ADVERTISEMENT

ಮುಂದಿನ ವರ್ಷ ಭಾರತಕ್ಕೆ ಸಿಗಲಿದೆ ಮಾಡರ್ನಾ ಲಸಿಕೆ: 5 ಕೋಟಿ ಡೋಸ್ ಕೊಡಲಿದೆ ಫೈಜರ್‌

ಪಿಟಿಐ
Published 25 ಮೇ 2021, 17:27 IST
Last Updated 25 ಮೇ 2021, 17:27 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ದೆಹಲಿ: ಮುಂದಿನ ವರ್ಷ ಭಾರತದಲ್ಲಿ ಒಂದೇ ಡೋಸ್‌ನ ಕೋವಿಡ್‌ ಲಸಿಕೆ ಬಿಡುಗಡೆ ಮಾಡುವ ನಿರೀಕ್ಷೆಯಲ್ಲಿರುವ ಮಾಡರ್ನಾ ಸಂಸ್ಥೆಯು 'ಸಿಪ್ಲಾ' ಸೇರಿದಂತೆ ಭಾರತದ ಹಲವು ಔಷಧ ತಯಾರಕ ಕಂಪನಿಗಳೊಂದಿಗೆ ಮಾತುಕತೆ ನಡೆಸುತ್ತಿದೆ. ಇನ್ನೊಂದೆಡೆ, ಅಮೆರಿಕದ ಔಷಧ ತಯಾರಕಾ ಸಂಸ್ಥೆ ಫೈಜರ್‌ 2021ರಲ್ಲೇ 5 ಕೋಟಿ ಡೋಸ್‌ಗಳನ್ನು ಭಾರತಕ್ಕೆ ಪೂರೈಸಲು ಸಿದ್ಧವಿದೆಯಾದರೂ, ಕೆಲ ನಿಯಮಗಳ ಸಡಿಲೀಕರಣ ಮತ್ತು ಪರಿಹಾರದ ಬೇಡಿಕೆ ಇಟ್ಟಿದೆ.

ಭಾರತಕ್ಕೆ ಈ ವರ್ಷ ಲಸಿಕೆಯನ್ನು ಪೂರೈಕೆ ಮಾಡಲು ತನ್ನ ಬಳಿ ದಾಸ್ತಾನು ಇಲ್ಲ ಎಂದು ಮಾಡರ್ನಾ ಹೇಳಿಕೊಂಡಿದೆ. ಆದರೆ. 'ಜಾನ್ಸನ್‌ ಆಂಡ್‌ ಜಾನ್ಸನ್‌' ಕಂಪನಿ ತನ್ನ ಲಸಿಕೆಗಳನ್ನು ಅಮೆರಿಕದಿಂದ ಇತರ ರಾಷ್ಟ್ರಗಳಿಗೆ ಭವಿಷ್ಯದಲ್ಲಿ ರಫ್ತು ಮಾಡುವ ಸಾಧ್ಯತೆಗಳಿವೆ ಎಂಬ ಮಾತುಗಳಿವೆ.

ADVERTISEMENT

ಕೋವಿಡ್‌ನ ಎರಡನೇ ಅಲೆಯಿಂದಾಗಿ ಔಷಧ ಮತ್ತು ಲಸಿಕೆಗಳ ಪೂರೈಕೆ ಮತ್ತು ಅಗತ್ಯಗಳ ನಡುವೆ ದೊಡ್ಡ ಕಂದಕ ಸೃಷ್ಟಿಯಾಗಿದೆ. ಹೀಗಾಗಿ ಜಾಗತಿಕ ಮತ್ತು ದೇಶೀಯ ಮಾರುಕಟ್ಟೆಗಳಲ್ಲಿ ಲಭ್ಯವಿರುವ ಲಸಿಕೆ ಕುರಿತು ಚರ್ಚಿಸಲು ಕಳೆದ ವಾರ ಕ್ಯಾಬಿನೆಟ್ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಎರಡು ಸುತ್ತಿನ ಉನ್ನತ ಮಟ್ಟದ ಸಭೆಗಳು ನಡೆದಿವೆ. ಲಸಿಕೆಗಳನ್ನು ಸಂಗ್ರಹಿಸುವ ತುರ್ತು ಈಗ ಇದೆ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ.

'ಭಾರತದೊಂದಿಗೆ ಹಂಚಿಕೊಳ್ಳಲು ಮಾಡರ್ನಾ ಬಳಿ ಸಾಕಷ್ಟು ಲಸಿಕೆಗಳು ಇಲ್ಲ. 2022ರಲ್ಲಿ ತನ್ನ ಒಂದೇ ಡೋಸ್‌ ಲಸಿಕೆಯನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಲು ಅದು ಚಿಂತಿಸಿದೆ. ಇದಕ್ಕಾಗಿ ಮಾಡರ್ನಾ ಸಂಸ್ಥೆಯು ಸಿಪ್ಲಾ ಮತ್ತು ಇತರ ಭಾರತೀಯ ಕಂಪನಿಗಳೊಂದಿಗೆ ಚರ್ಚಿಸುತ್ತಿದೆ,' ಎಂದು ಸಭೆಗೆ ತಿಳಿಸಲಾಯಿತು.

ಅಮೆರಿಕದ ದೈತ್ಯ ಫಾರ್ಮಾ ಕಂಪನಿ ಫೈಜರ್‌ 5 ಕೋಟಿ ಲಸಿಕೆ ನೀಡಲು ಮುಂದೆ ಬಂದಿದೆ. ಜುಲೈನಲ್ಲಿ 1 ಕೋಟಿ, ಆಗಸ್ಟ್‌ನಲ್ಲಿ 1 ಕೋಟಿ, ಸೆಪ್ಟೆಂಬರ್‌ನಲ್ಲಿ 2 ಕೋಟಿ ಮತ್ತು ಅಕ್ಟೋಬರ್‌ನಲ್ಲಿ 1 ಕೋಟಿ ಲಸಿಕೆ ನೀಡಲು ಸಿದ್ಧವಿದೆ. ಆದರೆ, ಅದು ನೇರವಾಗಿ ಭಾರತ ಸರ್ಕಾರದೊಂದಿಗೆ ಮಾತ್ರ ವ್ಯವಹರಿಸಲು ಇಚ್ಚಿಸಿದೆ. ಅಲ್ಲದೆ, 'ಫೈಜರ್ ಇಂಡಿಯಾ'ಕ್ಕೆ ಕೇಂದ್ರ ಸರ್ಕಾರ ಹಣ ಪಾವತಿ ಮಾಡಬೇಕು ಎಂದು ಹೇಳಿದೆ ಎನ್ನಲಾಗಿದೆ.

ಪ್ರಸ್ತುತ, ದೇಶವು ಎರಡು 'ಮೇಡ್-ಇನ್ ಇಂಡಿಯಾ' ಲಸಿಕೆಗಳನ್ನು ಜನರಿಗೆ ನೀಡುತ್ತಿದೆ. ಜನವರಿ ಮಧ್ಯದಲ್ಲಿ ಭಾರತವು ಲಸಿಕಾ ಅಭಿಯಾನ ಆರಂಭಿಸಿದ್ದು, ಇದು ವಿಶ್ವದ ಅತಿ ದೊಡ್ಡ ಲಸಿಕಾ ಅಭಿಯಾನ ಎನಿಸಿಕೊಂಡಿದೆ. ಈ ಅಭಿಯಾನದಲ್ಲಿ ಇಲ್ಲಿವರೆಗೆ 20 ಕೋಟಿ ಡೋಸ್‌ಗಳನ್ನು ಜನರಿಗೆ ನೀಡಲಾಗಿದೆ. ಮೂರನೇ ಲಸಿಕೆ, ರಷ್ಯಾ ನಿರ್ಮಿತ ಸ್ಪುಟ್ನಿಕ್-ವಿ ಸರ್ಕಾರದಿಂದ ಅನುಮೋದನೆ ಪಡೆದಿದ್ದು, ಇದನ್ನು ಸಣ್ಣ ಪ್ರಮಾಣದಲ್ಲಿ ಬಳಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.