ADVERTISEMENT

ಅಪರಾಧ ಕಾನೂನು ಸುಧಾರಣೆ: ಆನ್‌ಲೈನ್‌ ಮೂಲಕ ತಜ್ಞರ ಸಲಹೆ

​ಪ್ರಜಾವಾಣಿ ವಾರ್ತೆ
Published 5 ಜುಲೈ 2020, 15:06 IST
Last Updated 5 ಜುಲೈ 2020, 15:06 IST

ನವದೆಹಲಿ: ಅಪರಾಧ ತಡೆ ಕಾಯ್ದೆಯಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಕೇಂದ್ರ ಗೃಹ ಇಲಾಖೆ ನೇಮಿಸಿರುವ ಸಮಿತಿಯು, ತಜ್ಞರ ಶಿಫಾರಸು, ಸಲಹೆಯನ್ನು ಪಡೆಯಲು ಆನ್‌ಲೈನ್‌ ಮೊರೆ ಹೋಗಿದೆ.

ಕೋವಿಡ್‌–19 ಪಿಡುಗಿನ ಕಾರಣದಿಂದಾಗಿ ಸಂಚಾರ, ಸಭೆ ಆಯೋಜನೆಗೆ ನಿರ್ಬಂಧವಿದ್ದು, ಹೀಗಾಗಿ ಸಮಿತಿಯು ಆನ್‌ಲೈನ್‌ ಮೂಲಕ ತಜ್ಞರನ್ನು ಸಂಪರ್ಕಿಸಿದೆ. ಜುಲೈ 4ರಿಂದ ಈ ಪ್ರಕ್ರಿಯೆ ಪ್ರಾರಂಭವಾಗಿದ್ದು, ಸೆಪ್ಟೆಂಬರ್‌ 25ರವರೆಗೂ ನಡೆಯಲಿದೆ.

ಅಪರಾಧ ಕಾನೂನುಗಳನ್ನು ಪರಾಮರ್ಶಿಸಲು ಮೇ ತಿಂಗಳಲ್ಲಿರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಡಾ.ರಣ್‌ಬೀರ್‌ ಸಿಂಗ್‌ ನೇತೃತ್ವದಲ್ಲಿ ಈ ಸಮಿತಿಯನ್ನು ರಚಿಸಲಾಗಿತ್ತು. ಖ್ಯಾತ ವಕೀಲರಾದ ಮಹೇಶ್‌ ಜೇಠ್ಮಲಾನಿ ಅವರೂ ಈ ಸಮಿತಿಯಲ್ಲಿ ಇದ್ದಾರೆ.ದೇಶದ್ರೋಹ, ಪೋಷಕರಿಂದಲೇ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಮುಂತಾದ ಅಪರಾಧಗಳನ್ನು ಗಮನದಲ್ಲಿಟ್ಟುಕೊಂಡು, ತಜ್ಞರ ಸಲಹೆ ಪಡೆದು,ಕಾನೂನಿನಲ್ಲಿ ಆಗಬೇಕಾದಂಥ ತಿದ್ದುಪಡಿಗಳನ್ನು ಈ ಸಮಿತಿಯು ಶಿಫಾರಸು ಮಾಡಲಿದೆ.

ADVERTISEMENT

ಮೊದಲ ಹಂತದಲ್ಲಿ ಭಾರತೀಯ ದಂಡ ಸಂಹಿತೆಯಲ್ಲಿ(ಐಪಿಸಿ) ಆಗಬೇಕಾದಂಥ ತಿದ್ದುಪಡಿಗಳ ಕುರಿತು ತಜ್ಞರ ಸಲಹೆಗಳನ್ನು ಸಮಿತಿಯು ಪಡೆಯಲಾರಂಭಿಸಿದ್ದು, ಈ ತಿಂಗಳ ಅಂತ್ಯದವರೆಗೆ ಈ ಪ್ರಕ್ರಿಯೆ ಮುಂದುವರಿಯಲಿದೆ. ಪ್ರಸ್ತುತ ಇರುವ ದೇಶದ್ರೋಹ ಕಾನೂನಿನ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು, ಈ ಕಾನೂನಿನಲ್ಲಿ ಇರುವ ಸೆಕ್ಷನ್‌ 124 ಎ ಅನ್ನು ಐಪಿಸಿಯಿಂದ ತೆಗೆಯಬೇಕೇ ಅಥವಾ ಅದನ್ನು ಪರಿಷ್ಕರಿಸಬೇಕೇ ಎನ್ನುವುದು ಮುನ್ನೆಲೆಗೆ ಬರಲಿದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.