ADVERTISEMENT

ಮೀ–ಟೂ: ಬಾಲಿವುಡ್‌ಗೆ ಭರ್ಜರಿ ಏಟು

‘ಹೌಸ್‌ಫುಲ್‌–4’ ಸಿನಿಮಾದಿಂದ ಹೊರನಡೆದ ಸಾಜಿದ್‌: ಅಭಿಯಾನಕ್ಕೆ ಅಕ್ಷಯ್‌, ಅಜಯ್‌, ಫರ್ಹಾನ್‌ ಬೆಂಬಲ

ಪಿಟಿಐ
Published 12 ಅಕ್ಟೋಬರ್ 2018, 20:15 IST
Last Updated 12 ಅಕ್ಟೋಬರ್ 2018, 20:15 IST
ಮೀ–ಟೂ
ಮೀ–ಟೂ   

ಮುಂಬೈ: ‘ಮೀ–ಟೂ’ ಅಭಿಯಾನದಲ್ಲಿ ಮತ್ತಷ್ಟು ಗಣ್ಯರ ಹೆಸರು ಪ್ರಸ್ತಾಪವಾಗಿದೆ. ಬಾಲಿವುಡ್‌ ಸಿನಿಮಾ ನಿರ್ದೇಶಕರಾದ ಸಾಜಿದ್‌ ಖಾನ್‌, ಸುಭಾಷ್‌ ಘಾಯ್‌ ಮತ್ತು ಲವ್‌ ರಂಜನ್‌ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಕೇಳಿ ಬಂದಿದೆ. ‘ಹೌಸ್‌ಫುಲ್‌–4’ ಸಿನಿಮಾದಿಂದ ಸಾಜಿದ್‌ ಹೊರನಡೆಯುವುದರ ಮೂಲಕ ‘ಮೀ–ಟೂ’ ಏಟಿಗೆ ಹಿಂದಿ ಸಿನಿಮಾ ಕ್ಷೇತ್ರ ತತ್ತರಿಸಿದೆ.

ದೊಡ್ಡ ತಾರೆಯರಾದ ಅಕ್ಷಯ್‌ ಕುಮಾರ್‌, ಫರ್ಹಾನ್‌ ಅಖ್ತರ್‌ ಮತ್ತು ಅಜಯ್‌ ದೇವಗನ್‌ ಅವರು ‘ಮೀ–ಟೂ’ ಅಭಿಯಾನದ ಬೆಂಬಲಕ್ಕೆ ನಿಂತಿದ್ದಾರೆ.

ಸಾಜಿದ್‌ ಅವರಿಂದ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದೇವೆ ಎಂದು ಮೂವರು ನಟಿಯರು ಮತ್ತು ಒಬ್ಬ ಪತ್ರಕರ್ತೆ ಶುಕ್ರವಾರ ಹೇಳಿದರು. ತಕ್ಷಣ ಪ್ರತಿಕ್ರಿಯೆ ನೀಡಿದ ನಟಿ ಟ್ವಿಂಕಲ್‌ ಖನ್ನಾ, ಆರೋಪ ಹೊತ್ತಿರುವ ವ್ಯಕ್ತಿಗಳ ಬಗ್ಗೆ ಈಗ ಚಿತ್ರೀಕರಣವಾಗುತ್ತಿರುವ ‘ಹೌಸ್‌ಫುಲ್‌–4’ ಸಿನಿಮಾ ತಂಡ ದೃಢ ನಿಲುವು ತಳೆಯಬೇಕು ಎಂದು ಟ್ವೀಟ್‌ ಮಾಡಿದರು. ಸಾಜಿದ್‌ ಖಾನ್‌ ಈ ಸಿನಿಮಾದ ನಿರ್ದೇಶಕ. ನಟಿ ತನುಶ್ರೀ ದತ್ತಾ ಅವರು ಲೈಂಗಿಕ ಕಿರುಕುಳ ಆರೋಪ ಮಾಡಿರುವ ನಟ ನಾನಾ ಪಾಟೇಕರ್‌ ಅವರೂ ಈ ಸಿನಿಮಾದ ತಾರಾಗಣದಲ್ಲಿದ್ದಾರೆ.

ADVERTISEMENT

ಟ್ವಿಂಕಲ್‌ ಗಂಡ ಅಕ್ಷಯ್‌ ಕುಮಾರ್‌ ಟ್ವೀಟ್‌ ಮಾಡಿ ‘ಹೌಸ್‌ಫುಲ್‌–4’ ಸಿನಿಮಾ ಚಿತ್ರೀಕರಣ ಸ್ಥಗಿತಗೊಂಡಿದೆ ಎಂದರು. ‘ಇವು ಕಠಿಣ ಕ್ರಮ ಕೈಗೊಳ್ಳಬೇಕಾದ ಆರೋಪಗಳು. ಲೈಂಗಿಕ ದೌರ್ಜನ್ಯ ಆರೋಪ ಸಾಬೀತಾದ ಯಾವುದೇ ವ್ಯಕ್ತಿಯ ಜತೆಗೆ ಇನ್ನು ಮುಂದೆ ಕೆಲಸ ಮಾಡುವುದಿಲ್ಲ. ಪ್ರತಿ ಆರೋಪದ ಬಗ್ಗೆಯೂ ತನಿಖೆ ನಡೆಸಿ ನ್ಯಾಯ ಒದಗಿಸ
ಬೇಕು’ ಎಂದು ಅಕ್ಷಯ್‌ ಹೇಳಿದ್ದಾರೆ.

ಇದರ ಬೆನ್ನಿಗೇ, ಸಾಜಿದ್‌ ಅವರು ‘ಹೌಸ್‌ಫುಲ್‌–4’ ಸಿನಿಮಾ ನಿರ್ದೇಶಕ ಸ್ಥಾನದಿಂದ ಕೆಳಗಿಳಿದಿದ್ದಾರೆ. ‘ನೈತಿಕ ಹೊಣೆ ಹೊತ್ತು ಈ ಕ್ರಮ ಕೈಗೊಂಡಿದ್ದೇನೆ. ನನ್ನ ವಿರುದ್ಧದ ಆರೋಪಗಳು ಸತ್ಯವಲ್ಲ ಎಂದು ಸಾಬೀತಾಗುವವರೆಗೆ ಈ ಸಿನಿಮಾದ ನಿರ್ದೇಶನದ ಕೆಲಸವನ್ನು ಕೈಗೆತ್ತಿಕೊಳ್ಳುವುದಿಲ್ಲ’ ಎಂದು ಅವರು ಹೇಳಿದ್ದಾರೆ.

ಸಾಜಿದ್‌ ಸಹೋದರಿ, ನೃತ್ಯ ನಿರ್ದೇಶಕಿ ಫರಾ ಖಾನ್‌ ಅವರು ಲೈಂಗಿಕ ಕಿರುಕುಳದ ಸಂತ್ರಸ್ತರ ಪರವಾಗಿ ನಿಲ್ಲುವುದಾಗಿ ಹೇಳಿದ್ದಾರೆ.

ಅಕ್ಬರ್‌ಗೆ ಮತ್ತೊಂದು ಸಂಕಷ್ಟ: ಕೇಂದ್ರ ಸಚಿವ ಎಂ.ಜೆ. ಅಕ್ಬರ್‌ ವಿರುದ್ಧ ಮತ್ತೊಬ್ಬ ಮಹಿಳೆ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. 2007ರಲ್ಲಿ ಪತ್ರಿಕೆಯೊಂದರ ಸಂಪಾದಕರಾಗಿದ್ದ ಅಕ್ಬರ್‌ ಅವರು ತಮ್ಮ ಮೇಲೆ ದೌರ್ಜನ್ಯ ಎಸಗಿದ್ದರು. ಆಗ ತಮಗೆ 18 ವರ್ಷ ವಯಸ್ಸು ಎಂದು ಈಗ ನ್ಯೂಯಾರ್ಕ್‌ನಲ್ಲಿರುವ ಮಹಿಳೆ ಆರೋಪಿಸಿದ್ದಾರೆ.

ಪರಿಶೀಲನೆಗೆ ಸಮಿತಿ: ಮೇನಕಾ

‘ಪ್ರತಿ ದೂರಿನ ಹಿಂದೆ ಇರುವ ನೋವು ಮತ್ತು ವೇದನೆ ನನಗೆ ಅರ್ಥವಾಗುತ್ತದೆ. ದೂರು ಕೊಟ್ಟ ಎಲ್ಲರ ಬಗ್ಗೆಯೂ ನನಗೆ ನಂಬಿಕೆ ಇದೆ’ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮೇನಕಾ ಗಾಂಧಿ ಹೇಳಿದ್ದಾರೆ.

‘ಮಿ–ಟೂ ಅಭಿಯಾನದಲ್ಲಿ ಬಹಿರಂಗವಾದ ಎಲ್ಲ ಲೈಂಗಿಕ ಕಿರುಕುಳ ಪ್ರಕರಣಗಳ ಬಗ್ಗೆ ತನಿಖೆ ನಡೆಸುವುದಕ್ಕಾಗಿ ಹಿರಿಯ ನ್ಯಾಯಮೂರ್ತಿಗಳು ಮತ್ತು ಕಾನೂನು ಪರಿಣತರ ಸಮಿತಿ ರಚಿಸುವ ಪ್ರಸ್ತಾವನೆಯನ್ನು ಮುಂದಿಡಲಿದ್ದೇನೆ’ ಎಂದು ಮೇನಕಾ ಹೇಳಿದ್ದಾರೆ.

ಲೈಂಗಿಕ ಕಿರುಕುಳದ ದೂರುಗಳ ತನಿಖೆಗೆ ಈಗ ಇರುವ ಕಾನೂನು ಮತ್ತು ಸಾಂಸ್ಥಿಕ ಚೌಕಟ್ಟುಗಳನ್ನು ಈ ಸಮಿತಿಯು ಪರಿಶೀಲನೆಗೆ ಒಳಪಡಿಸಲಿದೆ. ಈ ವ್ಯವಸ್ಥೆಗಳನ್ನು ಹೇಗೆ ಬಲಪಡಿಸಬಹುದು ಎಂಬ ಬಗ್ಗೆ ಸಚಿವಾಲಯಕ್ಕೆ ಈ ಸಮಿತಿಯು ಸಲಹೆಗಳನ್ನೂ ನೀಡಲಿದೆ ಎಂದು ಅವರು ತಿಳಿಸಿದ್ದಾರೆ.

ಲವ್‌ ರಂಜನ್‌ಗೆ ತಾಗಿದ ಬಿಸಿ

‘ಪ್ಯಾರ್‌ ಕ ಪಂಚನಾಮಾ’ ಸಿನಿಮಾದ ನಿರ್ದೇಶಕ ಲವ್‌ ರಂಜನ್‌ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೊರಿಸಲಾಗಿದೆ.

‘ಬಿಕಿನಿ ದೃಶ್ಯಗಳಲ್ಲಿ ಹೇಗೆ ಕಾಣಿಸಬಹುದು ಎಂಬುದನ್ನು ನೋಡುವುದಕ್ಕಾಗಿ ಬಟ್ಟೆ ಬಿಚ್ಚುವಂತೆ ‘ಪ್ಯಾರ್‌ ಕಾ ಪಂಚನಾಮಾ’ ಸಿನಿಮಾದ ಪಾತ್ರವರ್ಗ ಆಯ್ಕೆ ಸಂದರ್ಭದಲ್ಲಿ ರಂಜನ್ ಹೇಳಿದ್ದರು’ ಎಂದು ಅನಾಮಧೇಯ ನಟಿಯೊಬ್ಬರು ಆರೋಪಿಸಿದ್ದಾರೆ.

ಸಿನಿಮಾದಲ್ಲಿ ಪಾತ್ರ ದೊರಕಿತು. ಆದರೆ ಬಳಿಕವೂ ರಂಜನ್‌ ಅವರು ವೈಯಕ್ತಿಕ ಮಾಹಿತಿಗಳನ್ನು ಕೇಳುತ್ತಲೇ ಇದ್ದರು. ಕಿರುಕುಳ ತಾಳಲಾರದೆ ಸಿನಿಮಾದಿಂದ ಹೊರನಡೆಯಬೇಕಾಯಿತು ಎಂದು ಆ ನಟಿ ಹೇಳಿದ್ದಾರೆ. ಈ ಎಲ್ಲ ಆರೋಪಗಳನ್ನು ರಂಜನ್‌ ನಿರಾಕರಿಸಿದ್ದಾರೆ.

ಈ ಆರೋಪವು ರಂಜನ್‌ ಅವರ ವೃತ್ತಿಜೀವನದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಅಜಯ್‌ ದೇವಗನ್‌ ಮತ್ತು ರಣಬೀರ್‌ ಕಪೂರ್‌ ಅವರ ಹೊಸ ಸಿನಿಮಾವನ್ನು ಇವರು ನಿರ್ದೇಶಿಸಬೇಕಿದೆ. ಆದರೆ ಲೈಂಗಿಕ ಕಿರುಕುಳ ಕೊಡುವವರನ್ನು ತಮ್ಮ ಸಂಸ್ಥೆ ಸಹಿಸಿಕೊಳ್ಳುವುದಿಲ್ಲ ಎಂದು ಅಜಯ್ ದೇವಗನ್‌ ಈಗಾಗಲೇ ಹೇಳಿದ್ದಾರೆ.

ಸುಭಾಷ್‌ ಘಾಯ್‌ ವಿರುದ್ಧ ಆರೋಪ

ಹಿರಿಯ ನಿರ್ದೇಶಕ ಸುಭಾಷ್‌ ಘಾಯ್‌ (73) ಅವರ ವಿರುದ್ಧ ಮಹಿಳೆಯೊಬ್ಬರು ಅತ್ಯಾಚಾರ ಆರೋಪ ಮಾಡಿದ್ದಾರೆ. ಸಿನಿಮಾವೊಂದರಲ್ಲಿ ಕೆಲಸ ಮಾಡುತ್ತಿದ್ದಾಗ ಅವರು ಕಿರುಕುಳ ನೀಡುತ್ತಿದ್ದರು. ಒಂದು ದಿನ ಹೋಟೆಲ್‌ನಲ್ಲಿ ಪಾನೀಯಕ್ಕೆ ಮತ್ತು ಬರಿಸುವ ಔಷಧ ಹಾಕಿ ಅತ್ಯಾಚಾರ ಎಸಗಿದ್ದಾರೆ ಎಂದು ಅವರು ಹೇಳಿದ್ದಾರೆ.

ಘಾಯ್‌ ಅವರು ಈ ಆಪಾದನೆಯನ್ನು ತಳ್ಳಿ ಹಾಕಿದ್ದಾರೆ. ‘ವಿಧಿ ನಿಮಗೆ ಒಳ್ಳೆಯ ಮತ್ತು ಕೆಟ್ಟ ಕಾಲಗಳೆರಡನ್ನೂ ತೋರಿಸುತ್ತದೆ. ಈ ಅಭಿಯಾನದಲ್ಲಿ ನನ್ನ ಹೆಸರು ಉಲ್ಲೇಖವಾಗಿರುವುದು ಬಹಳ ನೋವು ಉಂಟು ಮಾಡಿದೆ. ಮಹಿಳೆಯರಿಗೆ ನಾನು ತೋರುವ ಗೌರವದ ಬಗ್ಗೆ ಗೊತ್ತಿರುವವರಿಗೆ ಕೃತಜ್ಞತೆ’ ಎಂದು ಅವರು ಹೇಳಿದ್ದಾರೆ.

ಸತ್ಯವನ್ನು ಜೋರಾಗಿ ಹೇಳಬೇಕಿದೆ: ರಾಹುಲ್‌

ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ‘ಮೀ ಟೂ’ ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ‘ಬದಲಾವಣೆಗಾಗಿ ಸತ್ಯವನ್ನು ಜೋರಾಗಿ ಮತ್ತು ಸ್ಪಷ್ಟವಾಗಿ ಹೇಳಬೇಕಾಗಿದೆ’ ಎಂದು ಅವರು ಹೇಳಿದ್ದಾರೆ.

‘ಮಹಿಳೆಯರನ್ನು ಗೌರವ ಮತ್ತು ಘನತೆಯಿಂದ ನೋಡುವ ಕಾಲ ಬಂದಿದೆ. ಇಂತಹ ಗೌರವ ಕೊಡದವರ ಸಮಯ ಮುಗಿದಿದೆ ಎಂಬುದು ಸಂತಸದ ವಿಚಾರ’ ಎಂದು ರಾಹುಲ್‌ ಟ್ವೀಟ್‌ ಮಾಡಿದ್ದಾರೆ.ಕೇಂದ್ರ ಸಚಿವ ಎಂ.ಜೆ. ಅಕ್ಬರ್‌ ಮೇಲಿನ ಆರೋಪಗಳ ಬಗ್ಗೆ ರಾಹುಲ್ ಏನನ್ನೂ ಹೇಳಿಲ್ಲ.

ಉದ್ಯಮ ರಂಗಕ್ಕೂ ‘ಮೀ–ಟೂ’ ಬಿಸಿ

ವಿವಿಧ ರಂಗಗಳಲ್ಲಿ ತಲ್ಲಣ ಸೃಷ್ಟಿಸಿರುವ ‘ಮೀ–ಟೂ’ ಅಭಿಯಾನ ಈಗ ಉದ್ಯಮ ರಂಗಕ್ಕೂ ವ್ಯಾಪಿಸಿದೆ. ಟಾಟಾ ಮೋಟರ್ಸ್‌ನ ಸಂವಹನ ವಿಭಾಗದ ಮುಖ್ಯಸ್ಥ ಸುರೇಶ್‌ ರಂಗರಾಜನ್‌ ವಿರುದ್ಧ ಅವರ ಮಾಜಿ ಸಹೋದ್ಯೋಗಿಯೊಬ್ಬರು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ಈ ಆರೋಪದ ತನಿಖೆ ಪೂರ್ಣಗೊಳಿಸುವವರೆಗೆ ರಜೆಯ ಮೇಲೆ ತೆರಳುವಂತೆ ಸುರೇಶ್‌ ಅವರಿಗೆ ಟಾಟಾ ಮೋಟರ್ಸ್‌ ಸೂಚಿಸಿದೆ. ಸುರೇಶ್‌ ಅವರು ವೊಡಾಫೋನ್‌, ನಿಸಾನ್‌ ಮೋಟರ್ಸ್‌ ಮತ್ತು ನೀರಾ ರಾಡಿಯಾ ಅವರು ವೈಷ್ಣವಿ ಕಮ್ಯುನಿಕೇಷನ್ಸ್‌ನಲ್ಲಿ ಹಿಂದೆ ಕೆಲಸ ಮಾಡಿದ್ದರು.

***

ಮೀ–ಟೂಗೆ ಸಂಬಂಧಿಸಿ ನಡೆಯುತ್ತಿರುವುದು ಮನಸ್ಸು ಕೆಡಿಸಿದೆ. ಮಹಿಳೆಯರಿಗೆ ಗರಿಷ್ಠ ಗೌರವ ಮತ್ತು ಸುರಕ್ಷತೆ ನೀಡಬೇಕು ಎಂದು ನಾನು ಮತ್ತು ನನ್ನ ಕಂಪನಿ (ಅಜಯ್‌ ದೇವಗನ್‌ ಫಿಲಮ್ಸ್‌) ನಂಬಿದೆ. ಯಾವುದೇ ವ್ಯಕ್ತಿ ಒಬ್ಬ ಮಹಿಳೆಯ ವಿರುದ್ಧ ಕೆಟ್ಟದಾಗಿ ನಡೆದುಕೊಂಡಿದ್ದರೂ ಅದನ್ನು ನಾವು ಸಹಿಸುವುದಿಲ್ಲ

ಅಜಯ್‌ ದೇವಗನ್‌,ಬಾಲಿವುಡ್‌ ನಟ

ಆರೋಪ ಎದುರಿಸುತ್ತಿರುವ ಸಚಿವರು ಆಪಾದನೆ ಸತ್ಯವೇ ಸುಳ್ಳೇ ಎಂದು ಹೇಳಬೇಕು. ಅವರು

ಮಾತನಾಡಿದರೆ ಪತ್ರಕರ್ತರು ಮತ್ತು ಸಮಾಜ ಒಂದು ನಿರ್ಧಾರಕ್ಕೆ ಬರಬಹುದು. ಅವರು ಮಾತೇ ಆಡದಿದ್ದರೆ ಅವರ ವಿರುದ್ಧದ ಆರೋಪ ಸತ್ಯವೆಂದೇ ಅರ್ಥ

ರಣದೀಪ್‌ ಸುರ್ಜೇವಾಲಾ,ಕಾಂಗ್ರೆಸ್‌ ವಕ್ತಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.