ADVERTISEMENT

ಬಾಂಗ್ಲಾದೇಶದಲ್ಲಿ ಹಿಂದು ವ್ಯಕ್ತಿ ದೀಪು ಹತ್ಯೆ: ಭಾರತ ಕಳವಳ

ಅಪರಾಧಿಗಳಿಗೆ ತಕ್ಕ ಶಿಕ್ಷೆಯಾಗಬೇಕು– ಆಗ್ರಹ

ಪಿಟಿಐ
Published 21 ಡಿಸೆಂಬರ್ 2025, 16:04 IST
Last Updated 21 ಡಿಸೆಂಬರ್ 2025, 16:04 IST
<div class="paragraphs"><p>ಬಾಂಗ್ಲಾದೇಶ ಧ್ವಜ</p></div>

ಬಾಂಗ್ಲಾದೇಶ ಧ್ವಜ

   

– ಪಿಟಿಐ ಚಿತ್ರ

ನವದೆಹಲಿ: ಬಾಂಗ್ಲಾದೇಶದಲ್ಲಿ ಹಿಂದು ವ್ಯಕ್ತಿ ದೀಪು ಚಂದ್ರದಾಸ್‌ ಅವರ ಬರ್ಬರ ಹತ್ಯೆಯಾದ ಬೆನ್ನಲ್ಲೇ, ಅಲ್ಲಿನ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದಾಳಿಗಳ ಬಗ್ಗೆ ಭಾರತ ತೀವ್ರ ಕಳವಳ ವ್ಯಕ್ತಪಡಿಸಿದೆ.  

ADVERTISEMENT

ದೀಪು ಹತ್ಯೆಗೆ ನ್ಯಾಯ ದೊರೆಯಬೇಕು ಮತ್ತು ಅಪರಾಧಿಗಳಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಭಾರತ ಆಗ್ರಹಿಸಿದೆ. 

‘ಬಾಂಗ್ಲಾದೇಶದ ಪರಿಸ್ಥಿತಿಯನ್ನು ಭಾರತ ಸೂಕ್ಷ್ಮವಾಗಿ ಗಮನಿಸುತ್ತಿದೆ. ನಮ್ಮ ಅಧಿಕಾರಿಗಳು ಬಾಂಗ್ಲಾದ ಅಧಿಕಾರಿಗಳ ಜತೆ ಸಂಪರ್ಕದಲ್ಲಿದ್ದು, ಕಳವಳವನ್ನು ವ್ಯಕ್ತಪಡಿಸಿದ್ದಾರೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್‌ ಜೈಸ್ವಾಲ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 

ಬಾಂಗ್ಲಾದ ಯುವ ನಾಯಕ ಶರೀಫ್‌ ಉಸ್ಮಾನ್‌ ಹಾದಿ ಹತ್ಯೆಯಾದ ಬಳಿಕ ಬಾಂಗ್ಲಾದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಈ ವೇಳೆ ಹಿಂದು ವ್ಯಕ್ತಿ ದೀಪು ಚಂದ್ರದಾಸ್‌ ಎಂಬುವರನ್ನು ಗುಂಪೊಂದು ಬೆಂಕಿ ಹಚ್ಚಿ ಹತ್ಯೆ ಮಾಡಿತ್ತು.

‘ದಾರಿ ತಪ್ಪಿಸುವ ವರದಿ’

ಬಾಂಗ್ಲಾದಲ್ಲಿ ಹಿಂದೂ ವ್ಯಕ್ತಿಯ ಹತ್ಯೆ ವಿರೋಧಿಸಿ ನವದೆಹಲಿಯ ಬಾಂಗ್ಲಾದೇಶ ಹೈ ಕಮಿಷನ್‌ ಕಚೇರಿ ಎದುರು ನಡೆದ ಪ್ರತಿಭಟನೆ ಕುರಿತು ಬಾಂಗ್ಲಾದೇಶದ ಪತ್ರಿಕೆಗಳು ಮಾಡಿರುವ ವರದಿಗಳು ದಾರಿ ತಪ್ಪಿಸುವಂತಿವೆ ಎಂದು ಕೇಂದ್ರ ಸರ್ಕಾರ ಖಂಡಿಸಿದೆ.

ದೀಪು ಅವರ ಹತ್ಯೆಯನ್ನು ಖಂಡಿಸಿ 20ರಿಂದ 25 ಯುವ ಜನರು ಬಾಂಗ್ಲಾದೇಶದ ಹೈಕಮಿಷನ್‌ ಕಚೇರಿ ಬಳಿ ಶನಿವಾರ ಪ್ರತಿಭಟನೆ ನಡೆಸಿ, ಕೆಲ ಘೋಷಣೆಗಳನ್ನು ಕೂಗಿದ್ದರು. ಬಾಂಗ್ಲಾದಲ್ಲಿರುವ ಎಲ್ಲ ಅಲ್ಪಸಂಖ್ಯಾತರಿಗೆ ರಕ್ಷಣೆ ನೀಡಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದ್ದರು ಎಂದು ಜೈಸ್ವಾಲ್‌ ಮಾಹಿತಿ ನೀಡಿದರು.

‘ಆದರೆ, ಬಾಂಗ್ಲಾದ ಪತ್ರಿಕೆಗಳಲ್ಲಿ, ಪ್ರತಿಭಟನಕಾರರು ಆವರಣದ ಭದ್ರತೆಯನ್ನು ಉಲ್ಲಂಘಿಸಲು ಯತ್ನಿಸಿದ್ದಾರೆ ಎಂದು ವರದಿಯಾಗಿದೆ. ಅದು ಸತ್ಯಕ್ಕೆ ದೂರವಾದದ್ದು. ಈ ರೀತಿ ಯಾವುದೇ ಉಲ್ಲಂಘನೆಗಳು ನಡೆದಿಲ್ಲ. ಕೆಲ ನಿಮಿಷ ಪ್ರತಿಭಟನೆ ನಡೆಸಿದ ಪ್ರತಿಭಟನಕಾರರ ಗುಂಪನ್ನು ಪೊಲೀಸರು ಚದುರಿಸಿದರು. ಈ ಕುರಿತು ದೃಶ್ಯಗಳ ಪುರಾವೆಗಳು ಸಾರ್ವಜನಿಕವಾಗಿ ಲಭ್ಯವಿವೆ’ ಎಂದು ಅವರು ವಿವರಿಸಿದರು.

ಭಾರತದ ಭೂ ಪ್ರದೇಶದಲ್ಲಿರುವ ವಿದೇಶಿ ರಾಯಭಾರ ಕಚೇರಿಗಳು ಮತ್ತು ಅಲ್ಲಿನ ಅಧಿಕಾರಿಗಳ ರಕ್ಷಣೆಗೆ ಭಾರತ ಬದ್ಧವಾಗಿದೆ ಎಂದು ಅವರು ಪ್ರತಿಕ್ರಿಯಿಸಿದರು.

ಭಾರತದ ವೀಸಾ ಕಾರ್ಯಾಚರಣೆ ಸ್ಥಗಿತ

ಢಾಕಾ: ಬಾಂಗ್ಲಾದ ಯುವ ನಾಯಕ ಶರೀಫ್‌ ಉಸ್ಮಾನ್‌ ಹಾದಿ ಹತ್ಯೆ ಬಳಿಕ ದೇಶದಲ್ಲಿ ಉದ್ವಿಗ್ನತೆ ಹೆಚ್ಚಿರುವ ಕಾರಣ ಚಟ್ಟೋಗ್ರಾಮ್‌ನ ಭಾರತೀಯ ವೀಸಾ ಅರ್ಜಿ ಕೇಂದ್ರದಲ್ಲಿ ವೀಸಾ ಕಾರ್ಯಾಚರಣೆಯನ್ನು ಭಾನುವಾರ ಸ್ಥಗಿತಗೊಳಿಸಲಾಗಿದೆ.  ‘ಇತ್ತೀಚೆಗೆ ನಡೆದ ಬೆಳವಣಿಗೆಗಳಿಂದ ಭದ್ರತಾ ಸಮಸ್ಯೆಗಳು ಉಂಟಾಗಿರುವ ಕಾರಣ ಭಾನುವಾರದಿಂದ (ಡಿ. 21) ಮುಂದಿನ ಆದೇಶದವರೆಗೆ ವೀಸಾ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ. ಪರಿಸ್ಥಿತಿ ಸುಧಾರಿಸಿದ ಬಳಿಕ ಕೇಂದ್ರವನ್ನು ಪುನಃ ತೆರೆಯಲಾಗುವುದು’ ಎಂದು ಕೇಂದ್ರದ ಪ್ರಕಟಣೆ ತಿಳಿಸಿದೆ. ಢಾಕಾ ಖುಲ್ನಾ ರಾಜ್‌ಶಾಹಿ ಚಟ್ಟೋಗ್ರಾಮ್‌ ಸಿಲ್ಹೆಟ್‌ಗಳಲ್ಲಿ ಭಾರತದ ವೀಸಾ ಕೇಂದ್ರಗಳಿವೆ. ಈ ಪೈಕಿ ಚಟ್ಟೋಗ್ರಾಮ್‌ ಹೊರತುಪಡಿಸಿ ಉಳಿದ ನಾಲ್ಕು ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ ಎಂದು ಅದು ಹೇಳಿದೆ.

ವೀಸಾ ಕೇಂದ್ರ– ಭದ್ರತೆ ಹೆಚ್ಚಳ

ಢಾಕಾ: ಪ್ರತಿಭಟನೆ ಹಿಂಸಾಚಾರ ಹೆಚ್ಚುತ್ತಿರುವ ಕಾರಣ ಬಾಂಗ್ಲಾದೇಶದ ಸಿಲ್ಹೆಟ್‌ನಲ್ಲಿನ ಭಾರತೀಯ ಸಹಾಯಕ ಹೈಕಮಿಷನ್‌ ಕಚೇರಿ ಮತ್ತು ವೀಸಾ ಅರ್ಜಿ ಕೇಂದ್ರಕ್ಕೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ ಎಂದು ಬಾಂಗ್ಲಾದ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

‘ಈ ಪರಿಸ್ಥಿತಿಯನ್ನು ಮೂರನೇ ವ್ಯಕ್ತಿಗಳು ದುರ್ಬಳಕೆ ಮಾಡಿಕೊಳ್ಳಲು ಅವಕಾಶ ನೀಡಬಾರದು ಎಂಬ ಉದ್ದೇಶದಿಂದ ಹೆಚ್ಚಿನ ಭದ್ರತೆ ನೀಡಿದ್ದೇವೆ’ ಎಂದು ಸಿಲ್ಹೆಟ್‌ ಮೆಟ್ರೊಪಾಲಿಟನ್‌ ಪೊಲೀಸ್‌ನ ಹೆಚ್ಚುವರಿ ಉಪ ಆಯುಕ್ತ ಸೈಫುಲ್‌ ಇಸ್ಲಾಂ ಮಾಹಿತಿ ನೀಡಿದ್ದಾರೆ.

ಭದ್ರತಾ ಪಡೆಗಳ ಸದಸ್ಯರು ರಾತ್ರಿಯಿಡೀ ಕಾರ್ಯನಿರ್ವಹಿಸಿದ್ದಾರೆ ಎಂದು ಅವರು ವಿವರಿಸಿದ್ದಾರೆ.  ಹಾದಿ ಹತ್ಯೆ ಬೆನ್ನಲ್ಲೇ ಭಾರತದ ಸಹಾಯಕ ಹೈಕಮಿಷನ್‌ ಕಚೇರಿಯನ್ನು ಮುತ್ತಿಗೆ ಹಾಕುವುದಾಗಿ ಗಾನೋ ಓದಿಕರ್‌ ಪರಿಷತ್‌ ಇತ್ತೀಚೆಗೆ ಘೋಷಿಸಿತ್ತು. ಈ ಹಿನ್ನೆಲೆಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. 

ತ್ರಿಪುರಾದಲ್ಲಿ ಸೇನಾ ಬೆಟಾಲಿಯನ್‌: ಸಿ.ಎಂ ಸಹಾ

ಅಗರ್ತಲಾ: ಬಾಂಗ್ಲಾದಲ್ಲಿ ಹೆಚ್ಚುತ್ತಿರುವ ಅಶಾಂತಿಯ ಬೆನ್ನಲ್ಲೇ ಈಶಾನ್ಯ ರಾಜ್ಯವಾದ ತ್ರಿಪುರಾದಲ್ಲಿ ಸೇನಾ ಬೆಟಾಲಿಯನ್‌ ಅನ್ನು ನಿಯೋಜಿಸಲಾಗಿದೆ ಎಂದು ತ್ರಿಪುರಾದ ಮುಖ್ಯಮಂತ್ರಿ ಮಾಣಿಕ್‌ ಸಹಾ ಭಾನುವಾರ ತಿಳಿಸಿದ್ದಾರೆ.

1971ರ ಭಾರತ–ಪಾಕ್‌ ಯುದ್ಧದಲ್ಲಿ ಹೋರಾಡಿದ ಸೇನಾ ಬೆಟಾಲಿಯನ್ ಅನ್ನು ಇಲ್ಲಿಗೆ ನಿಯೋಜಿಸಲಾಗಿದೆ. ಬಾಂಗ್ಲಾ ಸೇನೆಯಾದ ‘ಮುಕ್ತಿ ಬಹಿನಿಗೆ’ ತರಬೇತಿ ನೀಡಿದ್ದು ಇದೇ ಬೆಟಾಲಿಯನ್‌ ಎಂದು ಅವರು ಮಾಹಿತಿ ನೀಡಿದ್ದಾರೆ.

ಬಿಜೆಪಿ ಕಾನೂನು ಘಟಕದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಘಟನೆಗಳನ್ನು ಮತ್ತು ಅದರ ಸಂಭಾವ್ಯ ಪರಿಣಾಮಗಳ ಕುರಿತು ನಾನು ದೆಹಲಿಗೆ ವರದಿಗಳನ್ನು ರವಾನಿಸುತ್ತಿದ್ದೇನೆ’ ಎಂದು ಅವರು ಹೇಳಿದ್ದಾರೆ.

1971ರ ಯುದ್ಧದ ವೇಳೆ ಭಾರತೀಯ ಸೇನೆಯು ಪರ್ವತ ಭಾಗಗಳಲ್ಲಿ ನಿರ್ಣಾಯಕ ಪಾತ್ರವಹಿಸಿತ್ತು ಎಂದ ಅವರು ಬಾಂಗ್ಲಾದೇಶದಲ್ಲಿನ ಅಶಾಂತಿಯ ವಾತಾವರಣಕ್ಕೆ ಪಾಕಿಸ್ತಾನ ಕಾರಣ ಎಂದು ದೂರಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಸುರಕ್ಷಿತ ಕೈಯಲ್ಲಿ ಭಾರತ ಇದೆ ಎಂಬುದು ಸಂತೋಷದ ವಿಷಯವಾಗಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.