ADVERTISEMENT

ಅಫ್ತಾಬ್‌ ಐದು ದಿನ ಪೊಲೀಸ್‌ ಕಸ್ಟಡಿಗೆ; ಮಂಪರು ಪರೀಕ್ಷೆಗೂ ಕೋರ್ಟ್‌ ಅಸ್ತು

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2022, 11:31 IST
Last Updated 26 ನವೆಂಬರ್ 2022, 11:31 IST
ಅಫ್ತಾಬ್‌ ಅಮೀನ್‌ ಪೂನಾವಾಲಾ (ಇನ್‌ಸ್ಟಾಗ್ರಾಮ್‌ ಚಿತ್ರ)
ಅಫ್ತಾಬ್‌ ಅಮೀನ್‌ ಪೂನಾವಾಲಾ (ಇನ್‌ಸ್ಟಾಗ್ರಾಮ್‌ ಚಿತ್ರ)   

ನವದೆಹಲಿ: ಸಹಜೀವನ ಸಂಗಾತಿ ಬರ್ಬರ ಹತ್ಯೆ ಮಾಡಿದ ಆರೋಪಿ ಅಫ್ತಾಬ್‌ ಅಮೀನ್‌ ಪೂಲಾವಾಲಾನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲು ದೆಹಲಿ ನ್ಯಾಯಾಲಯವು ಗುರುವಾರ ಮತ್ತೆ ಐದು ದಿನಗಳವರೆಗೆ ಮಹರೌಲಿ ನಗರ ಪೊಲೀಸ್‌ ಕಸ್ಟಡಿಗೆ ನೀಡಿದ್ದು, ಅಫ್ತಾಬ್‌ ಮಂಪರು ಪರೀಕ್ಷೆಗೂ ಅನುಮತಿ ಕೊಟ್ಟಿದೆ.

ಈ ಪ್ರಕರಣ ಸಂಬಂಧ ಪೊಲೀಸರು ಆರೋಪಿಯ ಮಂಪರು ಪರೀಕ್ಷೆ ನಡೆಸಲು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಅವಿರಲ್‌ ಶುಕ್ಲಾ ಅವರು ಆದೇಶ ಹೊರಡಿಸಿದರು.

ಅಫ್ತಾಬ್‌ಗೆ ಮರಣದಂಡನೆ: ವಕೀಲರ ಆಗ್ರಹ
ಪೊಲೀಸ್‌ ಕಸ್ಟಡಿಯಲ್ಲಿರುವ ಆರೋಪಿ ಅಫ್ತಾಬ್‌ಗೆ ಮರಣ ದಂಡನೆ ವಿಧಿಸುವಂತೆ ಒತ್ತಾಯಿಸಿ ಸಾಕೇತ್‌ ಜಿಲ್ಲಾ ನ್ಯಾಯಾಲಯಗಳ ವಕೀಲರ ಸಮೂಹ ಗುರುವಾರ ಪ್ರತಿಭಟನೆ ನಡೆಸಿತು.

ADVERTISEMENT

ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಅವಿರಲ್ ಶುಕ್ಲಾ ಅವರ ಎದುರು ಆರೋಪಿಯನ್ನು ಹಾಜರುಪಡಿಸುವ ಮಾಹಿತಿ ಹೊರಬಿದ್ದಂತೆ, ನ್ಯಾಯಾಲಯದ ಆವರಣದಲ್ಲಿ ಮಧ್ಯಾಹ್ನ 3 ಗಂಟೆ ಸುಮಾರಿಗೆ ವಕೀಲರ ಗುಂಪು ಜಮಾಯಿಸಿತು.

ಪ್ರತಿಭಟನನಿರತರ ಪರ ಮಾತನಾಡಿದ ಸುರೇಂದ್ರ ಕುಮಾರ್‌, ‘ಆರೋಪಿಯ ಘೋರ ಅಪರಾಧದ ವಿರುದ್ಧ ಪ್ರತಿಭಟಿಸುತ್ತಿದ್ದೇವೆ. ಈ ಪ್ರಕರಣ ತ್ವರಿತ ನ್ಯಾಯಾಲಯದಲ್ಲಿ ವಿಚಾರಣೆ ನಡೆದು, ಆದಷ್ಟು ಶೀಘ್ರ ಆರೋಪಿಗೆ ಶಿಕ್ಷೆಯಾಗಬೇಕು’ ಎಂದು ಹೇಳಿದರು.

ಆರೋಪಿಯನ್ನು ವಿಡಿಯೊ ಕಾನ್ಫರೆನ್ಸಿಂಗ್ ಮೂಲಕ ಕೋರ್ಟ್‌ಗೆ ಹಾಜರುಪಡಿಸಲುದೆಹಲಿ ಪೊಲೀಸರಿಗೆಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಅವರು ಬುಧವಾರವೇ ಅನುಮತಿ ನೀಡಿದ್ದರು.

ಕೊಲೆ ರಹಸ್ಯ ಭೇದಿಸಲು ನೆರವಾದ ಶ್ರದ್ಧಾ ಸಕ್ರಿಯ ಖಾತೆ
ಆರೋಪಿಯನ್ನು ‘ಚತುರ’ ಎಂದಿರುವ ಪೊಲೀಸರು, ಆತನಿಗೆ ಹಿಂದಿ ಗೊತ್ತಿದ್ದರೂ ವಿಚಾರಣೆ ವೇಳೆ ಇಂಗ್ಲಿಷಿನಲ್ಲಿ ಸರಾಗವಾಗಿ ಉತ್ತರಿಸುತ್ತಿದ್ದ. ಅದೃಷ್ಟದಿಂದ ಪಾರಾಗಬಹುದೆಂದು ಭಾವಿಸಿದ್ದ, ಆದರೆ ಅಷ್ಟರಲ್ಲಿ ಆತನ ಮನೆ ಬಾಗಿಲು ತಟ್ಟಿದೆವು. ಸಾಮಾಜಿಕ ಮಾಧ್ಯಮದಲ್ಲಿನ ಶ್ರದ್ಧಾ ಅವರ ಖಾತೆಯಲ್ಲಿ ಆರೋಪಿಸಕ್ರಿಯವಾಗಿದ್ದುದೇ ಶ್ರದ್ಧಾ ನಾಪತ್ತೆ– ಭೀಕರ ಹತ್ಯೆಯ ರಹಸ್ಯ ಭೇದಿಸಲು ನೆರವಾಯಿತು ಎನ್ನುತ್ತಾರೆ.

ತನಿಖೆಯಲ್ಲಿ ಮೈಜುಮ್ಮೆನಿಸುವ ಭಯಾನಕ ಸಂಗತಿಗಳು ಒಂದೊಂದೇ ಹೊರಬೀಳುತ್ತಿವೆ. ಇನ್ನೂ ಪತ್ತೆಯಾಗದಿರುವ ಶ್ರದ್ಧಾ ಶವದ ಭಾಗಗಳಿಗೆ ಪೊಲೀಸರ ಶೋಧ ಮುಂದುವರಿದಿದೆ.

ಎರಡು ದಿನಗಳಲ್ಲಿ ಶವ 35 ತುಂಡಾಗಿಸಿದ ಕಟುಕ
ಹೋಟೆಲ್ ನಿರ್ವಹಣೆ ಕೋರ್ಸ್‌ ಅಧ್ಯಯನ ಮಾಡಿದ್ದ ಅಫ್ತಾಬ್‌, ಮಾಂಸ ಕತ್ತರಿಸುವ ಬಗ್ಗೆಯೂ ಎರಡು ವಾರಗಳ ತರಬೇತಿ ಪಡೆದಿದ್ದ. ಇದರಿಂದ ತೀಕ್ಷ್ಣ ಹರಿತ ಚಾಕುಗಳನ್ನು ಬಳಸುವುದು ಆತನಿಗೆ ಗೊತ್ತಿತ್ತು. ಆ ಜ್ಞಾನವನ್ನು ಆತ ಶ್ರದ್ಧಾ ದೇಹ ಕತ್ತರಿಸಲು ಬಳಸಿದ್ದಾನೆ. ಆಕೆಯ ದೇಹವನ್ನು ಎರಡು ದಿನಗಳ ಕಾಲ 35 ತುಂಡುಗಳಾಗಿ ಕತ್ತರಿಸಿದ್ದೇನೆ ಎಂದು ಆರೋಪಿಯು ಪೊಲೀಸ್‌ ವಿಚಾರಣೆಯಲ್ಲಿ ಹೇಳಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.