ಗಾಳಿಯಲ್ಲಿ ಗುಂಡು ಹಾರಿಸಿದ ಎಂಎಲ್‌ಸಿ ಮಲ್ಲಣ್ಣ ಗನ್‌ಮ್ಯಾನ್
(ಚಿತ್ರ–@Iamarshad46)
ಹೈದರಾಬಾದ್: ಆರ್‌ಎಸ್ ಶಾಸಕಿ ಕವಿತಾ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ತೆಲಂಗಾಣ ಜಾಗೃತಿ ಸದಸ್ಯರು ಅಮಾನತುಗೊಂಡಿರುವ ಕಾಂಗ್ರೆಸ್ ಎಂಎಲ್‌ಸಿ ಟೀನ್‌ಮಾರ್ ಮಲ್ಲಣ್ಣ ಅವರ ಕಚೇರಿಗೆ ಭಾನುವಾರ ಮುತ್ತಿಗೆ ಹಾಕಿದ್ದ ಸಂದರ್ಭದಲ್ಲಿ ಅವರ ಗನ್‌ಮ್ಯಾನ್ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.
‘ಪ್ರತಿಭಟನಕಾರರು ಕಚೇರಿಗೆ ನುಗ್ಗಿ ಪಿಠೋಪಕರಣಗಳಿಗೆ ಹಾನಿ ಮಾಡಿದ್ದಾರೆ. ಕೆಲ ನೌಕರರ ಮೇಲೆ ಹಲ್ಲೆ ನಡೆಸಿದ್ದಾರೆ ಮತ್ತು ಆತ್ಮ ರಕ್ಷಣೆಗಾಗಿ ಗನ್‌ಮ್ಯಾನ್ ಗಾಳಿಯಲ್ಲಿ ಗುಂಡುಹಾರಿಸುವಂತೆ ಪ್ರಚೋದಿಸಿದ್ದಾರೆ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
‘ಕವಿತಾ ಬೆಂಬಲಿಗರು ಗನ್‌ಮ್ಯಾನ್‌ನ ಕೈಯಿಂದ ಪಿಸ್ತೂಲ್ ಕಸಿದುಕೊಂಡು ಗುಂಡು ಹಾರಿಸಲು ಯತ್ನಿಸಿದ್ದಾರೆ. ಸಾಕ್ಷ್ಯ ಸಮೇತವಾಗಿ ಪೊಲೀಸರಿಗೆ ದೂರು ನೀಡಿದ್ದೇನೆ. ಕೊಲೆ ಯತ್ನಕ್ಕೆ ಪ್ರಚೋದನೆ ನೀಡಿದ ಕವಿತಾ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಬೇಕು’ ಎಂದು ಮಲ್ಲಣ್ಣ ಆಗ್ರಹಿಸಿದ್ದಾರೆ.
ಘಟನೆ ಬಗ್ಗೆ ಮಾಹಿತಿ ಪಡೆದ ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.