ADVERTISEMENT

ಬಂಗಾಳದಲ್ಲಿ ಮಹಾ ಜಂಗಲ್‌ ರಾಜ್‌: ಪ್ರಧಾನಿ ನರೇಂದ್ರ ಮೋದಿ ಆರೋಪ

ಪಿಟಿಐ
Published 20 ಡಿಸೆಂಬರ್ 2025, 16:00 IST
Last Updated 20 ಡಿಸೆಂಬರ್ 2025, 16:00 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ಕೋಲ್ಕತ್ತ : ಭ್ರಷ್ಟಾಚಾರ, ಸ್ವಜನಪಕ್ಷಪಾತ, ಓಲೈಕೆ ಆಡಳಿತದ ವ್ಯವಸ್ಥೆಯು ಪಶ್ಚಿಮ ಬಂಗಾಳದ ಅಭಿವೃದ್ಧಿಯನ್ನು ತಡೆಯುತ್ತಿದೆ. ಅಲ್ಲದೆ ಈ ಪರಿಸ್ಥಿತಿಗಳು ರಾಜ್ಯವನ್ನು ‘ಮಹಾ ಜಂಗಲ್‌ ರಾಜ್‌’ ಆಗಿ ಪರಿವರ್ತಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದರು.

ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ‘ಪಶ್ಚಿಮ ಬಂಗಾಳದ ಮಹಾ ಜಂಗಲ್‌ ರಾಜ್‌ ಪರಿಸ್ಥಿತಿಯನ್ನು ನಾವು ಕೊನೆಗೊಳಿಸುತ್ತೇವೆ’ ಎಂದು ಘೋಷಿಸಿದರು.  

ನಾಡಿಯಾ ಜಿಲ್ಲೆಯ ತಾಹೆರ್‌ಪುರದಲ್ಲಿ ಶನಿವಾರ ನಡೆದ ಬೃಹತ್‌ ಸಭೆಯನ್ನು ಉದ್ದೇಶಿಸಿ ವರ್ಚುವಲ್‌ ಆಗಿ ಮಾತನಾಡಿದ ಅವರು, ‘2026ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಡಬಲ್‌ ಎಂಜಿನ್‌ ಸರ್ಕಾರ ರಚಿಸಲು ಬಿಜೆಪಿಗೆ ಅವಕಾಶ ನೀಡಿ’ ಎಂದು ಮನವಿ ಮಾಡಿದರು. 

ADVERTISEMENT

‘ನನ್ನನ್ನು ಮತ್ತು ಬಿಜೆಪಿಯನ್ನು ಟಿಎಂಸಿ ಎಷ್ಟಾದರೂ ವಿರೋಧಿಸಲಿ, ಆದರೆ ರಾಜ್ಯದ ಜನರಿಗೆ ಕಷ್ಟಕೊಡುವ ಮತ್ತು ಪ್ರಗತಿಯನ್ನು ತಡೆಯುವ ಕಾರ್ಯಗಳನ್ನು ಮಾಡಬಾರದು’ ಎಂದು ಆಗ್ರಹಿಸಿದರು.

‘ಕಮಿಷನ್‌ ಸಂಸ್ಕೃತಿಯು ರಾಜ್ಯದ ಅಭಿವೃದ್ದಿಯನ್ನು ಸ್ಥಗಿತಗೊಳಿಸಿದೆ’ ಎಂದ ಅವರು, ‘ಬಿಜೆಪಿಗೆ ಒಮ್ಮೆ ಅವಕಾಶ ನೀಡಿ, ಡಬಲ್‌ ಎಂಜಿನ್‌ ಸರ್ಕಾರ ರಾಜ್ಯದ ಅಭಿವೃದ್ಧಿಗೆ ಪೂರ್ಣವಾಗಿ ಶ್ರಮಿಸುತ್ತದೆ’ ಎಂದರು. ಈ ಮೂಲಕ ಅವರು ವಿಧಾನಸಭಾ ಚುನಾವಣೆ ಪ್ರಚಾರವನ್ನೂ ಮಾಡಿದರು.

‘ಇತ್ತೀಚೆಗೆ ಬಿಹಾರ ಚುನಾವಣೆಯಲ್ಲಿ ಎನ್‌ಡಿಎ ಭರ್ಜರಿ ಗೆಲುವು ಸಾಧಿಸಿದೆ. ಪಕ್ಕದ ರಾಜ್ಯಗಳ ಫಲಿತಾಂಶ ಬಂಗಾಳದ ಮೇಲೂ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಗಂಗಾ ನದಿಯು ಬಿಹಾರದ ಮೂಲಕ ಬಂಗಾಳಕ್ಕೆ ಹರಿಯುವುದರಿಂದ, ಬಿಹಾರದಲ್ಲಿ ದೊರೆತ ಫಲಿತಾಂಶವು ಬಂಗಾಳದಲ್ಲೂ ದೊರೆಯಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

‘ಬಂಗಾಳದಲ್ಲಿ ನುಸುಳುಕೋರರಿಗೆ ಟಿಎಂಸಿ ಬೆಂಬಲ ಮತ್ತು ಪ್ರೋತ್ಸಾಹ ನೀಡುತ್ತಿದೆ. ನುಸುಳುಕೋರರನ್ನು ಎಸ್‌ಐಆರ್‌ ಗುರುತಿಸುತ್ತದೆ ಎಂಬ ಕಾರಣಕ್ಕೆ ಅದು ವಿರೋಧ ವ್ಯಕ್ತಪಡಿಸುತ್ತಿದೆ’ ಎಂದು ಅವರು ದೂರಿದರು.  

‘ಪಶ್ಚಿಮ ಬಂಗಾಳದಲ್ಲಿ ಎಡಪಕ್ಷಗಳನ್ನು ಅಧಿಕಾರದಿಂದ ಹೊರಹಾಕಿದ್ದರೂ, ಟಿಎಂಸಿ ಅವುಗಳ ದುರ್ಗುಣಗಳನ್ನು ಮೈಗೂಡಿಸಿಕೊಂಡಿದೆ’ ಎಂದು ಮೋದಿ ಕಿಡಿಕಾರಿದರು.

ದಟ್ಟ ಮಂಜು; ಇಳಿಯದ ಹೆಲಿಕಾಪ್ಟರ್‌
ನಾಡಿಯಾ ಜಿಲ್ಲೆಯ ತಾಹೆರ್‌ಪುರದಲ್ಲಿ ದಟ್ಟವಾದ ಮಂಜು ಕವಿದ ವಾತಾವರಣ ಇದ್ದ ಕಾರಣ ಪ್ರಧಾನಿ ನರೇಂದ್ರ ಮೋದಿ ಅವರಿದ್ದ ಹೆಲಿಕಾಪ್ಟರ್‌ ಕೆಳಗಿಳಿಯಲು ಸಾಧ್ಯವಾಗಲಿಲ್ಲ.   ಗೋಚರತೆ ಪ್ರಮಾಣ ಕಡಿಮೆ ಇದ್ದಿದ್ದರಿಂದ ಹೆಲಿಕಾಪ್ಟರ್‌ ಕೆಲ ಸಮಯದವರೆಗೆ ತಾತ್ಕಾಲಿಕ ಹೆಲಿಪ್ಯಾಡ್‌ ಮೈದಾನದ ಮೇಲೆ ತಿರುಗಾಡಿತು. ಕೊನೆಗೆ ‘ಯು– ಟರ್ನ್‌’ ಮಾಡಿ ಕೋಲ್ಕತ್ತ ವಿಮಾನ ನಿಲ್ದಾಣಕ್ಕೆ ತೆರಳಿತು.  ಅಲ್ಲಿಂದ ರಸ್ತೆ ಮಾರ್ಗವಾಗಿ ಹೋದರೆ ವಿಳಂಬವಾಗುತ್ತಿತ್ತು ಮತ್ತು ಪ್ರಧಾನಿ ಅವರ ದೈನಿಕ ವೇಳಾಪಟ್ಟಿಯಲ್ಲಿ ವ್ಯತ್ಯಾಸಗಳು ಉಂಟಾಗುತ್ತಿದ್ದವು. ಹೀಗಾಗಿ ವಿಮಾನ ನಿಲ್ದಾಣದ ವಿಐಪಿ ಮೊಗಸಾಲೆಯಿಂದಲೇ ವರ್ಚುವಲ್‌ ಆಗಿ ಪ್ರಧಾನಿ ಅವರು ಜನಸಮೂಹವನ್ನು ಉದ್ದೇಶಿಸಿ ಮಾತನಾಡಿದರು ಎಂದು ಮೂಲಗಳು ತಿಳಿಸಿವೆ.

ದೃಷ್ಟಿಕೋನವಿಲ್ಲದ ಭಾಷಣ: ಟಿಎಂಸಿ ಟೀಕೆ

ಧಾನಿ ನರೇಂದ್ರ ಮೋದಿ ಅವರ ಭಾಷಣದಲ್ಲಿ ದೃಷ್ಟಿಕೋನ ಮತ್ತು ಜವಾಬ್ದಾರಿಯ ಕೊರತೆ ಎದ್ದುಕಾಣುತ್ತಿತ್ತು ಎಂದು ಆಡಳಿತಾರೂಢ ಟಿಎಂಸಿ ಟೀಕಿಸಿದೆ.

ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಆಯೋಗ ಕೈಗೊಂಡಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯಿಂದ (ಎಸ್‌ಐಆರ್‌) ತೊಂದರೆಗೆ ಸಿಲುಕಿರುವ ಮತುವಾ ಸಮುದಾಯದವರ ಬಗ್ಗೆ ಮಾತನಾಡುವ ಕಾಳಜಿಯನ್ನು ಮೋದಿ ಅವರು ತೋರಲಿಲ್ಲ ಎಂದು ಅದು ಆರೋಪಿಸಿದೆ.

ಎಸ್‌ಐಆರ್‌ ನಂತರ ಮತದಾರರ ಕರಡು ಪಟ್ಟಿ ಪ್ರಕಟವಾಗಿದ್ದು ಹೆಸರುಗಳನ್ನು ಅಳಿಸುವ ಕುರಿತ ಅನಿಶ್ಚಿತತೆ ಮತುವಾ ಸಮುದಾಯದವರನ್ನು ಕಾಡುತ್ತಿದೆ. ದಶಕಗಳ ಹಿಂದೆ ಧಾರ್ಮಿಕ ಕಿರುಕುಳ ತಾಳದೆ ಬಾಂಗ್ಲಾದೇಶದಿಂದ ವಲಸೆ ಬಂದ ದಲಿತ ಹಿಂದೂ ನಿರಾಶ್ರಿತ ಸಮುದಾಯದವರೇ ಮತುವಾಗಳಾಗಿದ್ದಾರೆ. ಅವರ ಕಳವಳ ಕುರಿತು ಪ್ರಧಾನಿ ಯಾವುದೇ ಮಾತುಗಳನ್ನು ಆಡದೇ ಇರುವುದು ಬೇಸರ ತರಿಸಿದೆ ಎಂದು ಟಿಎಂಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕುನಾಲ್‌ ಘೋಷ್‌ ಹೇಳಿದ್ದಾರೆ.

ಅಲ್ಲದೆ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಬಂಗಾಳಿ ಭಾಷಿಕರ ಮೇಲೆ ನಡೆದ ಕಿರುಕುಳಗಳ ಬಗ್ಗೆಯೂ ಪ್ರಧಾನಿ ಮಾತನಾಡಿಲ್ಲ ಎಂದು ಅವರು ದೂರಿದ್ದಾರೆ.  ಪಶ್ಚಿಮ ಬಂಗಾಳಕ್ಕೆ ನರೇಗಾ ಸೇರಿದಂತೆ ವಿವಿಧ ಯೋಜನೆಗಳಡಿ ನೀಡಬೇಕಿದ್ದ ಸಹಸ್ರಾರು ಕೋಟಿ ರೂಪಾಯಿ ಅನುದಾನ ತಡೆಹಿಡಿದಿರುವುದಕ್ಕೆ ಕಾರಣವೇನು ಎಂಬುದರ ಕುರಿತು ಪ್ರಧಾನಿ ತುಟಿಬಿಚ್ಚಲಿಲ್ಲ ಎಂದು ಅವರು ಕಿಡಿಕಾರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.