ADVERTISEMENT

ಮೇ 30– ಜೂನ್ 14ವರೆಗೆ ಬಿಜೆಪಿಯಿಂದ ಬೃಹತ್‌ ಪ್ರಚಾರಾಂದೋಲನ

ಪ್ರಧಾನಿ ಮೋದಿ ನೇತೃತ್ವದ ಸರ್ಕಾರಕ್ಕೆ 8 ವರ್ಷ

ಪಿಟಿಐ
Published 28 ಮೇ 2022, 13:10 IST
Last Updated 28 ಮೇ 2022, 13:10 IST
ಅರುಣ್‌ ಸಿಂಗ್
ಅರುಣ್‌ ಸಿಂಗ್   

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ 8ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಬಿಜೆಪಿಯು ಮೇ 30ರಿಂದ ಜೂನ್‌ 14ರ ವರೆಗೆ ದೇಶದಾದ್ಯಂತ ಬೃಹತ್‌ ಪ್ರಚಾರಾಂದೋಲನ ಹಮ್ಮಿಕೊಂಡಿದೆ.

‘ಕೇಂದ್ರದ ಎಲ್ಲ ಸಚಿವರು, ಬಿಜೆಪಿ ನೇತೃತ್ವದ ರಾಜ್ಯಗಳ ಮಂತ್ರಿಗಳು, ಪಕ್ಷದ ಚುನಾಯಿತ ಪ್ರತಿನಿಧಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಬಡವರ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಯೋಜನೆಗಳು ಹಾಗೂ ಉತ್ತಮ ಆಡಳಿತದ ಬಗ್ಗೆ ಜನರಿಗೆ ಮಾಹಿತಿ ನೀಡುವರು’ ಎಂದುಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್‌ ಸಿಂಗ್ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಕೋವಿಡ್‌ನಿಂದಾಗಿ ಅನಾಥರಾಗಿರುವ ಮಕ್ಕಳಿಗೆ ಪ್ರಧಾನಿ ಮೋದಿ ಅವರು ಮೇ 30ರಂದು ಪರಿಹಾರಧನದ ಚೆಕ್‌ಗಳನ್ನು ವಿತರಿಸುವರು. ಅವರಿಗೆ ವಿದ್ಯಾರ್ಥಿವೇತನವನ್ನು ಅದೇ ದಿನ ಘೋಷಿಸುವರು’ ಎಂದು ತಿಳಿಸಿದರು.

ADVERTISEMENT

‘ಸೇವೆ, ಉತ್ತಮ ಆಡಳಿತ, ಬಡವರ ಕಲ್ಯಾಣಕ್ಕಾಗಿ ಜಾರಿಗೊಳಿಸಿರುವ ಕಾರ್ಯಕ್ರಮಗಳು ಮೋದಿ ನೇತೃತ್ವದ ಸರ್ಕಾರದ ಆದ್ಯತೆಗಳಾಗಿವೆ. ಈ ಬಗ್ಗೆ ದೇಶದ ಪ್ರತಿ ಪ್ರಜೆಗೂ ಮಾಹಿತಿ ನೀಡಲು ಪ್ರಚಾರಾಂದೋಲನ ವೇಳೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಇದಕ್ಕಾಗಿ ಈ ಅವಧಿಯಲ್ಲಿ ಬೂತ್‌ನಿಂದ ರಾಷ್ಟ್ರ ಮಟ್ಟದ ವರೆಗೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಕೇಂದ್ರದ ಹಾಗೂ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರಗಳ ಸಚಿವರು ಗ್ರಾಮಗಳಿಗೆ ಭೇಟಿ ನೀಡುವರು’ ಎಂದೂ ಹೇಳಿದರು.

‘ರೈತರು, ಮಹಿಳೆಯರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಒಬಿಸಿ ಹಾಗೂ ಅಲ್ಪಸಂಖ್ಯಾತರು ಸೇರಿದಂತೆ ಪ್ರತಿ ವರ್ಗಕ್ಕೂ ಒಂದು ದಿನ ಮೀಸಲಿರಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.