
ಕೋಲ್ಕತ್ತ: ‘ಜೀವ ಉಳಿಸಿಕೊಳ್ಳಲು ಅಂದು ಅಕ್ಷರಶಃ ದಿಕ್ಕಾಪಾಲಾಗಿ ಓಡಿದ್ದೆ’... ಇದು ಫುಟ್‌ಬಾಲ್ ಮಾಂತ್ರಿಕ ಲಿಯೋನೆಲ್ ಮೆಸ್ಸಿ ಅವರಿಗೆ ಸಂಗೀತ ನಮನ ಸಲ್ಲಿಸಲು ಲಂಡನ್‌ನಿಂದ ಬಂದಿದ್ದ ಭಾರತೀಯ ಮೂಲದ ಹಾಡುಗಾರ ಚಾರ್ಲ್ಸ್ ಆ್ಯಂಟೊನಿ ಅವರ ಮಾತು. ಕೋಲ್ಕತ್ತದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಡಿಸೆಂಬರ್ 13ರಂದು ನಡೆದ ಭಯಾನಕ ಘಟನೆಯ ಅನುಭವವನ್ನು ಅವರು ಮೇಲಿನಂತೆ ಹಂಚಿಕೊಂಡರು.
ಮಲಯಾಳ, ಬಂಗಾಳಿ ಸೇರಿದಂತೆ 18 ಭಾಷೆಗಳಲ್ಲಿ ಹಾಡಬಲ್ಲ ಚಾರ್ಲ್ಸ್ ಆಂಟೊನಿ, ತನ್ನ ಜೀವನದಲ್ಲಿ ಒಮ್ಮೆ ಮೆಸ್ಸಿಗಾಗಿ ಸಂಗೀತ ಗೌರವ ಸಲ್ಲಿಸುವ ಕನಸು ನನಸಾಗುವ ಖುಷಿಯಲ್ಲಿದ್ದರು. ಡಿಸೆಂಬರ್ 13ರಂದು ಕೋಲ್ಕತ್ತದ ಕಾರ್ಯಕ್ರಮದಲ್ಲಿ ಮೆಸ್ಸಿ ಸ್ವಾಗತಕ್ಕಾಗಿಯೇ ವಿಶೇಷವಾಗಿ ಸ್ಪ್ಯಾನಿಶ್ ಹಾಡು ಸಂಯೋಜಿಸಿದ್ದರು.
‘ಮೆಸ್ಸಿ ಅವರ ಮುಖದಲ್ಲಿ ಮೇಲ್ನೋಟಕ್ಕೆ ನಗು ಕಾಣುತ್ತಿದ್ದರೂ ಒಳಗೆ ಇರಿಸುಮುರಿಸು ಇತ್ತು. ಮೆಸ್ಸಿ ಎದುರು ಹಾಡಲು ನಾನು ಸಜ್ಜಾಗಿದ್ದೆ. ಅಷ್ಟರಲ್ಲಿ ನೀರಿನ ಬಾಟೆಲ್, ಆಹಾರದ ಪೊಟ್ಟಣ, ಕಲ್ಲು ಮತ್ತು ಕಬ್ಬಿಣದ ತುಂಡುಗಳು ಗ್ಯಾಲರಿಯತ್ತ ತೂರಿಬಂದವು. ಇದೆಲ್ಲವೂ ಮೆಸ್ಸಿ ಗಮನಕ್ಕೆ ಬಂತು.’
‘ವಿವಿಐಪಿಗಳನ್ನು ಭೂಗತ ಮಾರ್ಗದಲ್ಲಿ ಬೆಂಗಾವಲಿನಲ್ಲಿ ಕರೆದೊಯ್ಯಲಾಯಿತು. ಅಲ್ಲಿದ್ದ ಕೆಲವರು ನನ್ನನ್ನು ಸಂಘಟಕರಲ್ಲಿ ಒಬ್ಬ ಎಂದು ತಪ್ಪು ತಿಳಿದಿದ್ದರು. ನನ್ನ ಜೀವ ಅಪಾಯದಲ್ಲಿತ್ತು. ಅಷ್ಟರಲ್ಲಿ ಪೊಲೀಸರು ನನಗೆ ಸುರಕ್ಷಿತ ಸ್ಥಳಕ್ಕೆ ಓಡಿಹೋಗುವಂತೆ ಹೇಳಿದರು’ ಎಂದು ತಿಳಿಸಿದರು.
ಸಮಯದಲ್ಲೇ ಗೊಂದಲ: ‘ಕಾರ್ಯಕ್ರಮಕ್ಕೆ ಬರಲು ನೀಡಿದ್ದ ಸಮಯ ಗೊಂದಲದಿಂದ ಕೂಡಿತ್ತು. ಒಮ್ಮೆ ಬೆಳಿಗ್ಗೆ 9.30ಕ್ಕೆ, ಮತ್ತೊಮ್ಮೆ 10.30ಕ್ಕೆ ಬರುವಂತೆ ಹೇಳಿದ್ದರು. ಮೆಸ್ಸಿ ಬಳಿಗೆ ಬಂದ ಪ್ರಮುಖ ಗಣ್ಯರು ಸೆಲ್ಫಿ ತಗೆದುಕೊಳ್ಳುವುದರಲ್ಲೇ ಬ್ಯುಸಿಯಾಗಿದ್ದರು. ಬೆಂಗಳೂರು ಸೇರಿ ದೇಶದ ನಾನಾ ಭಾಗದಿಂದ ಬಂದಿದ್ದ ಜನರಿಗೆ ಮೆಸ್ಸಿಯನ್ನು ನೋಡಲೂ ಆಗಲಿಲ್ಲ. ಇದರಿಂದ ಕೆಲವರು ಕಣ್ಣೀರು ಹಾಕಿದರು. ಕೆಲವರು ಆಕ್ರೋಶಗೊಂಡರು’ ಎಂದರು.
‘ಕಾರ್ಯಕ್ರಮದ ಕರಾಳ ಅಂತ್ಯ ಒಂದೆಡೆಯಾದರೆ, ಮೆಸ್ಸಿಗಾಗಿ ಹಾಡು ಹಾಡಲು ಆಗಲಿಲ್ಲ ಎನ್ನುವ ನೋವು ಈಗಲೂ ಕಾಡುತ್ತಿದೆ’ ಎಂದು ಚಾರ್ಲ್ಸ್ ಆಂಟೊನಿ ಹೇಳಿದರು.
ಮೆಸ್ಸಿ ಕಾರ್ಯಕ್ರಮ: ಎಸ್‌ಐಟಿ ತನಿಖೆಗೆ ತಡೆ ನೀಡಲು ನಕಾರ
ಕೋಲ್ಕತ್ತ (ಪಿಟಿಐ): ಅರ್ಜೆಂಟೀನಾ ಫುಟ್‌ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಕಾರ್ಯಕ್ರಮದ ವೇಳೆ ನಡೆದ ಘಟನೆಗೆ ಸಂಬಂಧಿಸಿದಂತೆ ನಡೆಯುತ್ತಿರುವ ವಿಶೇಷ ತನಿಖಾ ತಂಡದ (ಎಸ್‌ಐಟಿ) ತನಿಖೆಗೆ ತಡೆ ನೀಡಲು ಕೋಲ್ಕತ್ತ ಹೈಕೋರ್ಟ್ ನಿರಾಕರಿಸಿದೆ. ಡಿಸೆಂಬರ್ 13ರಂದು ಮೆಸ್ಸಿ ಅವರ ದರ್ಶನ ಅವಕಾಶ ಸಿಗದೇ ಕೆಲವು ಪ್ರೇಕ್ಷಕರು ಆಕ್ರೋಶಗೊಂಡು ಸಾಲ್ಟ್ ಲೇಕ್ ಮೈದಾನದ ಕಾರ್ಯಕ್ರಮ ವೇದಿಕೆಗೆ ನುಗ್ಗಿ ದಾಂದಲೆ ನಡೆಸಿದ್ದರು. ಪ್ರಕರಣದ ತನಿಖೆಯನ್ನು ಎಸ್‌ಐಟಿ ಬದಲಿಗೆ ಸಿಬಿಐಗೆ ವರ್ಗಾಯಿಸುವಂತೆ ಕೋರಿ ಹೈಕೋರ್ಟ್‌ಗೆ ಮೂರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದ್ದವು. ವಿಪಕ್ಷ ನಾಯಕ ಸುವೇಂದು ಅಧಿಕಾರಿ ಸೇರಿ ಮೂವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.