ADVERTISEMENT

ಗಡಿ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲು ಅಸ್ಸಾಂ–ಮಿಜೋರಾಂ ಒಪ್ಪಿಗೆ

ಪಿಟಿಐ
Published 5 ಆಗಸ್ಟ್ 2021, 10:50 IST
Last Updated 5 ಆಗಸ್ಟ್ 2021, 10:50 IST
   

ಐಜ್ವಾಲ್: ಅಸ್ಸಾಂ ಮತ್ತು ಮಿಜೋರಾಂ ರಾಜ್ಯಗಳ ಗಡಿ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲುಮಿಜೋರಾಂನ ಐಜ್ವಾಲ್‌ನಲ್ಲಿ ನಡೆದ ಪ್ರತಿನಿಧಿಗಳ ಸಭೆಯಲ್ಲಿ ಉಭಯ ರಾಜ್ಯಗಳು ಒಪ್ಪಿಗೆ ಸೂಚಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಸ್ಸಾಂ ಸರ್ಕಾರವು ತನ್ನ ರಾಜ್ಯದ ಜನರು ಮಿಜೋರಾಂಗೆ ಪ್ರಯಾಣಿಸದಂತೆ ನೀಡಿದ್ದ ಸಲಹೆಯನ್ನು ಹಿಂಪಡೆಯಲು ನಿರ್ಧರಿಸಿದೆ ಎಂದು ಅವರು ಹೇಳಿದ್ದಾರೆ.

‘ಎರಡೂ ರಾಜ್ಯ ಸರ್ಕಾರಗಳು ಅಂತರ ರಾಜ್ಯ ಗಡಿ ಪ್ರದೇಶಗಳಲ್ಲಿ ಶಾಂತಿಯನ್ನು ಕಾಯ್ದುಕೊಳ್ಳಲು ಒಪ್ಪಿಕೊಂಡವು. ಈ ನಿಟ್ಟಿನಲ್ಲಿ ಗಡಿಯಲ್ಲಿ ಕೇಂದ್ರ ಸರ್ಕಾರವು ತಟಸ್ಥ ಭದ್ರತಾ ಪಡೆಗಳನ್ನು ನಿಯೋಜಿಸುವುದನ್ನು ಸ್ವಾಗತಿಸಿವೆ’ಎಂದು ಅವರು ಹೇಳಿದ್ದಾರೆ.

ADVERTISEMENT

‘ಈ ಮೂಲಕ ಇತ್ತೀಚೆಗೆ ಎರಡು ರಾಜ್ಯಗಳ ಪೊಲೀಸ್ ಪಡೆಗಳ ನಡುವೆ ಘರ್ಷಣೆ ನಡೆದ ಪ್ರದೇಶ ಸೇರಿ ಗಡಿಯ ಯಾವುದೇ ಪ್ರದೇಶದಲ್ಲಿ ಗಸ್ತು, ಪ್ರಾಬಲ್ಯ ಸಾಧಿಸಲು ಅಥವಾ ಇನ್ಯಾವುದೇ ಉದ್ದೇಶದಿಂದ ಪೊಲೀಸ್ ಪಡೆಗಳನ್ನು ನಿಯೋಜನೆ ಮಾಡುವಂತಿಲ್ಲ. ಅಸ್ಸಾಂ-ಮಿಜೋರಾಂ ಗಡಿಯಲ್ಲಿರುವ ಕರಿಮಗಂಜ್, ಹೈಲಕಂಡಿ, ಮತ್ತು ಅಸ್ಸಾಂನ ಕ್ಯಾಚಾರ್ ಮತ್ತು ಮಿಜೋರಾಂನ ಮಾಮಿತ್ ಮತ್ತು ಕೊಲಾಸಿಬ್ ಜಿಲ್ಲೆಗಳ ಎಲ್ಲಾ ಪ್ರದೇಶಗಳು ಈ ವ್ಯಾಪ್ತಿಗೆ ಬರುತ್ತವೆ’ಎಂದು ಎರಡು ರಾಜ್ಯಗಳು ನೀಡಿದ ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಜಂಟಿ ಹೇಳಿಕೆಗೆ ಅಸ್ಸಾಂನ ಗಡಿ ರಕ್ಷಣೆ ಮತ್ತು ಅಭಿವೃದ್ಧಿ ಸಚಿವ ಅತುಲ್ ಬೋರಾ, ಇಲಾಖೆಯ ಆಯುಕ್ತರು ಹಾಗೂ ಕಾರ್ಯದರ್ಶಿ ಜಿ ಡಿ ತ್ರಿಪಾಠಿ ಮತ್ತು ಮಿಜೋರಾಂನ ಗೃಹ ಸಚಿವ ಲಾಲ್ಚಾಮ್ಲಿಯಾನ, ಗೃಹ ಕಾರ್ಯದರ್ಶಿ ವನ್ಲಲಾಂಗತ್ಸಾಕ ಸಹಿ ಹಾಕಿದ್ದಾರೆ.

‘ಅಸ್ಸಾಂ ಮತ್ತು ಮಿಜೋರಾಂ ಸರ್ಕಾರಗಳ ಪ್ರತಿನಿಧಿಗಳು ಉಭಯ ರಾಜ್ಯಗಳ ಜನರ ನಡುವೆ ಶಾಂತಿ ಮತ್ತು ಸಾಮರಸ್ಯವನ್ನು ಉತ್ತೇಜಿಸಲು, ಸಂರಕ್ಷಿಸಲು ಮತ್ತು ಕಾಪಾಡಿಕೊಳ್ಳಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲು ಒಪ್ಪಿದ್ದಾರೆ’ಎಂದು ಅಸ್ಸಾಂ ಸಚಿವ ಅಶೋಕ್ ಸಿಂಘಾಲ್ ಟ್ವೀಟ್ ಮಾಡಿದ್ದಾರೆ.

ಜುಲೈ 26 ರಂದು ಈ ಎರಡು ಈಶಾನ್ಯ ರಾಜ್ಯಗಳ ನಡುವಿನ ಅಂತರ್ ರಾಜ್ಯ ಗಡಿ ಘರ್ಷಣೆಯಲ್ಲಿ ಆರು ಮಂದಿ ಅಸ್ಸಾಂ ಪೊಲೀಸ್ ಸಿಬ್ಬಂದಿ ಸಾವನ್ನಪ್ಪಿದ್ದರು. ಕ್ಯಾಚಾರ್ ಪ್ರದೇಶದ ಎಸ್‌ಪಿ ಸೇರಿದಂತೆ 50 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.