
ಪಿಟಿಐ
ಕೋಲ್ಕತ್ತ: ಬಂಗಾಳಿ ಭಾಷೆಯಲ್ಲಿ ಮಾತನಾಡಿದ್ದಕ್ಕೆ ‘ಬಾಂಗ್ಲಾದೇಶೀಯ’ರೆಂದು ಶಂಕಿಸಿ ಮಹಾರಾಷ್ಟ್ರದಲ್ಲಿ ಮೂವರು ವಲಸೆ ಕಾರ್ಮಿಕರ ಮೇಲೆ ನಡೆದಿದೆ ಎನ್ನಲಾದ ಹಲ್ಲೆ ಪಶ್ಚಿಮ ಬಂಗಾಳದಲ್ಲಿ ತೀವ್ರ ರಾಜಕೀಯ ಆರೋಪ–ಪ್ರತ್ಯಾರೋಪಕ್ಕೆ ಕಾರಣವಾಗಿದೆ.
ಪಶ್ಚಿಮ ವರ್ಧಮಾನ್ ಜಿಲ್ಲೆ ಮೂಲದ ದಿಲೀಪ್ ಬಾಗ್ದಿ, ಸಮೀರ್ ಬರೂಯಿ ಮತ್ತು ಪಾಂಡವೇಶ್ವರದ ವ್ಯಕ್ತಿಯೊಬ್ಬರು ತಮ್ಮ ಮೇಲೆ ಹಲ್ಲೆ ನಡೆದಿದೆ ಎಂದು ಆರೋಪಿಸಿದ್ದರು.
‘ಮಹಾರಾಷ್ಟ್ರದಿಂದ ವಾಪಸ್ ಆಗಲು ಟಿಕೆಟ್ ಖರೀದಿ ವೇಳೆ ಬಂಗಾಳಿ ಭಾಷೆಯಲ್ಲಿ ಮಾತನಾಡಿದ್ದಕ್ಕೆ ಕೆಲವರು ಆಕ್ಷೇಪಿಸಿದರು. ಹಿಂದಿಯಲ್ಲಿ ಮಾತನಾಡಿ, ಆಧಾರ್ ದಾಖಲೆಗಳನ್ನು ತೋರಿಸಿದೆವು. ನಾವು ಪಶ್ಚಿಮ ಬಂಗಾಳದವರು, ಭಾರತೀಯರು ಎಂದು ಪದೇ–ಪದೇ ಹೇಳಿದರೂ ಕೆಲವು ಸ್ಥಳೀಯರು ಕೇಳಲಿಲ್ಲ. ತಲೆ ಮೇಲೆ ಬಿಸಿ ಟೀ ಸುರಿದರು. ಬಲವಾಗಿ ಹಲ್ಲೆ ಮಾಡಿದರು’ ಎಂದು ಕಾರ್ಮಿಕರು ಆರೋಪಿಸಿದ್ದರು.
ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಬಂಗಾಳಿ ಭಾಷೆಯಲ್ಲಿ ಮಾತನಾಡುವ ವಲಸೆ ಕಾರ್ಮಿಕರ ಮೇಲೆ ದೌರ್ಜನ್ಯ ಮತ್ತು ದಾಳಿ ಹೆಚ್ಚುತ್ತಿವೆ ಎಂಬ ಆರೋಪ ಹೆಚ್ಚುತ್ತಿರುವ ಸಂದರ್ಭದಲ್ಲೇ ಮಹಾರಾಷ್ಟ್ರದಲ್ಲಿ ಹಲ್ಲೆ ಆರೋಪ ಕೇಳಿ ಬಂದಿದೆ.
ಒತ್ತೆಯಾಳು ವಾತಾವರಣ:
ಪಾಂಡವೇಶ್ವರ ಕ್ಷೇತ್ರದ ಟಿಎಂಸಿ ಶಾಸಕ ನರೇಂದ್ರನಾಥ್ ಚಕ್ರವರ್ತಿ ಅವರು ಹಲ್ಲೆಗೊಳಗಾಗಿದ್ದವರನ್ನು ಭಾನುವಾರ ಭೇಟಿ ಮಾಡಿದರು. ಆನಂತರ ಮಾತನಾಡಿ, ‘ಬಂಗಾಳಿ ಮಾತನಾಡುವವರ ವಿರುದ್ಧ ಒತ್ತೆಯಾಳು ವಾತಾವರಣ ನಿರ್ಮಾಣವಾಗುತ್ತಿದೆ. ಇದಕ್ಕೆ ಕೇಂದ್ರ ಸರ್ಕಾರವೇ ಕಾರಣ’ ಎಂದು ದೂಷಿಸಿದ್ದಾರೆ.
ಸ್ಥಳೀಯ ಬಿಜೆಪಿ ನಾಯಕ ದಿಲೀಪ್ ಚಕ್ರವರ್ತಿ ಈ ಬಗ್ಗೆ ಪ್ರತಿಕ್ರಿಯಿಸಿ, ‘ಪಶ್ಚಿಮ ಬಂಗಾಳದಲ್ಲಿ ಉದ್ಯೋಗ ಅವಕಾಶಗಳಿಲ್ಲದೇ ಜನರು ಮಹಾರಾಷ್ಟ್ರ, ಗುಜರಾತ್ ಮತ್ತು ಛತ್ತೀಸಗಢದಂತಹ ರಾಜ್ಯಗಳಿಗೆ ವಲಸೆ ಹೋಗುತ್ತಿದ್ದಾರೆ. ಇಂತಹ ಸ್ಥಿತಿಗೆ ರಾಜ್ಯ ಸರ್ಕಾರ(ಟಿಎಂಸಿ ಆಡಳಿತ) ಕಾರಣ’ ಎಂದು ಆರೋಪಿಸಿದ್ದಾರೆ.
‘ಈ ಘಟನೆಯ ಹಿಂದೆ ರಾಜಕೀಯ ಪ್ರಚೋದನೆ ಇದ್ದಂತಿದೆ. ಇದು ಕಾರ್ಮಿಕರಲ್ಲಿ ಅನಿಶ್ಚಿತತೆ ಉಂಟು ಮಾಡುವ ಹುನ್ನಾರ’ ಎಂದು ಬಿಜೆಪಿ ವ್ಯಾಖ್ಯಾನಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.