ಮುಂಬೈ: ಪಟಾಕಿಗಳಿಂದ ಮಾಲಿನ್ಯ ಹೆಚ್ಚಳವಾಗುತ್ತಿದೆ, ಪಾರಿವಾಳಗಳಿಂದಲ್ಲ. ನಗರದಲ್ಲಿರುವ ಪಾರಿವಾಳ ಆಹಾರ ತಾಣಗಳನ್ನು ಮರಳಿ ಆರಂಭಿಸಬೇಕು ಎಂದು ಬಿಜೆಪಿ ನಾಯಕಿ ಮೇನಕಾ ಗಾಂಧಿ ಅವರು ಶನಿವಾರ ಒತ್ತಾಯಿಸಿದ್ದಾರೆ.
ಪಾರಿವಾಳಗಳಿಂದ ಸಾರ್ವಜನಿಕರ ಆರೋಗ್ಯ ಹದಗೆಡುತ್ತದೆ ಎಂದು ಬೃಹನ್ ಮುಂಬೈ ಮಹಾನಗರ ಪಾಲಿಕೆಯು ಪಾರಿವಾಳಗಳಿಗೆ ಆಹಾರ ನೀಡುವುದನ್ನು ನಿಷೇಧಿಸಿತ್ತು. ಕೆಲವು ಪಾರಿವಾಳ ಆಹಾರ ತಾಣಗಳನ್ನು ಕಳೆದ ತಿಂಗಳು ಮುಚ್ಚಿಸಿತ್ತು. ಇದರ ಕುರಿತು ನಿರ್ಧಾರ ತೆಗೆದುಕೊಳ್ಳಲು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು ಸಮಿತಿಯನ್ನು ರಚಿಸಿದ್ದರು.
‘ಖಾಯಿಲೆ ಹರಡುತ್ತವೆ ಎಂದು ಪಾರಿವಾಳಗಳನ್ನು ಕೊಲ್ಲುವುದಾದರೆ, ಪಟಾಕಿಗಳು ಅದಕ್ಕೂ ಹೆಚ್ಚು ಮಾಲಿನ್ಯಕ್ಕೆ ಕಾರಣವಾಗುತ್ತವೆ. ಅವುಗಳನ್ನು ಕೂಡ ನಿಷೇಧಿಸಬೇಕು. ರಾಮ ಮತ್ತು ಸೀತೆಯರ ಕಾಲದಲ್ಲಿ ಪಟಾಕಿಗಳಿರಲಿಲ್ಲ’ ಎಂದು ಮೇನಕಾ ಗಾಂಧಿ ಹೇಳಿದ್ದಾರೆ.
‘ಭಾರತವು ಬದುಕಿ ಮತ್ತು ಬದುಕಲು ಬಿಡಿ ಎಂಬ ತತ್ವವನ್ನು ಅಡಿಪಾಯವಾಗಿ ಹೊಂದಿದೆ. ಪಾರಿವಾಳಗಳಿಂದ ಇದುವರೆಗೂ ಯಾರೂ ಮೃತಪಟ್ಟ ಉದಾಹರಣೆಗಳಿಲ್ಲ. ಅವುಗಳು ಯಾರಿಗೂ ತೊಂದರೆ ನೀಡಿಲ್ಲ’ ಎಂದಿದ್ದಾರೆ.
‘ಮುಂಬೈನಲ್ಲಿ 57 ಪಾರಿವಾಳ ಆಹಾರ ತಾಣಗಳಿದ್ದು, ಕೆಲವನ್ನು ಮುಚ್ಚಲಾಗಿದೆ. ಮುಖ್ಯಮಂತ್ರಿ ಅವರು ರಚಿಸಿರುವ ಸಮಿತಿಯು ಇನ್ನೊಂದು ತಿಂಗಳಲ್ಲಿ ವರದಿ ನೀಡಲಿದ್ದು, ಈ ನಿರ್ಧಾರವನ್ನು ಹಿಂದೆ ತೆಗೆದುಕೊಳ್ಳುವ ನಿರೀಕ್ಷೆಯಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.