ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು ಅವರು ಪ್ರಧಾನಿ ಮೋದಿ ಅವರನ್ನು ಸನ್ಮಾನಿಸಿದರು
–ಪಿಟಿಐ ಚಿತ್ರ
ಇಟಾನಗರ: ಕಷ್ಟಕರವಾದ ಅಭಿವೃದ್ದಿ ಯೋಜನೆಗಳನ್ನು ಕೈಬಿಡುವುದು ಕಾಂಗ್ರೆಸ್‌ನ ‘ಹುಟ್ಟು ಗುಣ’ವಾಗಿದ್ದು, ಇದು ಈಶಾನ್ಯದ ರಾಜ್ಯಗಳಿಗೆ ಭಾರಿ ಹಾನಿ ಉಂಟುಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಆರೋಪಿಸಿದರು.
ಅರುಣಾಚಲ ಪ್ರದೇಶದ ಇಟಾನಗರದಲ್ಲಿ ₹5,100 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಬಳಿಕ ರ್‍ಯಾಲಿಯಲ್ಲಿ ಮಾತನಾಡಿದ ಅವರು, ‘ಜಿಎಸ್‌ಟಿ ದರಗಳಲ್ಲಿನ ಪರಿಷ್ಕರಣೆಯು ನವರಾತ್ರಿ ಸಮಯದಲ್ಲಿ ಜನರಿಗೆ ‘ಡಬಲ್ ಸಂಭ್ರಮ’ ತಂದಿದೆ’ ಎಂದು ಹೇಳಿದರು.
‘ದೆಹಲಿಯಲ್ಲಿ ಕುಳಿತು ಈಶಾನ್ಯ ಭಾರತವನ್ನು ಅಭಿವೃದ್ಧಿಪಡಿಸಲು ಸಾಧ್ಯವಿಲ್ಲ ಎಂಬುದು ನನಗೆ ತಿಳಿದಿತ್ತು. ಆದ್ದರಿಂದಲೇ ಸಚಿವರು ಮತ್ತು ಅಧಿಕಾರಿಗಳನ್ನು ಈ ಪ್ರದೇಶಕ್ಕೆ ಹೆಚ್ಚಾಗಿ ಕಳುಹಿಸಿದ್ದೇನೆ. ನಾನೇ ಸ್ವತಃ ಈ ಭಾಗಕ್ಕೆ 70ಕ್ಕೂ ಹೆಚ್ಚು ಬಾರಿ ಬಂದಿದ್ದೇನೆ’ ಎಂದರು.
‘ಕಳೆದ ವಾರ ಮಿಜೋರಾಂ, ಮಣಿಪುರ ಮತ್ತು ಅಸ್ಸಾಂಗೆ ಭೇಟಿ ನೀಡಿದ್ದೆ. ಈಶಾನ್ಯ ರಾಜ್ಯಗಳು ನಮ್ಮ ಹೃದಯದಿಂದ ದೂರವಿಲ್ಲ. ದೆಹಲಿ ಇನ್ನು ಮುಂದೆ ನಿಮ್ಮಿಂದ ದೂರವಿರುವುದಿಲ್ಲ. ನಾವು ದೆಹಲಿಯನ್ನು ನಿಮ್ಮ ಮನೆ ಬಾಗಿಲಿಗೆ ತಂದಿದ್ದೇವೆ’ ಎಂದು ಹೇಳಿದರು.
‘ಮಾಡಲು ಕಷ್ಟಕರ ಎನಿಸುವ ಅಭಿವೃದ್ಧಿ ಕಾರ್ಯಗಳನ್ನು ಎಂದಿಗೂ ಕೈಗೆತ್ತಿಕೊಳ್ಳದಿರುವುದು ಕಾಂಗ್ರೆಸ್‌ನ ಒಂದು ಸಹಜ ಗುಣವಾಗಿದೆ. ಅಂತಹ ಅಭಿವೃದ್ಧಿ ಕೆಲಸಗಳನ್ನು ಅವರು ತ್ಯಜಿಸುತ್ತಾರೆ. ಕಾಂಗ್ರೆಸ್‌ನ ಈ ಹವ್ಯಾಸವು ಅರುಣಾಚಲ ಪ್ರದೇಶ ಒಳಗೊಂಡಂತೆ ಇಡೀ ಈಶಾನ್ಯಕ್ಕೆ ಗಮನಾರ್ಹ ಹಾನಿ ಉಂಟುಮಾಡಿದೆ’ ಎಂದು ಟೀಕಿಸಿದರು.
‘ಗುಡ್ಡಗಾಡು ಮತ್ತು ಅರಣ್ಯ ಪ್ರದೇಶಗಳಲ್ಲಿ ಅಭಿವೃದ್ಧಿ ಕಾರ್ಯಗಳು ಸವಾಲಿನದ್ದಾಗಿರುತ್ತವೆ. ಕಾಂಗ್ರೆಸ್ ಪಕ್ಷವು ಆ ಪ್ರದೇಶಗಳನ್ನು ಹಿಂದುಳಿದ ಪ್ರದೇಶಗಳೆಂದು ಘೋಷಿಸಿ ಮರೆತುಬಿಡುತ್ತದೆ’ ಎಂದು ಆರೋಪಿಸಿದರು.
ಒಂದು ಕಾಲದಲ್ಲಿ ರಸ್ತೆ ನಿರ್ಮಾಣ ಅಸಾಧ್ಯವೆಂದೇ ಭಾವಿಸಲಾಗಿದ್ದ ಪ್ರದೇಶಗಳಲ್ಲಿ ಈಗ ಆಧುನಿಕ ಹೆದ್ದಾರಿಗಳನ್ನು ನಿರ್ಮಿಸಲಾಗಿದೆ ಎಂದು ಪ್ರಧಾನಿ ಹೇಳಿದರು.
‘ಕೆಲ ವರ್ಷಗಳ ಹಿಂದೆ ಯೋಚಿಸಲೂ ಅಸಾಧ್ಯವಾಗಿದ್ದ ಸೆಲಾ ಸುರಂಗವು ಈಗ ಅರುಣಾಚಲ ಪ್ರದೇಶದ ಹೆಗ್ಗುರುತು ಆಗಿದೆ. ಹೊಲೋಂಗಿ ವಿಮಾನ ನಿಲ್ದಾಣದಲ್ಲಿ ಹೊಸ ಟರ್ಮಿನಲ್ ನಿರ್ಮಾಣವಾಗಿದ್ದು, ದೆಹಲಿಗೆ ನೇರ ವಿಮಾನ ಸಂಚಾರ ಸಾಧ್ಯವಾಗಿದೆ’ ಎಂದರು.
ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಜನರ ಮೇಲೆ ಭಾರಿ ತೆರಿಗೆಯ ಹೊರೆ ಹೇರಿತ್ತು. ಆದರೆ ನಮ್ಮ ಸರ್ಕಾರ ತೆರಿಗೆಗಳನ್ನು ಕ್ರಮೇಣ ಕಡಿಮೆ ಮಾಡಿ ಜನರ ಹೊರೆ ಇಳಿಸಿದೆನರೇಂದ್ರ ಮೋದಿ ಪ್ರಧಾನಿ
ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಯು ಅರುಣಾಚಲ ಪ್ರದೇಶಕ್ಕೆ ‘ಐತಿಹಾಸಿಕ ದಿನ’ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಬಣ್ಣಿಸಿದ್ದಾರೆ. ಪ್ರಧಾನಿ ಜತೆ ರ‍್ಯಾಲಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ನವರಾತ್ರಿಯ ಶುಭ ಸಂದರ್ಭದಲ್ಲಿ ಪ್ರಧಾನಿ ಅವರಿಗೆ ಆತಿಥ್ಯ ವಹಿಸಲು ಸಾಧ್ಯವಾಗಿರುವುದಕ್ಕೆ ರಾಜ್ಯವು ಹೆಮ್ಮೆ ಪಡುತ್ತದೆ ಎಂದು ಹೇಳಿದರು. ‘ಮೋದಿ ಅವರು ಆಗಾಗ್ಗೆ ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿದ್ದರಿಂದ ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ವೇಗ ಪಡೆದುಕೊಂಡಿವೆ ಮತ್ತು ಜನರ ಮನೋಸ್ಥೈರ್ಯ ಹೆಚ್ಚಿಸಿವೆ’ ಎಂದರು. ‘ಮೋದಿ ಅವರು ಪ್ರತಿಯೊಂದು ಭೇಟಿಯ ಸಂದರ್ಭದಲ್ಲೂ ಅಭಿವೃದ್ಧಿಯ ಹೊಸ ಉಡುಗೊರೆಗಳನ್ನು ತರುತ್ತಾರೆ. ಈ ಬಾರಿ ಕೂಡ ಹಲವಾರು ಪ್ರಮುಖ ಯೋಜನೆಗಳಿಗೆ ಚಾಲನೆ ನೀಡಿದ್ದು ಹೊಸ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ’ ಎಂದು ತಿಳಿಸಿದರು.
ಪ್ರಧಾನಿ ಹೇಳಿಕೆಗೆ ಕಾಂಗ್ರೆಸ್ ತಿರುಗೇಟು ನೀಡಿದ್ದು ‘ಸರ್ಕಾರದ ಅಧಿಕೃತ ಕಾರ್ಯಕ್ರಮವನ್ನು ಬಿಜೆಪಿಯು ಚುನಾವಣಾ ಪ್ರಚಾರದ ಕಾರ್ಯಕ್ರಮವಾಗಿ ಪರಿವರ್ತಿಸಿದೆ’ ಎಂದು ಟೀಕಿಸಿದೆ. ‘ನಿರುದ್ಯೋಗ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದ ಸಮಸ್ಯೆಗಳು ಪ್ರವಾಹ ನಿಯಂತ್ರಣ ವಿಪತ್ತು ನಿರ್ವಹಣೆ ಹಾಗೂ ಚೀನಾದ ಆಕ್ರಮಣ ಸೇರಿದಂತೆ ಅರುಣಾಚಲ ಪ್ರದೇಶ ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳನ್ನು ಪ್ರಧಾನಿ ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ’ ಎಂದು ಅರುಣಾಚಲ ಪ್ರದೇಶ ಕಾಂಗ್ರೆಸ್ ಸಮಿತಿ ದೂರಿದೆ. ‘ಪ್ರಧಾನಿ ರ್‍ಯಾಲಿಗೆ ಸಾರ್ವಜನಿಕರ ಕೋಟ್ಯಂತರ ರೂಪಾಯಿ ಖರ್ಚು ಮಾಡಲಾಗಿದೆ. ಸರ್ಕಾರಿ ನೌಕರರನ್ನು ಕಡ್ಡಾಯವಾಗಿ ಪಾಲ್ಗೊಳ್ಳುವಂತೆ ಸೂಚಿಸಲಾಗಿದೆ. ಸಾವಿರಾರು ದಿನಗೂಲಿ ನೌಕರರನ್ನು ಕರೆತಂದು ಮೈದಾನದಲ್ಲಿ ಹೆಚ್ಚಿನ ಜನ ಸೇರಿದಂತೆ ಬಿಂಬಿಸಲಾಗಿದೆ’ ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.