ಏರ್ ಇಂಡಿಯಾ ವಿಮಾನ
(ರಾಯಿಟರ್ಸ್ ಚಿತ್ರ)
ನವದೆಹಲಿ/ ಮುಂಬೈ: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಏರ್ ಇಂಡಿಯಾ ಯುರೋಪ್ ಹಾಗೂ ಅಮೆರಿಕ, ಕೆನಡಾದ 5 ಸ್ಥಳಗಳಿಗೆ ವಿಮಾನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ.
ಇದಲ್ಲದೆ, ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮತ್ತು ಇಂಡಿಗೊ ವಿಮಾನಗಳು ಮಧ್ಯಪ್ರಾಚ್ಯಕ್ಕೆ ಹೋಗುತ್ತಿದ್ದರೂ ಸಹ, ಅವುಗಳಲ್ಲಿ ಕೆಲವು ವಿಮಾನಗಳ ಮಾರ್ಗ ಬದಲಿಸಲಾಗಿದೆ.
ಕತಾರ್‌ನಲ್ಲಿರುವ ಅಮೆರಿಕದ ವಾಯುನೆಲೆಯ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದ್ದು, ಉದ್ವಿಗ್ನತೆ ಹೆಚ್ಚಿತ್ತು. ಹೀಗಾಗಿ ಕತಾರ್ ಸೇರಿದಂತೆ ಕೆಲವು ದೇಶಗಳು ತಮ್ಮ ವಾಯುಪ್ರದೇಶವನ್ನು ಮುಚ್ಚಿವೆ.
ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ಹಿನ್ನೆಲೆ, ಉತ್ತರ ಅಮೆರಿಕ ಮತ್ತು ಯುರೋಪ್‌ನ ಪೂರ್ವ ಕರಾವಳಿಗೆ ಮತ್ತು ಅಲ್ಲಿಂದ ಹೊರಡುವ ಎಲ್ಲಾ ವಿಮಾಣಗಳ ಕಾರ್ಯಾಚರಣೆಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ, ಮುಂದಿನ ಸೂಚನೆ ಬರುವವರೆಗೆ ಸ್ಥಗಿತಗೊಳಿಸಿರುವುದಾಗಿ ಏರ್ ಇಂಡಿಯಾ ತಿಳಿಸಿದೆ.
ಯುರೋಪಿಯನ್ ನಗರಗಳು, ಅಮೆರಿಕದ 4 ವಿಮಾಣ ನಿಲ್ದಾಣಗಳಾದ ನ್ಯೂಯಾರ್ಕ್, ನ್ಯೂವಾರ್ಕ್, ಷಿಕಾಗೋ, ವಾಷಿಂಗ್ಟನ್ ಹಾಗೂ ಕೆನಡಾದ ಟೊರೊಂಟೊಗೆ ಸೇವೆಗಳನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ ಎಂದು ವಿಮಾನಯಾನ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.