ADVERTISEMENT

ತಮಿಳುನಾಡು: ಕಾಣೆಯಾಗಿದ್ದ ಕಾಂಗ್ರೆಸ್‌ ನಾಯಕ ಮೃತ

ಪಕ್ಷದ ಮುಖಂಡರಿಂದ ಜೀವ ಬೆದರಿಕೆ ಇರುವುದಾಗಿ ದೂರು ನೀಡಿದ್ದ ಕೆ.‍ಪಿ.ಕೆ. ಜಯಕುಮಾರ್‌

​ಪ್ರಜಾವಾಣಿ ವಾರ್ತೆ
Published 4 ಮೇ 2024, 16:17 IST
Last Updated 4 ಮೇ 2024, 16:17 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಚೆನ್ನೈ: ಎರಡು ದಿನಗಳ ಹಿಂದೆ ಕಾಣೆಯಾಗಿದ್ದ ತಮಿಳುನಾಡಿನ ತಿರುನೆಲ್ವೇಲಿ (ಪೂರ್ವ) ಜಿಲ್ಲೆಯ ಕಾಂಗ್ರೆಸ್‌ ಅಧ್ಯಕ್ಷ ಕೆ.‍ಪಿ.ಕೆ. ಜಯಕುಮಾರ್‌ ದನಸಿಂಗ್‌ ಅವರ ಮೃತದೇಹವು ಅರ್ಧ ಸುಟ್ಟ ಸ್ಥಿತಿಯಲ್ಲಿ ಅವರ ಜಮೀನಿನಲ್ಲಿ ಶನಿವಾರ ಪತ್ತೆಯಾಗಿದೆ.

ಈ ಹಿನ್ನೆಲೆಯಲ್ಲಿ ತಮಿಳುನಾಡಿನಲ್ಲಿ ರಾಜಕೀಯ ಕೆಸರೆರಚಾರ ಆರಂಭವಾಗಿದ್ದು, ಡಿಎಂಕೆ ಆಡಳಿತದಲ್ಲಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ತೀರಾ ಹದಗೆಟ್ಟಿದೆ ಎಂದು ವಿರೋಧ‍ ಪಕ್ಷಗಳು ಟೀಕಾಪ್ರಹಾರ ನಡೆಸಿವೆ.

ADVERTISEMENT

ಜಯಕುಮಾರ್‌ ಅವರ ಮೃತದೇಹವನ್ನು ವಶಕ್ಕೆ ತೆಗೆದುಕೊಂಡ ಬಳಿಕ ಪ್ರಕರಣ ಕುರಿತು ಮಾತನಾಡಿದ ತಿರುನೆಲ್ವೇಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌. ಸಿಲಂಬರಸನ್‌ ಅವರು, ಎಂಟು ಮಂದಿ ತಮಗೆ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಜಯಕುಮಾರ್‌ ಅವರು ಏಪ್ರಿಲ್‌ 30ರಂದು ತಮಗೆ ಪತ್ರ ಬರೆದಿದ್ದರು. ಅವರ ಪಕ್ಷದ ಮುಖಂಡರ ಹೆಸರನ್ನೂ ಪತ್ರದಲ್ಲಿ ಉಲ್ಲೇಖಿಸಿದ್ದರು. ಕುಠಲಿಂಗಮ್‌ ಗ್ರಾಮ ಪಂಚಾಯತಿ ಅಧ್ಯಕ್ಷ  ಆನಂದ ರಾಜ, ನಂಗುನೇರಿ ಕಾಂಗ್ರೆಸ್‌ ಶಾಸಕ ರೂಬಿ ಮನೋಹರನ್‌, ತಮಿಳುನಾಡು ಕಾಂಗ್ರೆಸ್‌ ಸಮಿತಿ ಮುಖ್ಯಸ್ಥ ಕೆ.ವಿ. ಥಂಗಬಾಲು ಮತ್ತು ನಾಲ್ವರು ಇತರರು ತಮ್ಮಿಂದ ಹಣ ಸುಲಿಗೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು ಎಂದು ಹೇಳಿದ್ದಾರೆ. ಜಯಕುಮಾರ್ ಅವರ ಕೈ, ಕಾಲುಗಳನ್ನು ವಿದ್ಯುತ್‌ ಕೇಬಲ್‌ಗಳಿಂದ ಕಟ್ಟಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಜಯಕುಮಾರ್ ಅವರು ದೂರು ನೀಡಿದ್ದರೂ ಆ ಕುರಿತು ಕ್ರಮ ಕೈಗೊಳ್ಳದ ಕುರಿತಾಗಿ ಪೊಲೀಸರ ವಿರುದ್ಧ ಆಕ್ರೋಶವೂ ವ್ಯಕ್ತವಾಗಿದೆ. ಈ ನಡುವೆಯೇ,  ಆರೋಪಿಗಳನ್ನು ಸೆರೆಹಿಡಿಯಲು ಪೊಲೀಸರ ಏಳು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ತಿರುನೆಲ್ವೇಲಿ ಜಿಲ್ಲಾ ಪೊಲೀಸರು ಹೇಳಿದ್ದಾರೆ.

ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರು, ‘ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಕುರಿತು ನಾನು ಪ್ರತಿದಿನ ಧ್ವನಿ ಎತ್ತುತ್ತಲೇ ಇದ್ದೇನೆ. ರಾಷ್ಟ್ರಮಟ್ಟದ ಪಕ್ಷವೊಂದರ ಜಿಲ್ಲಾಧ್ಯಕ್ಷನ ಮೃತದೇಹ ವಶಕ್ಕೆ ತೆಗೆದುಕೊಂಡಿರುವುದು ಗಾಬರಿ ಹುಟ್ಟಿಸಿದೆ’ ಎಂದಿದ್ದಾರೆ.

‘ಕಾಂಗ್ರೆಸ್‌ ಮುಖಂಡರ ಹೆಸರು ಉಲ್ಲೇಖಿಸಿ ಜಯಕುಮಾರ್‌ ಅವರು ಪೊಲೀಸ್‌ ವರಿಷ್ಠಾಧಿಕಾರಿ ಅವರಿಗೆ ಪತ್ರ ಬರೆದಿದ್ದರೂ ಪೊಲೀಸರು ಕೈಗೊಂಡಿಲ್ಲ’ ಎಂದು ರಾಜ್ಯ ಬಿಜೆಪಿ ಮುಖ್ಯಸ್ಥ ಅಣ್ಣಾಮಲೈ ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.