ADVERTISEMENT

ಮೇಕೆದಾಟು ಅಣೆಕಟ್ಟು ನಿರ್ಮಿಸಲು ಕರ್ನಾಟಕ ಮುಂದಾದರೆ ಪ್ರತಿಭಟನೆ: ಎಐಎಡಿಎಂಕೆ ಎಚ್ಚರಿಕೆ

ಪಿಟಿಐ
Published 1 ಜೂನ್ 2023, 8:19 IST
Last Updated 1 ಜೂನ್ 2023, 8:19 IST
ತಮಿಳುನಾಡಿನ ಮುಖ್ಯಮಂತ್ರಿ ಪಳನಿಸ್ವಾಮಿ
ತಮಿಳುನಾಡಿನ ಮುಖ್ಯಮಂತ್ರಿ ಪಳನಿಸ್ವಾಮಿ   

ಚೆನ್ನೈ: ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ಕರ್ನಾಟಕ ಮುಂದಾದರೆ ಪ್ರತಿಭಟನೆ ನಡೆಸುವುದಾಗಿ ತಮಿಳುನಾಡಿನ ವಿರೋಧ ಪಕ್ಷ ಎಐಎಡಿಎಂಕೆ ಗುರುವಾರ ಎಚ್ಚರಿಕೆ ನೀಡಿದೆ.

ಮೇಕೆದಾಟುವಿನಲ್ಲಿ ಕಾವೇರಿ ನದಿಗೆ ಅಣೆಕಟ್ಟು ನಿರ್ಮಿಸುವುದಾಗಿ ಡಿ.ಕೆ.ಶಿವಕುಮಾರ್‌ ನೀಡಿರುವ ಹೇಳಿಕೆಯನ್ನು ವಿರೋಧ ಪಕ್ಷದ ನಾಯಕ ಕೆ. ಪಳನಿಸ್ವಾಮಿ ಖಂಡಿಸಿದ್ದಾರೆ.

ನೆರೆಯ ರಾಜ್ಯಗಳು ನದಿ ಕೆಳಗಿನ ರಾಜ್ಯಗಳ ಹಿತಾಸಕ್ತಿ ವಿರುದ್ಧವಾಗಿ ವರ್ತಿಸಬಾರದು ಎಂದು ಹೇಳಿದರು. ಅಲ್ಲದೆ, ಮೇಕೆದಾಟಿನಲ್ಲಿ ಅಣೆಕಟ್ಟು ನಿರ್ಮಾಣ ಮಾಡುವುದು ತಮಿಳುನಾಡನ್ನು ಮರುಭೂಮಿಯನ್ನಾಗಿ ಪರಿವರ್ತಿಸುವ ಪ್ರಯತ್ನ ಎಂದೂ ಆರೋಪಿಸಿದರು.

ADVERTISEMENT

'ಅಂತರ-ರಾಜ್ಯ ನದಿ ನೀರಿನ ವಿವಾದಗಳ ಕಾಯಿದೆ-1956ರ ಪ್ರಕಾರ ಕರ್ನಾಟಕವು ನದಿ ಪಥ ಬದಲಾಯಿಸುವ, ನೀರು ತಡೆಯುವ ಹಕ್ಕನ್ನು ಹೊಂದಿಲ್ಲ. ಕಾವೇರಿ ಜಲವಿವಾದದ ಅಂತಿಮ ತೀರ್ಪಿನಲ್ಲಿ ನದಿಯ ಕೆಳಭಾಗದ ರಾಜ್ಯಗಳ ಒಪ್ಪಿಗೆ ಇಲ್ಲದೇ ಯಾವುದೇ ನೀರಾವರಿ ಯೋಜನೆಯನ್ನು ಕೈಗೆತ್ತಿಕೊಳ್ಳಬಾರದು ಎಂಬುದು ಸ್ಪಷ್ಟವಾಗಿದೆ’ ಎಂದು ಪಳನಿಸ್ವಾಮಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಆಕ್ರಮಣಕಾರಿಯಾಗಿ ವರ್ತಿಸಬೇಡಿ ಎಂದು ಡಿಕೆಶಿಗೆ ಸಲಹೆ ನೀಡಿದ್ದ ತಮಿಳುನಾಡು ಸಚಿವ

ಮೇಕೆದಾಟು ಯೋಜನೆಗೆ ಸಂಬಂಧಿಸಿ ಆಕ್ರಮಣಕಾರಿಯಾಗಿ ವರ್ತಿಸಬೇಡಿ ಎಂದು ಕರ್ನಾಟಕ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ತಮಿಳುನಾಡು ಸರ್ಕಾರ ಬುಧವಾರ ಹೇಳಿದೆ.

ಮೇಕೆದಾಟುವಿನಲ್ಲಿ ಕಾವೇರಿ ನದಿಗೆ ಅಣೆಕಟ್ಟು ನಿರ್ಮಿಸುವುದಾಗಿ ಡಿ.ಕೆ.ಶಿವಕುಮಾರ್‌ ನೀಡಿರುವ ಹೇಳಿಕೆಯನ್ನು ಖಂಡಿಸಿರುವ ಡಿಎಂಕೆ ನೇತೃತ್ವದ ಸರ್ಕಾರ, ಮೇಕೆದಾಟು ಯೋಜನೆಯನ್ನು ವಿರೋಧಿಸುವುದಾಗಿ ಪುನರುಚ್ಚರಿಸಿದೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ, ಡಿಎಂಕೆ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಜಲ ಸಂಪನ್ಮೂಲ ಸಚಿವ ದೊರೈ ಮುರುಗನ್‌, ‘ಅಧಿಕಾರಕ್ಕೆ ಬಂದು ಕೆಲ ದಿನಗಳು ಕಳೆದಿವೆ. ಅಷ್ಟರಲ್ಲೇ, ನೆರೆಯ ರಾಜ್ಯದ ಬಗ್ಗೆ ಶಿವಕುಮಾರ್‌ ಅವರು ಆಕ್ರಮಣಕಾರಿಯಾಗಿ ವರ್ತಿಸುತ್ತಿರುವುದಕ್ಕೆ ಆಶ್ಚರ್ಯವಾಗಿದೆ. ಮೇಕೆದಾಟು ಯೋಜನೆ ಕುರಿತು ಅಧಿಕಾರಿಗಳು ಅವರಿಗೆ ವಿವರವಾದ ಮಾಹಿತಿ ನೀಡಿಲ್ಲ ಅನಿಸುತ್ತದೆ’ ಎಂದಿದ್ದಾರೆ.

‘ನಾನು ಶಿವಕುಮಾರ್ ಅವರನ್ನು ಭೇಟಿ ಮಾಡಿ, ಈ ವಿಷಯ ಕುರಿತು ವಿವರಿಸುತ್ತೇನೆ. ಅಲ್ಲಿಯವರೆಗೆ ಅವರು ತಾಳ್ಮೆಯಿಂದ ಇರುತ್ತಾರೆ ಎಂದು ಆಶಿಸುವೆ’.

‘ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಭಾರಿ ಗೆಲುವು ಸಾಧಿಸಿದ್ದಕ್ಕಾಗಿ ಕಾಂಗ್ರೆಸ್‌ ಪಕ್ಷಕ್ಕೆ ಹಾಗೂ ಶಿವಕುಮಾರ್‌ ಅವರಿಗೆ ಅಭಿನಂದನೆ ಸಲ್ಲಿಸಲು ಅವರನ್ನು ಭೇಟಿಯಾಗಲು ಯೋಜಿಸಿದ್ದೆ. ಆದರೆ, ಈಗ ಈ ಹೇಳಿಕೆ ಮೂಲಕವೇ ಅವರಿಗೆ ಶುಭಾಶಯಗಳನ್ನು ಕೋರುತ್ತಿದ್ದೇನೆ’ ಎಂದು ಅವರು ಪ್ರಕಟಣೆಯಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.