ADVERTISEMENT

ಕೋವಿಡ್‌ ನಿರ್ಬಂಧ ನಡುವೆ ಎಂಎನ್‌ಎಸ್‌ ಕಾರ್ಯಕರ್ತರಿಂದ ‘ದಹಿ ಹಂಡಿ’ ಆಚರಣೆ

ಪಿಟಿಐ
Published 31 ಆಗಸ್ಟ್ 2021, 6:07 IST
Last Updated 31 ಆಗಸ್ಟ್ 2021, 6:07 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಠಾಣೆ: ಮಹಾರಾಷ್ಟ್ರದಲ್ಲಿ ಕೋವಿಡ್‌ ಹಿನ್ನೆಲೆಯಲ್ಲಿ ‘ದಹಿ ಹಂಡಿ’ (ಮೊಸರು ಕುಡಿಕೆ) ಉತ್ಸವವನ್ನು ನಿಷೇಧಿಸಲಾಗಿದೆ. ಆದರೂ, ಮಹಾರಾಷ್ಟ್ರ ನವನಿರ್ಮಾಣ್‌ ಸೇನಾ(ಎಂಎನ್‌ಎಸ್‌) ಕಾರ್ಯಕರ್ತರು ಠಾಣೆಯಲ್ಲಿ ‘ದಹಿ ಹಂಡಿ’ ಉತ್ಸವವನ್ನು ಆಚರಿಸಿದರು.

ಕೃಷ್ಣ ಜನ್ಮಾಷ್ಟಮಿಯ ದಿನದಂದು ‘ದಹಿ ಹಂಡಿ’ಯನ್ನು ಆಯೋಜಿಸಲಾಗಿತ್ತು. ನೌಪದ ಪ್ರದೇಶದಲ್ಲಿ ಸೋಮವಾರ ಮಧ್ಯರಾತ್ರಿ ವೇಳೆ ಎಂಎನ್‌ಎಸ್‌ ಕಾರ್ಯಕರ್ತರು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದರು. ದಹಿ ಹಂಡಿಯನ್ನು ಎತ್ತರಕ್ಕೆ ಕಟ್ಟಲಾಗಿತ್ತು. ಅವರೆಲ್ಲರೂ ಸೇರಿ ಗೋಪುರ (ಪಿರಮಿಡ್‌) ರಚಿಸಿದರು. ಮಹಿಳಾ ಕಾರ್ಯಕರ್ತೆಯೊಬ್ಬರು ಮೇಲೆ ಹತ್ತಿ ಮೊಸರು ಕುಡಿಕೆಯನ್ನು ಒಡೆದರು.

‘ಈ ಬಳಿಕ ಆಗಮಿಸಿದ ಪೊಲೀಸರು ದಹಿ ಹಂಡಿ ಉತ್ಸವವನ್ನು ನಿಲ್ಲಿಸಲು ಮುಂದಾದರು. ಈ ವೇಳೆ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆದಿದೆ. ಕೋವಿಡ್‌ ನಿರ್ಬಂಧಗಳನ್ನು ಉಲ್ಲಂಘಿಸಿದ ಆರೋಪದಡಿ ಪೊಲೀಸರು ಐವರು ಕಾರ್ಯಕರ್ತರನ್ನು ಬಂಧಿಸಿದರು’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ADVERTISEMENT

ಈ ಹಿಂದೆ ದಹಿ ಹಂಡಿ ಕಾರ್ಯಕ್ರಮವನ್ನು ಆಯೋಜಿಸಲು ಅನುಮತಿ ನೀಡುವಂತೆ ಒತ್ತಾಯಿಸಿ ಪ್ರತಿಭಟಿಸಿದ್ದ ಎಂಎನ್‌ಎಸ್‌ ಠಾಣೆ–ಪಾಲ್ಘರ್‌ ಘಟಕದ ಮುಖ್ಯಸ್ಥ ಅವಿನಾಶ್‌ ಜಾಧವ್‌ ಅವರನ್ನು ಪೊಲೀಸ್‌ ಬಂಧಿಸಿ ಬಳಿಕ ಬಿಡುಗಡೆಗೊಳಿಸಿದ್ದರು.

ಠಾಣೆಯ ವರ್ತಕ್ ನಗರ ಮತ್ತು ನಾಲಾ ಸೊಪಾರದಲ್ಲೂ ಪಕ್ಷದ ಕಾರ್ಯಕರ್ತರು ದಹಿ ಹಂಡಿ ಕಾರ್ಯಕ್ರಮವನ್ನು ಆಯೋಜಿಸಿದ್ದರು.

‘ಶಿವಸೇನಾ ಹಿಂದೂಗಳ ಮತಗಳನ್ನು ಗಳಿಸಿ, ಅಧಿಕಾರಕ್ಕೆ ಬಂದಿದೆ. ಹಾಗಿದ್ದರೂ ಹಿಂದೂಗಳ ಕಾರ್ಯಕ್ರಮಗಳ ಮೇಲೆ ನಿಷೇಧ ಹೇರಿದೆ. ನಿರ್ಬಂಧವನ್ನು ಹೇರಲಾಗಿದ್ದರೂ ನಾವು ಉತ್ಸವವನ್ನು ಆಚರಿಸುತ್ತೇವೆ’ ಎಂದು ಜಾಧವ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.