ADVERTISEMENT

‘ಸುಪ್ರೀಂ’ ಅನುಮೋದನೆಗೆ ಮನವಿ

ಗಣಿ ಬಾಧಿತ ಪ್ರದೇಶಗಳ ಸಮಗ್ರ ಅಭಿವೃದ್ಧಿ

​ಪ್ರಜಾವಾಣಿ ವಾರ್ತೆ
Published 5 ಜನವರಿ 2019, 20:25 IST
Last Updated 5 ಜನವರಿ 2019, 20:25 IST

ನವದೆಹಲಿ: ರಾಜ್ಯದ ಗಣಿ ಬಾಧಿತ ಪ್ರದೇಶಗಳ ಸಮಗ್ರ ಅಭಿವೃದ್ಧಿ ಮತ್ತು ಪರಿಸರ ಪುನಶ್ಚೇತನ (ಸಿಇಪಿಎಂಐಝಡ್‌) ಯೋಜನೆ ಅಡಿ ಸಾಮಾಜಿಕ, ಆರ್ಥಿಕ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ಕಾರ್ಯಕ್ರಮ ಹಮ್ಮಿಕೊಳ್ಳಲು ಅನುಮೋದನೆ ನೀಡುವಂತೆ ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದೆ.

ರಾಜ್ಯದ ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿನ ಗಣಿಬಾಧಿತ ಪ್ರದೇಶಗಳಲ್ಲಿ ಈ ಯೋಜನೆ ಅಡಿ ₹ 17,156 ಕೋಟಿ ಮೊತ್ತದಲ್ಲಿ ಸಾಮಾಜಿಕ, ಆರ್ಥಿಕ ಕಾರ್ಯ, ₹ 2,559 ಕೋಟಿ ಮೊತ್ತದಲ್ಲಿ ರಸ್ತೆ ಮತ್ತಿತರ ಮೂಲ ಸೌಲಭ್ಯಗಳ ಅಭಿವೃದ್ಧಿ ಹಾಗೂ ₹ 5,271 ಕೋಟಿ ಮೊತ್ತದಲ್ಲಿ ರೈಲು ಮಾರ್ಗಗಳ ನಿರ್ಮಾಣಕ್ಕೆ ಅನುಮೋದನೆ ನೀಡುವಂತೆ ಕೋರಲಾಗಿದೆ.

ಅಲ್ಲದೆ, ಮೇಲ್ವಿಚಾರಣೆ ಸಮಿತಿಯಿಂದ ಈ ಮೊತ್ತವನ್ನು ಕರ್ನಾಟಕ ಗಣಿ ಪ್ರದೇಶದ ಪರಿಸರ ಪುನಶ್ಚೇತನ ನಿಗಮಕ್ಕೆ (ಕೆಎಂಇಆರ್‌ಸಿ) ವರ್ಗಾಯಿಸುವುದಕ್ಕೂ ಅನುಮತಿ ನೀಡುವಂತೆ ಬೇಡಿಕೆ ಸಲ್ಲಿಸಲಾಗಿದೆ.

ADVERTISEMENT

ಧಾರವಾಡದ ಸಮಾಜ ಪರಿವರ್ತನ ಸಮುದಾಯ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಕೋರ್ಟ್‌ಗೆ ಹೇಳಿಕೆ ಸಲ್ಲಿಸಿರುವ ರಾಜ್ಯ ಸರ್ಕಾರ, ಗಣಿ ಬಾಧಿತ ಪ್ರದೇಶಗಳ ಸಮಗ್ರ ಅಭಿವೃದ್ಧಿ ಮತ್ತು ಪರಿಸರ ಪುನಶ್ಚೇತನ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ವಿಶೇಷ ಉದ್ದೇಶ ವಾಹಕ (ಎಸ್‌ಪಿವಿ)ದ ಮೂಲಕ ಗಣಿ ಪ್ರದೇಶಗಳಿಂದ ರಾಜಧನ ಸಂಗ್ರಹಿಸಲು ಕೆಎಂಇಆರ್‌ಸಿ ರಚಿಸಲಾಗಿದೆ. ಎಸ್‌ಪಿವಿಗಾಗಿ ಇದುವರೆಗೆ ₹ 12,175 ಕೋಟಿ ಹಣ ಸಂಗ್ರಹಿಸಲಾಗಿದೆ ಎಂದೂ ತಿಳಿಸಿದೆ.

ಅಕ್ರಮ ಗಣಿಗಾರಿಕೆಯಿಂದ ಭಾರಿ ಪ್ರಮಾಣದಲ್ಲಿ ಬಾಧಿತವಾಗಿರುವ ಈ ಪ್ರದೇಶಗಳ ಪುನಶ್ಚೇತನ ಮತ್ತು ಪುನರುಜ್ಜೀವನವೂ ಒಳಗೊಂಡ ಬೃಹತ್‌ ಯೋಜನೆಯ ಸಾಕಾರಕ್ಕಾಗಿ ಮುಂದಿನ 10 ವರ್ಷಗಳ ಅವಧಿಗೆ ಒಟ್ಟು ₹ 24,996 ಕೋಟಿ
ಹಣದ ಅಗತ್ಯವಿದೆ ಎಂದೂ ಸರ್ಕಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಯೋಜನೆಯ ಸಮಗ್ರ ಅನುಷ್ಠಾನದ ನಿಟ್ಟಿನಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ನೇತೃತ್ವದ ಉನ್ನತಾಧಿಕಾರ ಸಮಿತಿಯನ್ನೂ ರಚಿಸುವ ಅಗತ್ಯವಿದೆ ಎಂಬ ಪ್ರಸ್ತಾವನ್ನೂ ಸಲ್ಲಿಸಲಾಗಿದೆ.

ಸರ್ಕಾರ ಸಿದ್ಧಪಡಿಸಿರುವ ಈ ಯೋಜನೆಯನ್ನು ವಿರೋಧಿಸಿದ್ದ ಫೆಡರೇಷನ್‌ ಆಫ್‌ ಇಂಡಿಯನ್‌ ಮಿನರಲ್‌ ಇಂಡಸ್ಟ್ರಿ (ಫಿಮಿ) ₹ 8,000 ಕೋಟಿ ಮೌಲ್ಯದ ಪ್ರತ್ಯೇಕ ಯೋಜನೆಯನ್ನು ರೂಪಿಸಿ, ಸುಪ್ರೀಂ ಕೋರ್ಟ್‌ ನಿರ್ದೇಶಿತ ಕೇಂದ್ರದ ಉನ್ನತಾಧಿಕಾರ
ಸಮಿತಿ (ಸಿಇಸಿ)ಗೆ ಸಲ್ಲಿಸಿದ್ದು, ಸುಪ್ರೀಂ ಕೋರ್ಟ್‌ ಅಂತಿಮ ತೀರ್ಮಾನ ಕೈಗೊಳ್ಳಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.