ಪಾಲ್ಘರ್: ಐದು ತಿಂಗಳ ಹಿಂದೆ ಮಹಾರಾಷ್ಟ್ರದ ಠಾಣೆ ಜಿಲ್ಲೆಯಿಂದ ನಾಪತ್ತೆಯಾಗಿದ್ದ ಮಾನಸಿಕ ಅಸ್ವಸ್ಥ ಮಹಿಳೆಯನ್ನು ಸಂಸ್ಥೆಯೊಂದು ಗೂಗಲ್ ಸರ್ಚ್ ಸಹಾಯದಿಂದ ಆಕೆಯ ಕುಟುಂಬಸ್ಥರೊಂದಿಗೆ ಸೇರಿಸಲು ನೆರವಾಗಿದೆ.
ಉತ್ತರ ಪ್ರದೇಶ ಮೂಲದ ಫೂಲ್ದೇವಿ ಸಂತ ಲಾಲ್ (50) 2024ರ ಡಿಸೆಂಬರ್‌ನಲ್ಲಿ ಶಹಾಪುರದಲ್ಲಿರುವ ತನ್ನ ಸಂಬಂಧಿಕರ ಮನೆಯಿಂದ ನಾಪತ್ತೆಯಾಗಿದ್ದರು. ನಿರ್ಗತಿಕ ಸ್ಥಿತಿಯಲ್ಲಿದ್ದ ಆಕೆಯನ್ನು ಪಾಲ್ಘರ್ ಜಿಲ್ಲೆಯ ನಲ್ಲಸೋಪಾರ ಪ್ರದೇಶದಲ್ಲಿ ಪೊಲೀಸರು ಪತ್ತೆ ಹಚ್ಚಿದ್ದರು.
ಬಳಿಕ ಅವರನ್ನು ಜೀವನ್ ಆನಂದ್ ಸಂಸ್ಥೆ ನಡೆಸುತ್ತಿರುವ ಸಮರ್ಥ ಆಶ್ರಮಕ್ಕೆ(ನಿರ್ಗತಿಕರ ಪುನರ್ವಸತಿಗಾಗಿ ಕೆಲಸ ಮಾಡುತ್ತಿರುವ ಸರ್ಕಾರೇತರ ಸಂಸ್ಥೆ) ಸೇರಿಸಲಾಗಿತ್ತು.
ಅಲ್ಲಿಯ ಸ್ವಯಂಸೇವಕರು ಮತ್ತು ಸಿಬ್ಬಂದಿ ಗೂಗಲ್ ಸರ್ಚ್ ಮೂಲಕ ಮಹಿಳೆಯ ಗ್ರಾಮವನ್ನು ಮತ್ತು ಆಕೆಯ ಸಂಬಂಧಿಕರನ್ನು ಪತ್ತೆಹಚ್ಚಲು ಪ್ರಯತ್ನಿಸಿದ್ದಾರೆ.
ಆರಂಭದಲ್ಲಿ ಕುಟುಂಬಸ್ಥರನ್ನು ಸಂಪರ್ಕಿಸಿದರೂ, ಅವರು ಮಹಿಳೆಯನ್ನು ಕರೆದುಕೊಂಡು ಹೋಗಲು ಆಶ್ರಮಕ್ಕೆ ಬಂದಿರಲಿಲ್ಲ. ಆದರೆ ಐದು ತಿಂಗಳ ನಂತರ ( 2025ರ ಮೇ 18) ಸಂಬಂಧಿಕರು ಆಕೆಯನ್ನು ಮನೆಗೆ ಕರೆದೊಯ್ದಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.