ಪ್ರಾತಿನಿಧಿಕ ಚಿತ್ರ
ಐಜ್ವಾಲ್: ಮ್ಯಾನ್ಮಾರ್ ಗಡಿ ಬಳಿ ಮಿಜೋರಾಂನ ಚಂಫೈ ಜಿಲ್ಲೆಯಲ್ಲಿ ₹112.40 ಕೋಟಿ ಮೌಲ್ಯದ ಎಂಡಿಎಂಎಯನ್ನು ಅಸ್ಸಾಂ ರೈಫಲ್ಸ್ ಸಿಬ್ಬಂದಿ ಶನಿವಾರ ವಶಪಡಿಸಿಕೊಂಡಿದೆ.
ಜೋಖಾವ್ತಾರ್ ಗ್ರಾಮದಲ್ಲಿ ಅಸ್ಸಾಂ ರೈಫಲ್ಸ್ ಸಿಬ್ಬಂದಿ ಗಸ್ತು ತಿರುಗುತ್ತಿದ್ದಾಗ ವೇಳೆ ಇಬ್ಬರು ಭಾರೀ ಗಾತ್ರದ ಬ್ಯಾಗ್‌ಗಳನ್ನು ಹೊತ್ತೊಯ್ಯುತ್ತಿದ್ದರು. ಈ ವೇಳೆ ಅನುಮಾನಗೊಂಡು ಪರಿಶೀಲನೆ ನಡೆಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ ಎಂದು ಅರೆಸೈನಿಕ ಪಡೆ ಪ್ರಕಟಣೆಯಲ್ಲಿ ತಿಳಿಸಿದೆ.
ಅಸ್ಸಾಂ ರೈಫಲ್ಸ್ ಸಿಬ್ಬಂದಿ 3.33 ಲಕ್ಷ ನಿಷೇಧಿತ ಮಾದಕ ಪದಾರ್ಥ ಮೀಥೈಲ್ ಡಯಾಕ್ಸಿ ಮೆಥಾಂಫೆಟಮೈನ್ (ಎಂಡಿಎಂಎ) ಮಾತ್ರೆಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಅದು ಹೇಳಿದೆ.
ಆರೋಪಿಗಳು ಇಂಡೋ-ಮ್ಯಾನ್ಮಾರ್ ಗಡಿಯಲ್ಲಿ ಹರಿಯುವ ಟಿಯಾವು ನದಿಗೆ ಹಾರಿ ಮ್ಯಾನ್ಮಾರ್‌ಗೆ ಪರಾರಿಯಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆರೋಪಿಗಳು ಚಂಫೈ ಜಿಲ್ಲೆಯಲ್ಲಿ ಮಾದಕ ವಸ್ತುಗಳನ್ನು ವಿತರಿಸಲು ತಂದಿದ್ದರು ಎಂದು ಶಂಕಿಸಲಾಗಿದೆ.
ವಶಪಡಿಸಿಕೊಂಡ ಮಾದಕ ವಸ್ತುಗಳನ್ನು ಮಿಜೋರಾಂ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.