ADVERTISEMENT

ಭಾರತ ಮೂಲದ ಅರ್ಥಶಾಸ್ತ್ರಜ್ಞ ಮೇಘನಾದ್ ದೇಸಾಯಿ ನಿಧನ: ಮೋದಿ ಸೇರಿ ಗಣ್ಯರ ಸಂತಾಪ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಜುಲೈ 2025, 5:51 IST
Last Updated 30 ಜುಲೈ 2025, 5:51 IST
<div class="paragraphs"><p>ಮೇಘನಾದ್ ದೇಸಾಯಿ</p></div>

ಮೇಘನಾದ್ ದೇಸಾಯಿ

   

–ಪಿಟಿಐ ಚಿತ್ರ

ನವದೆಹಲಿ: ಭಾರತ ಮೂಲದ ಬ್ರಿಟಿಷ್‌ ಅರ್ಥಶಾಸ್ತ್ರಜ್ಞ ಮೇಘನಾದ್ ದೇಸಾಯಿ (85) ಅವರು ಮಂಗಳವಾರ ರಾತ್ರಿ ನಿಧನರಾಗಿದ್ದಾರೆ. ಮೇಘನಾದ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

ADVERTISEMENT

ಅನಾರೋಗ್ಯದಿಂದ ಬಳಲುತ್ತಿದ್ದ ಮೇಘನಾದ್ ದೇಸಾಯಿ ಅವರು ಗುರುಗ್ರಾಮದ ಆಸ್ಪತ್ರೆಯಲ್ಲಿ ನಿಧನರಾದರು ಎಂದು ಲಂಡನ್‌ನಲ್ಲಿರುವ ಅವರ ಕುಟುಂಬದ ಮೂಲಗಳು ತಿಳಿಸಿವೆ.

ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರಾದ ದೇಸಾಯಿ ಅವರು 1965 ರಿಂದ 2003ರವರೆಗೆ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ (ಎಲ್ಎಸ್ಇ)ನಲ್ಲಿ ಬೋಧಕರಾಗಿದ್ದರು. ಅವರು ಬ್ರಿಟನ್‌ ಸಂಸತ್ತಿನ ಮೇಲ್ಮನೆ ‘ಹೌಸ್‌ ಆಫ್‌ ಲಾರ್ಡ್ಸ್‌’ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು.

‘ಶ್ರೇಷ್ಠ ಚಿಂತಕ, ಬರಹಗಾರ ಮತ್ತು ಅರ್ಥಶಾಸ್ತ್ರಜ್ಞ ಮೇಘನಾದ್ ದೇಸಾಯಿ ಅವರ ನಿಧನದಿಂದ ದುಃಖಿತನಾಗಿದ್ದೇನೆ. ಅವರು ಸದಾ ಭಾರತ ಮತ್ತು ಭಾರತೀಯ ಸಂಸ್ಕೃತಿಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಭಾರತ-ಬ್ರಿಟನ್ ಸಂಬಂಧಗಳನ್ನು ಗಟ್ಟಿಗೊಳಿಸುವಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದರು. ಅವರೊಂದಿಗಿನ ಅಮೂಲ್ಯವಾದ ಕ್ಷಣಗಳನ್ನು ಪ್ರೀತಿಯಿಂದ ನೆನಪಿಸಿಕೊಳ್ಳುತ್ತೇನೆ. ಅವರ ಕುಟುಂಬ ಮತ್ತು ಸ್ನೇಹಿತರಿಗೆ ನನ್ನ ಸಂತಾಪಗಳು. ಓಂ ಶಾಂತಿ’ ಎಂದು ಪ್ರಧಾನಿ ನರೇಂದ್ರ ಮೋದಿ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ.

‘ಖ್ಯಾತ ಅರ್ಥಶಾಸ್ತ್ರಜ್ಞ, ಚಿಂತಕ ಮತ್ತು ಬರಹಗಾರ ಮೇಘನಾದ್ ದೇಸಾಯಿ ಅವರ ನಿಧನದಿಂದ ತೀವ್ರ ದುಃಖವಾಗಿದೆ. ಭಾರತ-ಬ್ರಿಟನ್ ಸಂಬಂಧಗಳನ್ನು ಗಟ್ಟಿಗೊಳಿಸಲು ಅವರ ಪ್ರಯತ್ನಗಳು ಮೌಲ್ಯಯುತವಾಗಿದ್ದವು. ಅವರು ಭಾರತೀಯ ಸಂಸ್ಕೃತಿಯೊಂದಿಗೆ ಆಳವಾದ ಸಂಬಂಧ ಹೊಂದಿದ್ದರು. ಅವರೊಂದಿಗಿನ ಒಡನಾಟವನ್ನು ನಾನು ಪ್ರೀತಿಯಿಂದ ನೆನಪಿಸಿಕೊಳ್ಳುತ್ತೇನೆ. ಅವರ ಕುಟುಂಬ ಮತ್ತು ಸ್ನೇಹಿತರಿಗೆ ನನ್ನ ಸಂತಾಪಗಳು. ಓಂ ಶಾಂತಿ’ ಎಂದು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯೆಲ್ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಅರ್ಥಶಾಸ್ತ್ರಜ್ಞ, ಚಿಂತಕ, ಲೇಬರ್ ಪಾರ್ಟಿಯ ಮೊದಲ ಭಾರತೀಯ ಸದಸ್ಯ ಮತ್ತು ಬ್ರಿಟನ್‌ ಸಂಸತ್ತಿನ ಮೇಲ್ಮನೆ ‘ಹೌಸ್‌ ಆಫ್‌ ಲಾರ್ಡ್ಸ್‌’ ಸದಸ್ಯರಾಗಿದ್ದ ಮೇಘನಾದ್ ದೇಸಾಯಿ ಅವರ ನಿಧನದಿಂದ ತೀವ್ರ ದುಃಖಿತನಾಗಿದ್ದೇನೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ.

‘ಮೇಘನಾದ್ ದೇಸಾಯಿ ಅವರ ನಿಧನದ ಸುದ್ದಿ ಕೇಳಿ ತೀವ್ರ ದುಃಖವಾಯಿತು. ಅತ್ಯುನ್ನತ ಬುದ್ಧಿಜೀವಿ, ಅದ್ಭುತ ಅರ್ಥಶಾಸ್ತ್ರಜ್ಞರಾಗಿದ್ದ ಅವರು ಉದಾರವಾದ ಮತ್ತು ಮುಕ್ತ ಮಾರುಕಟ್ಟೆಯ ಪರವಾಗಿ ಉತ್ಸಾಹಭರಿತ ಧ್ವನಿಯಾಗಿದ್ದರು. ಶೈಕ್ಷಣಿಕ ಮತ್ತು ಸಾರ್ವಜನಿಕ ಜೀವನಕ್ಕೆ ಅವರ ಕೊಡುಗೆಗಳು ಅಪಾರ. ನಾನು ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ. ಅವರ ಕುಟುಂಬ ಮತ್ತು ಪ್ರೀತಿಪಾತ್ರರಿಗೆ ನನ್ನ ಸಂತಾಪಗಳು’ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.