
ಫುಟ್‌ಬಾಲ್ ದಿಗ್ಗಜ ಲಯೊನೆಲ್ ಮೆಸ್ಸಿ ಅವರನ್ನು ನೋಡಲು ಸಾಧ್ಯವಾಗದ್ದರಿಂದ ರೊಚ್ಚಿಗೆದ್ದ ಅಭಿಮಾನಿಗಳು ಕೋಲ್ಕತ್ತದ ಸಾಲ್ಟ್ ಲೇಕ್ ಸ್ಟೇಡಿಯಂನಲ್ಲಿ ದಾಂದಲೆ ನಡೆಸಿದ್ದ ದೃಶ್ಯ
– ಪಿಟಿಐ ಚಿತ್ರ
ಕೋಲ್ಕತ್ತ: ಇಲ್ಲಿನ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಫುಟ್‌ಬಾಲ್ ದಿಗ್ಗಜ, ಅರ್ಜೆಂಟೀನಾದ ಲಯೊನೆಲ್ ಮೆಸ್ಸಿ ತಮ್ಮ ಕಾರ್ಯಕ್ರಮವನ್ನು ಮೊಟಕುಗೊಳಿಸಿ, ಹಠಾತ್ತನೇ ನಿರ್ಗಮಿಸಿದ್ದರಿಂದ ನಿರಾಸೆಗೊಂಡ ಅವರ ಅಭಿಮಾನಿಗಳು ಆಕ್ರೋಶಗೊಂಡು ದಾಂದಲೆ ನಡೆಸಿದ್ದಕ್ಕೆ ಸಂಬಂಧಿಸಿದಂತೆ ಕಾರ್ಯಕ್ರಮ ಆಯೋಜಿಸಿದ್ದ ಆರು ಮಂದಿಗೆ ಇಲ್ಲಿನ ಪೊಲೀಸರು ಸಮನ್ಸ್ ನೀಡಿದ್ದಾರೆ.
ಪ್ರೇಕ್ಷಕರ ಆಕ್ರೋಶದಿಂದ ಕ್ರೀಡಾಂಗಣದಲ್ಲಿ ನಡೆದ ದಾಂದಲೆಯಿಂದ ಅಂದಾಜು ₹2 ಕೋಟಿ ನಷ್ಟ ಉಂಟಾಗಿದೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಿದ್ದು, ಈ ಸಂಬಂಧ ಐದು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಲಲ್ತುದಾಸ್ ಸೇರಿದಂತೆ ಕಾರ್ಯಕ್ರಮದ ಆಯೋಜಕರಿಗೆ ಪೊಲೀಸರು ನೋಟಿಸ್ ಜಾರಿಗೊಳಿಸಿದ್ದಾರೆ. ಮುಖ್ಯ ಆಯೋಜಕರಾದ ಶತಾದ್ರು ದತ್ತಾ ಅವರನ್ನು ಈಗಾಗಲೇ ಬಂಧಿಸಲಾಗಿದೆ.
ಪಿಐಎಲ್ ದಾಖಲಿಸಲು ಅನುಮತಿ: ಕ್ರೀಡಾಂಗಣದಲ್ಲಿ ನಡೆದ ಅವ್ಯವಸ್ಥೆ ಕುರಿತಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ದಾಖಲಿಸಲು ಕಲ್ಕತ್ತಾ ಹೈಕೋರ್ಟ್ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸುಜಯ್ ಪೌಲ್ ಅನುಮತಿ ನೀಡಿದ್ದಾರೆ.
ಪ್ರಕರಣದ ತನಿಖೆಯನ್ನು ತಕ್ಷಣವೇ ಕೇಂದ್ರಿಯ ತನಿಖಾ ಸಂಸ್ಥೆಗೆ (ಸಿಬಿಐ) ವಹಿಸಲು ನ್ಯಾಯಾಲಯವು ಮಧ್ಯಪ್ರವೇಶಿಸುವಂತೆ ಕೋರಿ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ, ವಕೀಲರಾದ ಸಭ್ಯಸಾಚಿ ಚಟ್ಟೋಪಾಧ್ಯಾಯ ಹಾಗೂ ಮೈನಕ್ ಘೋಷಲ್ ಅವರು ಅರ್ಜಿ ಸಲ್ಲಿಸಿದ್ದರು.
ಅರ್ಜಿ ಪರಿಗಣಿಸಿರುವ ಹೈಕೋರ್ಟ್, ವಿಚಾರಣೆಯನ್ನು ಮುಂದಿನ ವಾರಕ್ಕೆ ನಿಗದಿಪಡಿಸಿದೆ.
ಕೋಲ್ಕತ್ತ: ‘ಸಾಲ್ಟ್‌ಲೇಕ್ ಕ್ರೀಡಾಂಗಣದಲ್ಲಿ ನಡೆದ ಅವ್ಯವಸ್ಥೆಯು ಆಡಳಿತ ವೈಫಲ್ಯವಾಗಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಜನಪರವಾದ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು’ ಎಂದು ರಾಜ್ಯಪಾಲ ಸಿ.ವಿ ಆನಂದ ಬೋಸ್ ತಿಳಿಸಿದ್ದಾರೆ. ಇಲ್ಲಿನ ಲೋಕಭವನದಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಅವರು ‘ಕ್ರೀಡಾಂಗಣದಲ್ಲಿ ನಡೆದ ಘಟನೆಯಿಂದ ಎಲ್ಲೆಡೆಯಿರುವ ಫುಟ್‌ಬಾಲ್ ಅಭಿಮಾನಿಗಳ ಭಾವನೆಗಳಿಗೆ ತೀವ್ರ ನೋವುಂಟಾಗಿದೆ. ಜನಸಾಮಾನ್ಯನ ಅದರಲ್ಲೂ ಫುಟ್‌ಬಾಲ್ ಅಭಿಮಾನಿಯನ್ನು ತೀವ್ರವಾಗಿ ಗಾಸಿಗೊಳಿಸಿದೆ’ ಎಂದು ತಿಳಿಸಿದ್ದಾರೆ. ‘ಜನಪರವಾದ ವರದಿಯನ್ನು ನಾನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಿದ್ದು ರಾಜ್ಯ ಸರ್ಕಾರಕ್ಕೂ ಸಲಹೆ ನೀಡಲಿದ್ದೇನೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.