ADVERTISEMENT

ಬಿಹಾರ ಚುನಾವಣೆ | C-Vigil ಆ್ಯಪ್‌ನಲ್ಲಿ 650 ದೂರು ದಾಖಲು: ಚುನಾವಣಾ ಆಯೋಗ

ಶಮಿನ್‌ ಜಾಯ್‌
Published 22 ಅಕ್ಟೋಬರ್ 2025, 2:16 IST
Last Updated 22 ಅಕ್ಟೋಬರ್ 2025, 2:16 IST
   

ನವದೆಹಲಿ: ವಿಧಾನಸಭೆ ಚುನಾವಣೆಗೆ ಸಜ್ಜಾಗಿರುವ ಬಿಹಾರ ಹಾಗೂ ಉಪ ಚುನಾವಣೆ ನಡೆಯಲಿರುವ ಏಳು ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿ ಅಕ್ಟೋಬರ್‌ 6ರಿಂದ 21 ನಡುವೆ ಮಾದರಿ ನೀತಿ ಸಂಹಿತೆ (ಎಂಸಿಸಿ) ಉಲ್ಲಂಘನೆಗೆ ಸಂಬಂಧಿಸಿದ 650 ದೂರುಗಳು C-Vigil ಆ್ಯಪ್‌ನಲ್ಲಿ ದಾಖಲಾಗಿವೆ ಎಂದು ಚುನಾವಣಾ ಆಯೋಗ ಮಂಗಳವಾರ ತಿಳಿಸಿದೆ.

ಈ ಪೈಕಿ 649 ದೂರುಗಳನ್ನು ಇತ್ಯರ್ಥ ಮಾಡಲಾಗಿದೆ. ಅದರಲ್ಲೂ 612 ದೂರುಗಳನ್ನು ಅಂದರೆ ಶೇ 94 ರಷ್ಟನ್ನು 100 ನಿಮಿಷಗಳ ಒಳಗೆ ಬಗೆಹರಿಸಲಾಗಿದೆ. ಇದೇ ಅವಧಿಯಲ್ಲಿ, ತನಿಖಾ ಸಂಸ್ಥೆಗಳು ನಡೆಸಿದ ಕಾರ್ಯಾಚರಣೆ ವೇಳೆ ₹ 71.32 ಕೋಟಿ ನಗದು, ಅಪಾರ ಪ್ರಮಾಣದ ಮದ್ಯ, ಮಾದಕವಸ್ತು, ಬೆಲೆ ಬಾಳುವ ಲೋಹಗಳು ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದೆ.

ಬಿಹಾರದಲ್ಲಿ ದೂರುಗಳು ದಾಖಲಾದ 100 ನಿಮಿಷದೊಳಗೆ ಸಮಸ್ಯೆ ಬಗೆಹರಿಸುವ ಉದ್ದೇಶದಿಂದ 824 ಫ್ಲೈಯಿಂಗ್‌ ಸ್ಕ್ವಾಡ್‌ಗಳನ್ನು ರಚಿಸಲಾಗಿದೆ. ಚುನಾವಣಾ ಆಯೋಗವು, 1950 - ಸಹಾಯವಾಣಿ ಆರಂಭಿಸಿದ್ದು, 24/7 ದೂರುಗಳ ಮೇಲ್ವಿಚಾರಣೆ ವ್ಯವಸ್ಥೆ ಆರಂಭಿಸಿದೆ. ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ C-Vigil ಆ್ಯಪ್‌ ಮೂಲಕ ಯಾರು ಬೇಕಾದರೂ ದೂರು ನೀಡಬಹುದಾಗಿದೆ.

ADVERTISEMENT

243 ಸದಸ್ಯ ಬಲದ ಬಿಹಾರ ವಿಧಾನಸಭೆಗೆ ಎರಡು ಹಂತಗಳಲ್ಲಿ ಚುನಾವಣೆ ನಿಗದಿಯಾಗಿದೆ. 121 ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ನವೆಂಬರ್‌ 6ರಂದು, 122 ಕ್ಷೇತ್ರಗಳಿಗೆ ಎರಡನೇ ಹಂತದಲ್ಲಿ ನವೆಂಬರ್‌ 11ರಂದು ಮತದಾನವಾಗಲಿದೆ. ನವೆಂಬರ್‌ 14ರಂದು ಫಲಿತಾಂಶ ಪ್ರಕಟವಾಗಲಿದೆ.

ಉಳಿದಂತೆ ಜಮ್ಮು ಮತ್ತು ಕಾಶ್ಮೀರದ ಎರಡು, ರಾಜಸ್ಥಾನ, ಜಾರ್ಖಂಡ್‌, ತೆಲಂಗಾಣ, ಪಂಜಾಬ್‌, ಮಿಜೋರಾಂ, ಒಡಿಶಾದ ಒಂದೊಂದು ಕ್ಷೇತ್ರಗಳಿಗೆ ನವೆಂಬರ್‌ 11 ರಂದು ಮತದಾನವಾಗಲಿದ್ದು, ಮೂರು ದಿನಗಳ ನಂತರ (ನವೆಂಬರ್‌ 14ರಂದು) ಫಲಿತಾಂಶ ಬರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.