ADVERTISEMENT

ಆಸ್ತಿ ಮಾರಾಟ | ಪ್ರಾಪ್ತ ವಯಸ್ಸಿಗೆ ಬಂದ ಮಕ್ಕಳು ನಿರಾಕರಿಸಬಹುದು:ಸುಪ್ರೀಂಕೋರ್ಟ್‌

ಪಿಟಿಐ
Published 23 ಅಕ್ಟೋಬರ್ 2025, 15:44 IST
Last Updated 23 ಅಕ್ಟೋಬರ್ 2025, 15:44 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ಅಪ್ರಾಪ್ತ ವಯಸ್ಕರಾಗಿದ್ದಾಗ ತಮ್ಮ ಹೆಸರಿನಲ್ಲಿದ್ದ ಆಸ್ತಿಯನ್ನು ಪೋಷಕರು ನ್ಯಾಯಾಲಯದ ಪೂರ್ವಾನುಮತಿ ಪಡೆಯದೆ ಮಾರಿದ್ದರೆ, ಅಂತಹ ಆಸ್ತಿ ವರ್ಗಾವಣೆಯನ್ನು ಆ ಮಕ್ಕಳು ಪ್ರಾಪ್ತ ವಯಸ್ಕರಾದ ಬಳಿಕ ನಿರಾಕರಿಸಲು ಮೊಕದ್ದಮೆ ಹೂಡಬೇಕಾದ ಅಗತ್ಯವೇನಿಲ್ಲ ಎಂದು ಸುಪ್ರೀಂ ಕೋರ್ಟ್‌ ಇತ್ತೀಚೆಗೆ ಮಹತ್ವದ ತೀರ್ಪು ನೀಡಿದೆ. 

ಅಪ್ರಾಪ್ತ ವಯಸ್ಸಿನ ಮಕ್ಕಳು, ಪ್ರಾಪ್ತ ವಯಸ್ಕರಾದ ಬಳಿಕ ಸ್ವತಂತ್ರವಾಗಿ ಆ ಆಸ್ತಿಯನ್ನು ಮಾರಾಟ ಮಾಡುವ ಅಥವಾ ವರ್ಗಾಯಿಸುವ ಮೂಲಕ ಹಿಂದಿನ ಆಸ್ತಿ ವರ್ಗಾವಣೆಯನ್ನು ಧಿಕ್ಕರಿಸಬಹುದು ಎಂದು ಸುಪ್ರೀಂ ಕೋರ್ಟ್‌ ಅಕ್ಟೋಬರ್‌ 7ರ ತೀರ್ಪಿನಲ್ಲಿ ಹೇಳಿದೆ. ಆಸ್ತಿ ಮಾರಾಟ ನಿರಾಕರಿಸಲು ಮೊಕದ್ದಮೆ ಹೂಡಬೇಕು ಎಂಬುದು ಕಡ್ಡಾಯವೇನಲ್ಲ ಎಂದು ಅದು ತಿಳಿಸಿದೆ.

ದಾವಣಗೆರೆಯ ಕೆ.ಎಸ್‌. ಶಿವಪ್ಪ ವರ್ಸ್‌ಸ್‌ ಕೆ. ನೀಲಮ್ಮ ಪ್ರಕರಣದಲ್ಲಿ ನ್ಯಾಯಮೂರ್ತಿಗಳಾದ ಪಂಕಜ್‌ ಮಿಥಲ್‌ ಮತ್ತು ಪ್ರಸನ್ನ ಬಿ ವರಾಳೆ ಅವರ ಪೀಠವು ತೀರ್ಪು ಪ್ರಕಟಿಸಿದೆ.

ADVERTISEMENT

ಏನಿದು ಪ್ರಕರಣ?:

ದಾವಣಗೆರೆಯ ಶಾಮನೂರು ಗ್ರಾಮದ ನಿವೇಶನ ಸಂಖ್ಯೆ 56 ಮತ್ತು 57ಕ್ಕೆ ಸಂಬಂಧಿಸಿದ ವಿವಾದ ಇದು. ರುದ್ರಪ್ಪ ಎಂಬುವರು 1971ರಲ್ಲಿ ತಮ್ಮ ಮೂವರು ಮಕ್ಕಳಾದ ಮಹಾರುದ್ರಪ್ಪ, ಬಸವರಾಜ ಮತ್ತು ಮುಂಗೇಶಪ್ಪ ಅವರ ಹೆಸರಿನಲ್ಲಿ ಈ ಆಸ್ತಿಗಳನ್ನು ಖರೀದಿಸಿದ್ದರು.

ಜಿಲ್ಲಾ ನ್ಯಾಯಾಲಯದ ಪೂರ್ವಾನುಮತಿ ಪಡೆಯದೆ ರುದ್ರಪ್ಪ ಅವರು ಈ ನಿವೇಶನಗಳನ್ನು ಮೂರನೇ ವ್ಯಕ್ತಿಗಳಿಗೆ ಮಾರಿದ್ದರು. ನಿವೇಶನ ಸಂಖ್ಯೆ 56 ಅನ್ನು ಎಸ್‌.ಐ ಬಿದರಿ ಎಂಬುವರಿಗೆ ಮಾರಿದ್ದರು. ಅವರು ಅದನ್ನು 1983ರಲ್ಲಿ ಬಿ.ಟಿ.ಜಯದೇವಮ್ಮ ಎಂಬುವರ ಹೆಸರಿಗೆ ವರ್ಗಾಯಿಸಿದ್ದರು.   

ಮಕ್ಕಳು ಪ್ರಾಪ್ತ ವಯಸ್ಸಿಗೆ ಬಂದ ಬಳಿಕ ತಾಯಿಯ ಜತೆಗೂಡಿ 1989ರಲ್ಲಿ ಈ ನಿವೇಶನವನ್ನು ಕೆ.ಎಸ್‌.ಶಿವಪ್ಪ ಎಂಬುವರಿಗೆ ಮಾರಿದರು. ಅದನ್ನು ಪ್ರಶ್ನಿಸಿ ಜಯದೇವಮ್ಮ ಸಲ್ಲಿಸಿದ್ದ ಸಿವಿಲ್‌ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್‌ ತಿರಸ್ಕರಿಸಿತ್ತು. ಅಲ್ಲದೆ ಪ್ರಾಪ್ತ ವಯಸ್ಸಿಗೆ ಬಂದ ಮಕ್ಕಳಿಗೆ ತಮ್ಮ ತಂದೆ ನಡೆಸಿದ್ದ ಆಸ್ತಿ ವರ್ಗಾವಣೆಯನ್ನು ನಿರಾಕರಿಸುವ ಹಕ್ಕನ್ನು ಎತ್ತಿಹಿಡಿಯಿತು.

ಇದೇ ರೀತಿ ನಿವೇಶನ ಸಂಖ್ಯೆ 57 ಅನ್ನು ರುದ್ರಪ್ಪ ಅವರು ನ್ಯಾಯಾಲಯದ ಪೂರ್ವಾನುಮತಿ ಪಡೆಯದೆ ಕೃಷ್ಣೋಜಿರಾವ್‌ ಎಂಬುವರಿಗೆ ಮಾರಿದ್ದರು. ಅವರು ಅದನ್ನು 1993ರಲ್ಲಿ ನೀಲಮ್ಮ ಎಂಬುವರಿಗೆ ಮಾರಾಟ ಮಾಡಿದ್ದರು.

ರುದ್ರಪ್ಪ ಅವರ ಮಕ್ಕಳು ಪ್ರಾಪ್ತ ವಯಸ್ಕರಾದ ಬಳಿಕ ನಿವೇಶನ ಸಂಖ್ಯೆ 57 ಅನ್ನೂ ಕೆ.ಎಸ್‌.ಶಿವಪ್ಪ ಅವರಿಗೆ ಮಾರಿದರು. ಎರಡೂ ನಿವೇಶನಗಳನ್ನು ಒಟ್ಟುಗೂಡಿಸಿ ಶಿವಪ್ಪ ಅಲ್ಲಿ ಒಂದು ಮನೆ ನಿರ್ಮಾಣ ಮಾಡಿದರು.

ಈ ನಿವೇಶನ ಮಾರಾಟವನ್ನು ಪ್ರಶ್ನಿಸಿ ನೀಲಮ್ಮ ಅವರು ದಾವಣಗೆರೆಯ ಹೆಚ್ಚುವರಿ ಸಿವಿಲ್‌ ನ್ಯಾಯಾಲಯದಲ್ಲಿ ಮಾಲೀಕತ್ವ ಕುರಿತು ಪ್ರಕರಣ ದಾಖಲಿಸಿದರು. ಅದನ್ನು ನ್ಯಾಯಾಲಯ ವಜಾಗೊಳಿಸಿತು.

ಅದನ್ನು ಪ್ರಶ್ನಿಸಿ ನೀಲಮ್ಮ ಅವರು ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದರು. 2013ರಲ್ಲಿ ಹೈಕೋರ್ಟ್‌, ಮಕ್ಕಳು ತಮ್ಮ ತಂದೆಯ ಮಾರಾಟ ಪತ್ರವನ್ನು ರದ್ದುಗೊಳಿಸಲು ಔಪಚಾರಿಕವಾಗಿ ಮೊಕದ್ದಮೆ ಹೂಡಿಲ್ಲ. ಹೀಗಾಗಿ ಅವರ ತಂದೆಯ ವಹಿವಾಟು ದೃಢೀಕರಿಸಲ್ಪಟ್ಟಿದೆ ಎಂದು ತೀರ್ಪು ನೀಡಿತ್ತು.  ಅದನ್ನು ಶಿವಪ್ಪ ಅವರು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಮೂಲಕ ಪ್ರಶ್ನಿಸಿದ್ದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.