ADVERTISEMENT

ಅಧಿಕಾರ ಕಳೆದುಕೊಂಡಿರುವ ಮೆಹಬೂಬಾ ಮುಫ್ತಿಯಿಂದ ದ್ವೇಷದ ರಾಜಕಾರಣ: ಬಿಜೆಪಿ

ಪಿಟಿಐ
Published 21 ಆಗಸ್ಟ್ 2021, 16:45 IST
Last Updated 21 ಆಗಸ್ಟ್ 2021, 16:45 IST
ಮೆಹಬೂಬಾ ಮುಫ್ತಿ (ಪಿಟಿಐ ಚಿತ್ರ)
ಮೆಹಬೂಬಾ ಮುಫ್ತಿ (ಪಿಟಿಐ ಚಿತ್ರ)   

ಜಮ್ಮು: ಅಧಿಕಾರ ಕಳೆದುಕೊಂಡಿರುವ ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಬಿಜೆಪಿಯ ಜಮ್ಮು–ಕಾಶ್ಮೀರ ಘಟಕದ ಅಧ್ಯಕ್ಷ ರವೀಂದರ್ ರೈನಾ ದೂರಿದ್ದಾರೆ.

ಅಫ್ಗಾನಿಸ್ತಾನವನ್ನು ತಾಲಿಬಾನ್ ವಶಕ್ಕೆ ತೆಗೆದುಕೊಂಡಿರುವುದನ್ನು ಉಲ್ಲೇಖಿಸಿ, ನೆರೆ ರಾಷ್ಟ್ರದ ಘಟನೆಯಿಂದ ಕೇಂದ್ರ ಸರ್ಕಾರ ಪಾಠ ಕಲಿಯಬೇಕು. ಜಮ್ಮು–ಕಾಶ್ಮೀರದ ಜನರೊಂದಿಗೆ ಮಾತುಕತೆ ನಡೆಸಬೇಕು ಮತ್ತು ವಿಶೇಷ ಸ್ಥಾನಮಾನ ವಾಪಸ್ ನೀಡಬೇಕು ಎಂದು ಮುಫ್ತಿ ಹೇಳಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ರೈನಾ, ದೇಶದ ಸಾರ್ವಭೌಮತ್ವ ಮತ್ತು ಸಮಗ್ರತೆಯನ್ನು ಕಾಪಾಡಿಕೊಳ್ಳುವ ಸಾಮರ್ಥ್ಯ ಭಾರತಕ್ಕಿದೆ. ತಾಲಿಬಾನ್, ಅಲ್ ಕೈದಾ, ಲಷ್ಕರ್–ಎ–ತಯ್ಬಾ, ಜೈಷ್–ಎ–ಮೊಹಮ್ಮದ್‌, ಹಿಜ್ಬುಲ್ ಮುಜಾಹಿದೀನ್‌ಗಳಂಥ ಉಗ್ರ ಸಂಘಟನೆಗಳನ್ನು ಮಟ್ಟ ಹಾಕುವ ಶಕ್ತಿ ದೇಶಕ್ಕಿದೆ ಎಂದು ಹೇಳಿದ್ದಾರೆ.

‘ಮೆಹಬೂಬಾ ಕೆಲವು ತಪ್ಪು ಕಲ್ಪನೆಗಳನ್ನು ಹೊಂದಿದ್ದಾರೆ. ಭಾರತವು ಶಕ್ತಿಶಾಲಿ ರಾಷ್ಟ್ರವಾಗಿದ್ದು, ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕದ ಅಧ್ಯಕ್ಷ ಜೋ ಬೈಡೆನ್‌ರಂತಲ್ಲ. ಅವರು ಅಫ್ಗಾನಿಸ್ತಾನದಿಂದ ಸೇನೆ ಹಿಂಪಡೆದಿರಬಹುದು. ಭಾರತದ ವಿರುದ್ಧ ಕಾರ್ಯಾಚರಿಸುವ ಯಾವ ಸಂಘಟನೆಯೇ ಇರಲಿ, ಅದು ತಾಲಿಬಾನ್, ಅಲ್ ಕೈದಾ, ಲಷ್ಕರ್–ಎ–ತಯ್ಬಾ, ಜೈಷ್–ಎ–ಮೊಹಮ್ಮದ್‌, ಹಿಜ್ಬುಲ್ ಮುಜಾಹಿದೀನ್‌ ಯಾವುದೇ ಇರಬಹುದು. ಅಂಥ ಸಂಘಟನೆಗಳನ್ನು ಭಾರತ ನಿರ್ನಾಮ ಮಾಡಲಿದೆ’ ಎಂದು ಅವರು ಹೇಳಿದ್ದಾರೆ.

ಪಿಡಿಪಿ ಅಧ್ಯಕ್ಷೆ ದೇಶಕ್ಕೆ ದೊಡ್ಡ ಪಾಪ ಮಾಡಿದ್ದಾರೆ. ಜಮ್ಮು–ಕಾಶ್ಮೀರದ ಜನರು ತಮ್ಮ ರಾಷ್ಟ್ರವನ್ನು ಪ್ರೀತಿಸುವವರು ಮತ್ತು ರಾಷ್ಟ್ರಧ್ವಜ ಎತ್ತರಕ್ಕೆ ಹಾರಿರುವಂತೆ ನೋಡಿಕೊಳ್ಳುವ ದೇಶಭಕ್ತರು. ಅವರು ಭಯೋತ್ಪಾದನೆ ವಿರುದ್ಧ ಹೋರಾಡುತ್ತಿರುವ ಪೊಲೀಸ್, ಸೇನೆ, ಅರೆಸೇನಾ ಪಡೆಗಳಿಗೆ ನೆರವು ನೀಡುತ್ತಿದ್ದಾರೆ’ ಎಂದು ರೈನಾ ಹೇಳಿದ್ದಾರೆ.

ಜಮ್ಮು–ಕಾಶ್ಮೀರದಲ್ಲಿ ಮುಫ್ತಿ ಅಧಿಕಾರ ಕಳೆದುಕೊಂಡಿದ್ದಾರೆ. ಜನ ಅವರನ್ನು ತಿರಸ್ಕರಿಸಿದ್ದಾರೆ ಎಂದು ಬಿಜೆಪಿ ನಾಯಕ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.