ಪ್ರಧಾನಿ ನರೇಂದ್ರ ಮೋದಿ
ಪಿಟಿಐ ಚಿತ್ರ
ಕೇರಳ, ತಮಿಳುನಾಡಿನಲ್ಲಿ ದೇವಾಲಯಗಳ ವಿವಾದ ಕುರಿತಂತೆ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸುವ ಜೊತೆಗೆ ಆಡಳಿತ ಪಕ್ಷಗಳನ್ನು ಟೀಕಿಸಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ, ದಕ್ಷಿಣದ ರಾಜ್ಯಗಳಲ್ಲಿ ಚುನಾವಣೆ ದೃಷ್ಟಿಯಿಂದ ಪಕ್ಷ ಸಂಘಟನೆಗೆ ದೊಡ್ಡ ಉತ್ತೇಜನ ನೀಡಿದ್ದಾರೆ ಎಂದು ವರದಿಯಾಗಿದೆ.
ತಮಿಳುನಾಡಿನ ತಿರುಪರನ್‌ಕುಂದ್ರಂ ಬೆಟ್ಟದಲ್ಲಿರುವ ದೀಪ ಸ್ತಂಭದಲ್ಲಿ ಕಾರ್ತಿಕ ಮಾಸದಲ್ಲಿ ದೀಪ ಹಚ್ಚುವ ಕುರಿತಾದ ವಿವಾದದ ಬಗ್ಗೆ ಮಾತನಾಡಿದ ಅವರು, ಆಡಳಿತಾರೂಢ ಡಿಎಂಕೆ ಸರ್ಕಾರವು ವೋಟ್‌ಬ್ಯಾಂಕ್ ರಾಜಕಾರಣದಲ್ಲಿ ನಿರತವಾಗಿದೆ ಎಂದು ಆರೋಪಿಸಿದ್ದಾರೆ. ನಮ್ಮ ನಾಯಕರು ಭಕ್ತರ ಹಕ್ಕುಗಳಿಗಾಗಿ ಹೋರಾಟ ನಡೆಸಿದರು. ಆದರೆ, ಡಿಎಂಕೆಯು ವೋಟ್‌ಬ್ಯಾಂಕ್ ರಾಜಕಾರಣದ ಒಂದು ಅವಕಾಶವನ್ನೂ ಬಿಡುತ್ತಿಲ್ಲ ಎಂದು ಚೆಂಗಲ್ಪಟ್ಟುವಿನಲ್ಲಿ ನಡೆದ ರ್‍ಯಾಲಿಯಲ್ಲಿ ಆರೋಪಿಸಿದ್ದಾರೆ.
ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ನೇತೃತ್ವದ ಡಿಎಂಕೆಯನ್ನು ಸಿಎಂಸಿ(ಕರಪ್ಷನ್, ಮಾಫಿಯಾ ಮತ್ತು ಕ್ರೈಂ) ಪಕ್ಷ ಎಂದು ಕರೆದರು. ಡಿಎಕೆಯು ಜನರಿಗೆ ನೀಡಿದ್ದ ಭರವಸೆ ಮುರಿದಿದೆ ಎಂದೂ ದೂರಿದ್ದಾರೆ.
‘ಡಿಎಂಕೆಗೆ ನೀವು ಎರಡು ಬಾರೀ ಪೂರ್ಣ ಬಹುಮತ ನೀಡಿದ್ದೀರಿ. ಆದರೆ, ಅವರು ತಮಿಳುನಾಡು ಜನರಿಗೆ ನೀಡಿದ್ದ ಭರವಸೆ ಮುರಿದು, ವಿಶ್ವಾಸ ಕಳೆದುಕೊಂಡಿದೆ. ಚುನಾವಣೆ ಸಂದರ್ಭದಲ್ಲಿ ಜನರಿಗೆ ಹಲವು ಭರವಸೆಗಳನ್ನು ನೀಡಿದ್ದ ಡಿಎಂಕೆಯ ಕೆಲಸ ಮಾತ್ರ ಶೂನ್ಯ. ಡಿಎಂಕೆ ಸರ್ಕಾರವನ್ನು ಜನರು ಈಗ ಸಿಎಂಸಿ ಸರ್ಕಾರವೆಂದು ಕರೆಯುತ್ತಿದ್ದಾರೆ. ಸಿಎಂಸಿ ಸರ್ಕಾರವೆಂದರೆ, ಕರಪ್ಷನ್, ಮಾಫಿಯಾ ಮತ್ತು ಕ್ರೈಂ ಅನ್ನು ಉತ್ತೇಜಿಸುವ ಸರ್ಕಾರ ಎಂದರ್ಥ’ಎಂಬುದಾಗಿ ಹೇಳಿದ್ದಾರೆ.
‘ಡಿಎಂಕೆ ಮತ್ತು ಸಿಎಂಸಿ ಎರಡನ್ನೂ ತೊಡೆದುಹಾಕಲು ತಮಿಳುನಾಡಿನ ಜನ ಮನಸ್ಸು ಮಾಡಿದ್ದಾರೆ. ಬಿಜೆಪಿ–ಎನ್‌ಡಿಎ ಡಬಲ್ ಎಂಜಿನ್ ಸರ್ಕಾರ ಅಧಿಕಾರಕ್ಕೆ ಬರುವುದು ನಿಚ್ಚಳವಾಗಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಮಾದಕ ದ್ರವ್ಯ ಮತ್ತು ಅಪರಾಧಗಳ ಪಿಡುಗು ವ್ಯಾಪಕವಾಗಿದ್ದು, ಯುವಕರು ಮಾದಕ ದ್ರವ್ಯಗಳಿಗೆ ಬಲಿಯಾಗುತ್ತಿದ್ದಾರೆ. ಮಹಿಳೆಯರು ಅಪರಾಧ ಪ್ರಕರಣಗಳಿಂದ ಬಳಲುತ್ತಿದ್ದಾರೆ ಎಂದು ಅವರು ಹೇಳಿದರು.
ದಿವಂಗತ ಮುಖ್ಯಮಂತ್ರಿ ಜಯಲಲಿತಾ ಅವರನ್ನು ಸ್ಮರಿಸಿದ ಮೋದಿ, ‘ತಮಿಳುನಾಡಿನಲ್ಲಿ ಅಪರಾಧಗಳನ್ನು ನಿಯಂತ್ರಿಸುವಲ್ಲಿ ಸೆಲ್ವಿ ಜೆ. ಜಯಲಲಿತಾ ಉತ್ತಮ ಕೆಲಸ ಮಾಡಿದ್ದರು. ಆದರೆ, ಇಂದು ಮಹಿಳೆಯರು ಬಳಲುತ್ತಿದ್ದಾರೆ’ಎಂದು ಟೀಕಿಸಿದರು.
ಡಿಎಂಕೆ ಸರ್ಕಾರವು ಪ್ರಜಾಪ್ರಭುತ್ವ ಮತ್ತು ಹೊಣೆಗಾರಿಕೆಯೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ. ಕೇವಲ ಒಂದು ಕುಟುಂಬಕ್ಕಾಗಿ ಮಾತ್ರ ಕಾರ್ಯನಿರ್ವಹಿಸುತ್ತದೆ ಎಂದು ಅವರು ದೂರಿದರು.
ರಾಜ್ಯದಲ್ಲಿ ಭ್ರಷ್ಟಾಚಾರ ಎಷ್ಟು ನಡೆಯುತ್ತಿದೆ ಮತ್ತು ಹಣ ಯಾರ ಜೇಬಿಗೆ ತಲುಪುತ್ತದೆ ಎಂದು ರಾಜ್ಯದ ಒಂದು ಮಗುವಿಗೂ ತಿಳಿದಿದೆ ಎಂದಿದ್ದಾರೆ.
‘ನಾವು ತಮಿಳುನಾಡನ್ನು ಡಿಎಂಕೆ ಹಿಡಿತದಿಂದ ಮುಕ್ತಗೊಳಿಸಬೇಕು’ ಎಂದ ಅವರು, ತಮಿಳುನಾಡಿನ ಬೆಳವಣಿಗೆ ಮತ್ತು ಪ್ರಗತಿಗಾಗಿ ಕೇಂದ್ರದೊಂದಿಗೆ ಭುಜಕ್ಕೆ ಭುಜ ಕೊಟ್ಟು ನಡೆಯುವ ಡಬಲ್ ಎಂಜಿನ್ ಸರ್ಕಾರ ಬರಲಿದೆ ಎಂದರು.
ಶಬರಿಮಲೆ ಚಿನ್ನ ಕಳವು ಪ್ರಕರಣದ ತನಿಖೆ ಭರವಸೆ
ಮುಂಬರುವ ಕೇರಳ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವು ಅಧಿಕಾರಕ್ಕೆ ಬಂದರೆ, ಶಬರಿಮಲೆ ಚಿನ್ನಕಳವು ಪ್ರಕರಣದಲ್ಲಿ ತನಿಖೆ ನಡೆಸಿ, ತಪ್ಪಿತಸ್ಥರನ್ನು ಜೈಲಿಗೆ ಅಟ್ಟುವೆವು ಎಂದು ತಮಿಳುನಾಡು ಭೇಟಿಗೂ ಮುನ್ನ ಕೇರಳದಲ್ಲಿ ನಡೆದ ರ್‍ಯಾಲಿಯಲ್ಲಿ ಮೋದಿ ಭರವಸೆ ನೀಡಿದರು.
‘ಇದು ಮೋದಿ ಗ್ಯಾರಂಟಿ’ಎಂದು ಪ್ರಧಾನ ಮಂತ್ರಿ ಹೇಳಿದರು.
ಕೇರಳದಲ್ಲಿ ರಾಜಕೀಯ ಬಿರುಗಾಳಿಯಾಗಿ ಮಾರ್ಪಟ್ಟಿರುವ ಶಬರಿಮಲೆ ಚಿನ್ನ ಕಳ್ಳತನ ಪ್ರಕರಣವು ವಿವಾದಕ್ಕೆ ಕಾರಣವಾಗಿದೆ. ಗರ್ಭಗುಡಿಯ ಬಾಗಿಲಿನ ಚೌಕಟ್ಟುಗಳು ಮತ್ತು ದೇವಾಲಯದ ದ್ವಾರವನ್ನು(ರಕ್ಷಕ ವಿಗ್ರಹಗಳು) ಆವರಿಸಿರುವ ತಟ್ಟೆಗಳಿಂದ ಚಿನ್ನವನ್ನು ಕಳವು ಆರೋಪಕ್ಕೆ ಸಂಬಂಧಿಸಿದ ಈ ಪ್ರಕರಣವನ್ನು ರಾಜ್ಯ ಹೈಕೋರ್ಟ್‌ನ ಆದೇಶದ ಮೇರೆಗೆ ಕೇರಳ ಪೊಲೀಸರ ವಿಶೇಷ ತನಿಖಾ ತಂಡ ತನಿಖೆ ನಡೆಸುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.