್‌ನ ಉದ್ಯಮಿ ರಾಜಾ ರಘುವಂಶಿ ಜೊತೆ ವಿವಾಹವಾಗಿದ್ದ ಸೋನಂ ಮಧುಚಂದ್ರಕ್ಕೆ ಮೇಘಾಲಯಕ್ಕೆ ಬಂದಿದ್ದರು. ಪತಿಯ ಕೊಲೆಗೆ ಸಂಚು ನಡೆಸಿದ್ದ ಆಕೆ, ಮೂವರನ್ನು ಇದಕ್ಕಾಗಿ ನಿಯೋಜಿಸಿದ್ದರು.

ಮೇಘಾಲಯದ ಈಸ್ಟ್ ಖಾಸಿ ಹಿಲ್ಸ್‌ ಜಿಲ್ಲೆ ಸೋಹ್ರಾದಲ್ಲಿ ರಾಜಾ ಸೂರ್ಯವಂಶಿ ಕೊಲೆ ಆಗಿತ್ತು. ಮೇ 11ರಂದು ಮೇಘಾಲಯಕ್ಕೆ ಬಂದಿದ್ದ ದಂಪತಿ ಮೇ 23ರಂದು ನಾಪತ್ತೆಯಾಗಿದ್ದರು. ಪ್ರಕರಣ ದೇಶವ್ಯಾಪಿ ಗಮನಸೆಳೆದಿತ್ತು. 

ರಾಜಾ ರಘುವಂಶಿ ಶವವು ವೀಸಾಡೊಂಗ್ ಜಲಪಾತದ ಬಳಿ ಜೂನ್‌ 2ರಂದು ಪತ್ತೆಯಾಗಿತ್ತು. ಆದರೆ, ಸೋನಂ ಅಂದಿನಿಂದಲೇ ನಾಪತ್ತೆಯಾಗಿದ್ದರು. ಬಳಿಕ ಘಾಜಿಪುರ್ ಜಿಲ್ಲಾ ಪೊಲೀಸರ ಎದುರು ಶರಣಾಗಿದ್ದರು.

ಕೃತ್ಯಕ್ಕೆ ಸಂಬಂಧಿಸಿದಂತೆ  ಪೊಲೀಸರು ಲಲಿತ್‌ಪುರ್ ಜಿಲ್ಲೆಯಲ್ಲಿ ಆಕಾಶ್‌ ರಜಪೂತ್ ಮತ್ತು ಇಂದೋರ್‌ನಲ್ಲಿ ವಿಶಾಲ್ ಸಿಂಗ್, ರಾಜ್‌ ಸಿಂಗ್ ಎಂಬವರನ್ನು ಬಂಧಿಸಿದ್ದರು. ಒಟ್ಟು ಐವರನ್ನು ಈ ಸಂಬಂಧ ಬಂಧಿಸಲಾಗಿದೆ. 

ತಲೆಗೆ ತೀವ್ರ ಹಲ್ಲೆ: ರಾಜಾ ಅವರ ತಲೆಗೆ ಹರಿತ ಆಯುಧದಿಂದ ಎರಡು ಬಾರಿ ಹಲ್ಲೆ ಮಾಡಲಾಗಿದೆ ಎಂದು ಇಂದಿರಾಗಾಂಧಿ ಪ್ರಾದೇಶಿಕ ಆರೋಗ್ಯ ವಿಜ್ಞಾನ ಸಂಸ್ಥೆ ಆಸ್ಪತ್ರೆಯ ಮರಣೋತ್ತರ ಪರೀಕ್ಷಾ ವರದಿ ತಿಳಿಸಿದೆ.   

‘ತಲೆಗೆ ಹಿಂಬದಿಯಿಂದ ಹಾಗೂ ಎದುರಿನಿಂದ ಹಲ್ಲೆ ಮಾಡಲಾಗಿದೆ. ಸೀಳಿರುವ ಎರಡು ಗುರುತುಗಳು ಇವೆ‘ ಎಂದು ಈಸ್ಟ್‌ ಖಾಸಿ ಹಿಲ್ಸ್‌ ಜಿಲ್ಲೆಯ ಪೊಲೀಸ್ ವರಿಷ್ಠ ವಿವೇಕ್‌ ಸಿಯೀಂ ತಿಳಿಸಿದರು.

ಸುಳಿವು ನೀಡಿದ್ದ ಮಾರ್ಗದರ್ಶಿ ಸಂತಸ ಸೋಹ್ರಾ

ಮೇಘಾಲಯ: ‘ರಾಜಾ –ಸೋನಂ ದಂಪತಿ ಕಾಣೆಯಾಗಿದ್ದ ದಿನದಂದು ಅವರ ಜೊತೆ ಮೂವರು ಅಪರಿಚಿತರಿದ್ದರು’ ಎಂದು ಪ್ರವಾಸಿ ಮಾರ್ಗದರ್ಶಿ ನೀಡಿದ್ದ ಮಾಹಿತಿ ಪ್ರಕರಣ ಭೇದಿಸಲು ನೆರವಾಗಿದೆ. ‘ನಾನು ನೀಡಿದ್ದ ಮಾಹಿತಿ ಆರೋಪಿಗಳ ಪತ್ತೆಗೆ ನೆರವಾಗಿದ್ದು ಖುಷಿ ನೀಡಿದೆ. ಪ್ರಕರಣವನ್ನು ಬಳಸಿಕೊಂಡು ಸೋಹ್ರಾ ಜಿಲ್ಲೆ ಹೆಸರಿಗೆ ಕಳಂಕ ತರುವ ಯತ್ನ ನಡೆದಿತ್ತು’ ಎಂದು ಪ್ರವಾಸಿ ಮಾರ್ಗದರ್ಶಿ ಅಲ್ಬರ್ಟ್ ಡೆ ಪ್ರತಿಕ್ರಿಯಿಸಿದರು.

ನನ್ನ ಮಗ ಸಂಕಟ ಅನುಭವಿಸಿ ಸತ್ತಿದ್ದಾನೆ. ಇಂಥ ಸ್ಥಿತಿ ಭವಿಷ್ಯದಲ್ಲಿ ಯಾವುದೇ ಪೋಷಕರಿಗೆ ಬರಬಾರದು. ಪಾಠ ಕಲಿಸುವಂತೆ ಎಲ್ಲ ತಪ್ಪಿತಸ್ಥರನ್ನು ನೇಣಿಗೆ ಹಾಕಬೇಕು. 
-ಅಶೋಕ್‌ ರಘುವಂಶಿ, ಮೃತ ಉದ್ಯಮಿಯ ತಂದೆ
ರಾಜಾ ಕೊಲೆಯಲ್ಲಿ ಸೋನಂ ತಪ್ಪಿದ್ದರೆ ನೇಣಿಗೆ ಹಾಕಲಿ. ಸರ್ಕಾರ ಏನು ತೀರ್ಮಾನ ಕೈಗೊಳ್ಳುವುದೋ ಅದನ್ನು ನಾವು ಸ್ವೀಕರಿಸುತ್ತೇವೆ.
-ಗೋವಿಂದ್, ಆರೋಪಿ ನವವಿವಾಹಿತೆಯ ಸಹೋದರ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.