ADVERTISEMENT

ಕಾಶ್ಮೀರ ತೊರೆಯುತ್ತಿರುವ ವಲಸೆ ಕಾರ್ಮಿಕರು: ರೈಲು, ಬಸ್ ನಿಲ್ದಾಣಗಳಲ್ಲಿ ಜನಜಂಗುಳಿ

ಪಿಟಿಐ
Published 19 ಅಕ್ಟೋಬರ್ 2021, 14:27 IST
Last Updated 19 ಅಕ್ಟೋಬರ್ 2021, 14:27 IST
ಜಮ್ಮು ರೈಲು ನಿಲ್ದಾಣದ ಹೊರಭಾಗದಲ್ಲಿ ವಲಸೆ ಕಾರ್ಮಿಕರು – ಪಿಟಿಐ ಚಿತ್ರ
ಜಮ್ಮು ರೈಲು ನಿಲ್ದಾಣದ ಹೊರಭಾಗದಲ್ಲಿ ವಲಸೆ ಕಾರ್ಮಿಕರು – ಪಿಟಿಐ ಚಿತ್ರ   

ಜಮ್ಮು: ಸ್ಥಳೀಯರಲ್ಲದವರ ಹತ್ಯೆಗಳಿಂದ ಕಂಗೆಟ್ಟಿರುವ ವಲಸೆ ಕಾರ್ಮಿಕರು ಸಾವಿರಾರು ಸಂಖ್ಯೆಯಲ್ಲಿ ಕಾಶ್ಮೀರದಿಂದ ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ.

ವಲಸೆ ಕಾರ್ಮಿಕರು ಕುಟುಂಬ ಸಮೇತರಾಗಿ ಬಸ್ಸು, ರೈಲು ನಿಲ್ದಾಣಗಳ ಹೊರಗೆ ಟಿಕೆಟ್‌ಗಾಗಿ ಕಾಯುತ್ತಿರುವ ದೃಶ್ಯ ಮಂಗಳವಾರ ಜಮ್ಮು ಹಾಗೂ ಉಧಂಪುರಗಳಲ್ಲಿ ಕಂಡುಬಂದಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುತ್ತಿರುವ ಕಾರಣ ಬಸ್ಸು, ರೈಲು ನಿಲ್ದಾಣಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಮ್ಮು ರೈಲು ನಿಲ್ದಾಣದ ಹೊರಭಾಗದಲ್ಲಿ ಮಹಿಳೆಯರು, ಮಕ್ಕಳು ಮೂಲಸೌಕರ್ಯಗಳಿಲ್ಲದೆ ರಸ್ತೆ ಬದಿಯಲ್ಲೇ ಕಾಯುತ್ತಿರುವುದು ಕಂಡುಬಂದಿದೆ.

ಅಂದಾಜು ಲೆಕ್ಕಾಚಾರದ ಪ್ರಕಾರ ಸುಮಾರು 3ರಿಂದ 4 ಲಕ್ಷ ವಲಸೆ ಕಾರ್ಮಿಕರು, ಈ ಪೈಕಿ ಹೆಚ್ಚಿನವರು ಹಿಂದೂಗಳಾಗಿದ್ದು ಉತ್ತರ ಪ್ರದೇಶ, ಬಿಹಾರ, ಛತ್ತೀಸಗಡ, ಜಾರ್ಖಂಡ್ ಮತ್ತು ಉತ್ತರಾಖಂಡಗಳಿಂದ ಪ್ರತಿ ವರ್ಷ ಮಾರ್ಚ್‌ ಆರಂಭದ ವೇಳೆಗೆ ಕಾಶ್ಮೀರಕ್ಕೆ ಬರುತ್ತಾರೆ. ಕಲ್ಲು, ಮರಗೆಲಸ, ವೆಲ್ಡಿಂಗ್ ಮತ್ತು ಕೃಷಿಯಂಥ ಕೆಲಸಗಳಿಗಾಗಿ ಕಾಶ್ಮೀರಕ್ಕೆ ಬರುವ ಇವರು ಸಾಮಾನ್ಯವಾಗಿ ನವೆಂಬರ್‌ ವೇಳೆಗೆ ತವರಿಗೆ ಮರಳುತ್ತಾರೆ. ಆದರೆ ಈ ವರ್ಷ ನಾಗರಿಕರ ಹತ್ಯೆಗಳಿಂದ ಆತಂಕಕ್ಕೊಳಗಾಗಿ ಬೇಗನೇ ಕಾಶ್ಮೀರ ತೊರೆಯುತ್ತಿದ್ದಾರೆ.

ಕುಲ್ಗಾಂನಲ್ಲಿ ಬಿಹಾರ ಮೂಲದ ಇಬ್ಬರು ಕಾರ್ಮಿಕರನ್ನು ಭಾನುವಾರ ಉಗ್ರರು ಹತ್ಯೆ ಮಾಡಿದ್ದರು. ಇದರೊಂದಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಈ ತಿಂಗಳು ಉಗ್ರರ ದಾಳಿಗೆ ಮೃತಪಟ್ಟವರ ಸಂಖ್ಯೆ 11ಕ್ಕೆ ಏರಿಕೆಯಾಗಿತ್ತು.

‘ವಲಸೆ ಕಾರ್ಮಿಕರ ಹತ್ಯೆಯಿಂದ ನಮ್ಮಲ್ಲಿ ತೀವ್ರ ಆತಂಕ ಸೃಷ್ಟಿಯಾಗಿದೆ. ಈ ರೀತಿ ಹಿಂದೆಂದೂ ನಡೆದಿಲ್ಲ. ನಮ್ಮ ಹಾಗೂ ನಮ್ಮ ಮಕ್ಕಳನ್ನು ರಕ್ಷಿಸಿಕೊಳ್ಳುವುದಕ್ಕಾಗಿ ಕಾಶ್ಮೀರದಿಂದ ವಾಪಸ್ ತೆರಳುತ್ತಿದ್ದೇವೆ’ ಎಂದು ಬಿಹಾರದ ಸೀತಾಮಡಿ ಜಿಲ್ಲೆಯ ಸಂತೋಷ್ ಕುಮಾರ್ ಎಂಬವರು ಪ್ರತಿಕ್ರಿಯಿಸಿದ್ದಾರೆ.

ಸುರಕ್ಷತೆ ಬಗ್ಗೆ ಖಾತರಿ ಇಲ್ಲದಿರುವುದರಿಂದ ಹೆಚ್ಚಿನವರು ತವರಿಗೆ ತೆರಳುತ್ತಿದ್ದಾರೆ ಎಂದು ಪುಲ್ವಾಮಾ ಜಿಲ್ಲೆಯ ರಾಜ್‌ಪೋರಾ ಪ್ರದೇಶದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕ ಕುಮಾರ್ ಎಂಬವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.