ಪ್ರಾತಿನಿಧಿಕ ಚಿತ್ರ
ಐಜ್ವಾಲ್: ಮಿಜೋರಾಂ ಪೊಲೀಸ್ ಮತ್ತು ಗಡಿ ಭದ್ರತಾ ಪಡೆಯ (ಬಿಎಸ್‌ಎಫ್) ಸಿಐಡಿ (ವಿಶೇಷ ಶಾಖೆ) ಬೃಹತ್ ಪ್ರಮಾಣದ 7.62 ಎಂಎಂ ಜೀವಂತ ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದೆ. ಅಲ್ಲದೆ ಈ ಸಂಬಂಧ ಐಜ್ವಾಲ್ ಜಿಲ್ಲೆಯಲ್ಲಿ ಓರ್ವ ವ್ಯಕ್ತಿಯನ್ನು ಬಂಧಿಸಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.
ನಿರ್ದಿಷ್ಟ ಮಾಹಿತಿಯ ಮೇರೆಗೆ ಕಾರ್ಯನಿರ್ವಹಿಸಿದ ತಂಡವು ಮಂಗಳವಾರ ರಾಜ್ಯ ರಾಜಧಾನಿ ಐಜ್ವಾಲ್‌ನಿಂದ ಸುಮಾರು 36 ಕಿ.ಮೀ ದೂರದಲ್ಲಿರುವ ಸೆಲಿಂಗ್ ಗ್ರಾಮದಲ್ಲಿ ಜಂಟಿ ಕಾರ್ಯಾಚರಣೆ ನಡೆಸಿ, ಪಿಕಪ್ ಟ್ರಕ್‌ನಿಂದ ಸುಮಾರು ₹16.54 ಲಕ್ಷ ಮೌಲ್ಯದ 7.62 ಎಂಎಂನ 3,008 ಜೀವಂತ ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದೆ ಎಂದು ಅವರು ಹೇಳಿದ್ದಾರೆ.
ಪಿಕಪ್ ಟ್ರಕ್‌ನ ಚಾಲಕ ಐಜ್ವಾಲ್‌ನ ಝೌಂಗ್ಟುಯಿ ಪ್ರದೇಶದ ನಿವಾಸಿ ಲಾಲಾವಿತಂಗಾ (48) ಬಂಧಿತ. ಮದ್ದುಗುಂಡುಗಳನ್ನು ಸಾಗಿಸಿದ್ದಕ್ಕಾಗಿ ಆತನನ್ನು ಬಂಧಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಮದ್ದುಗುಂಡುಗಳನ್ನು ಸಾಗಿಸಲು ಬಳಸಿದ ವಾಹನವನ್ನು ನಾಗರಿಕ ಸಾಕ್ಷಿಗಳ ಸಮ್ಮುಖದಲ್ಲಿ ಏಜೆನ್ಸಿಗಳು ವಶಪಡಿಸಿಕೊಂಡಿವೆ. ಈ ಸಂಬಂಧ ಐಜ್ವಾಲ್‌ನ ಬಾಂಗ್‌ಕಾವ್ನ್ ಪೊಲೀಸ್ ಠಾಣೆಯಲ್ಲಿ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಪ್ರಕರಣದ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.