
ನವದೆಹಲಿ: ‘ಭಾರತವು ರಷ್ಯಾದಿಂದ ಕಚ್ಚಾತೈಲ ಖರೀದಿಸುವುದನ್ನು ನಿಲ್ಲಿಸಲಿದೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುನರುಚ್ಚರಿಸಿದ್ದನ್ನು ಉಲ್ಲೇಖಿಸಿ, ಕಾಂಗ್ರೆಸ್ ಪಕ್ಷ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭಾನುವಾರ ಕುಟುಕಿದೆ.
‘ಕ್ವಾಲಾಲಂಪುರದಲ್ಲಿ ನಡೆಯುತ್ತಿರುವ ಆಸಿಯಾನ್ ಶೃಂಗಸಭೆಯಲ್ಲಿ ಮೋದಿ ಅವರ ‘ಅಪ್ಪುಗೆ ರಾಜತಾಂತ್ರಿಕತೆ’ (ಹಗ್‌ಲೊಮಸಿ) ಫಲ ನೀಡದಿದ್ದರೂ ಅಚ್ಚರಿ ಇಲ್ಲ’ ಎಂದು ಹೇಳಿದೆ.
ಈ ಶೃಂಗಸಭೆಯಲ್ಲಿ ಪಾಲ್ಗೊಳ್ಳುವುದಕ್ಕಾಗಿ ಕ್ವಾಲಾಲಂಪುರಕ್ಕೆ ಪ್ರಯಾಣಿಸುವ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ್ದ ಟ್ರಂಪ್, ‘ರಷ್ಯಾದಿಂದ ಕಚ್ಚಾತೈಲ ಖರೀದಿಸುವುದನ್ನು ಭಾರತ ಸಂಪೂರ್ಣವಾಗಿ ನಿಲ್ಲಿಸಲಿದೆ’ ಎಂದು ಹೇಳಿದ್ದರು. ಈಗ ಇದೇ ವಿಚಾರ ಮುಂದಿಟ್ಟುಕೊಂಡು ಕಾಂಗ್ರೆಸ್ ಪಕ್ಷ ಮೋದಿ ವಿರುದ್ಧ ಚಾಟಿ ಬೀಸಿದೆ.
‘ಭಾರತವು ರಷ್ಯಾದಿಂದ ಕಚ್ಚಾತೈಲ ಖರೀದಿಸುವುದನ್ನು ನಿಲ್ಲಿಸಲಿದೆ ಎಂದು ಟ್ರಂಪ್ ಪುನರುಚ್ಚರಿಸಿದ್ದಾರೆ. ಈ ಮಾತನ್ನು ಅವರು ಆರನೇ ಬಾರಿ ಹೇಳಿದ್ದಾರೆ. ಈಗ, ಭಾರತವು ರಷ್ಯಾದಿಂದ ಕಚ್ಚಾತೈಲ ಆಮದನ್ನು ಸಂಪೂರ್ಣ ನಿಲ್ಲಿಸಲಿದೆ ಎಂಬುದಾಗಿ ಕ್ವಾಲಾಲಂಪುರಕ್ಕೆ ತೆರಳುವಾಗ ಹೇಳಿದ್ದಾರೆ’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಟೀಕಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಟ್ರಂಪ್ ಅವರು ಈ ಮಾತು ಹೇಳುತ್ತಿರುವ ವಿಡಿಯೊವನ್ನು ಜೈರಾಮ್ ರಮೇಶ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.