
ಮುಂಬೈ: ಪಶ್ಚಿಮ ಏಷ್ಯಾ ಬಿಕ್ಕಟ್ಟಿನಿಂದಾಗಿ ಬೆಂಗಳೂರು, ಚೆನ್ನೈ, ಮುಂಬೈ, ದೆಹಲಿ, ಕೋಲ್ಕತ್ತಾದಲ್ಲಿ ಒಟ್ಟು 260ಕ್ಕೂ ಅಧಿಕ ವಿಮಾನಗಳ ಪ್ರಯಾಣವನ್ನು ಮಂಗಳವಾರ ರದ್ದುಗೊಳಿಸಲಾಗಿದೆ.
ಇರಾನ್ ಮೇಲೆ ಅಮೆರಿಕ ಹಾಗೂ ಇಸ್ರೇಲ್ ದಾಳಿ ಮುಂದುವರಿದಿರುವ ಕಾರಣ ಹಲವು ವಿಮಾನಯಾನ ಸಂಸ್ಥೆಗಳು ಪ್ರಯಾಣ ರದ್ದುಗೊಳಿಸಿವೆ. ಹೀಗಾಗಿ ವಿಮಾನ ಸಂಚಾರಗಳಲ್ಲಿ ವ್ಯತ್ಯಯ ಉಂಟಾಗಿದೆ.
ಬೆಂಗಳೂರಿನಲ್ಲಿ 42 ವಿಮಾನಗಳ ಪ್ರಯಾಣ ರದ್ದಾಗಿದ್ದರೆ, ಚೆನ್ನೈನಲ್ಲಿ 30, ಮುಂಬೈನಲ್ಲಿ 107 ವಿಮಾನಗಳ ಸೇವೆಯನ್ನು ಮಂಗಳವಾರ ರದ್ದುಗೊಳಿಸಲಾಗಿದೆ. ದೆಹಲಿ ವಿಮಾನ ನಿಲ್ದಾಣಗಳಲ್ಲಿ 80 ವಿಮಾನ ರದ್ದಾಗಿದ್ದು, ಈ ಪೈಕಿ 36 ನಿರ್ಗಮನ ಹಾಗೂ 44 ಆಗಮಿಸಬೇಕಿದ್ದ ವಿಮಾನಗಳೂ ಸೇರಿವೆ.
ಕೋಲ್ಕತ್ತದಿಂದ ಪಶ್ಚಿಮ ಏಷ್ಯಾ ಮಾರ್ಗಗಳನ್ನು ಸಂಪರ್ಕಿಸುವ ಎಮಿರೇಟ್ಸ್, ಕತಾರ್ ಏರ್‌ವೇಸ್, ಏರ್ ಅರೇಬಿಯಾ ಸೇರಿದಂತೆ ವಿವಿಧ ವಿಮಾನಯಾನ ಸಂಸ್ಥೆಗಳ 10 ಅಂತರರಾಷ್ಟ್ರೀಯ ವಿಮಾನಗಳ ಹಾರಾಟವೂ ರದ್ದುಗೊಂಡಿದೆ.
ಫೆಬ್ರುವರಿ 28ರಂದು ಪಶ್ಚಿಮ ಏಷ್ಯಾ ಬಿಕ್ಕಟ್ಟು ಶುರುವಾದಾಗಿನಿಂದ ಅಂದರೆ ಕಳೆದ 3 ದಿನಗಳಲ್ಲಿ ಭಾರತೀಯ ವಿಮಾನಯಾನ ಸಂಸ್ಥೆಗಳು 1,117 ಅಂತರರಾಷ್ಟ್ರೀಯ ವಿಮಾನಗಳ ಹಾರಾಟವನ್ನು ರದ್ದುಗೊಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.